ಪುತ್ತೂರು: ವೀರಮಂಗಲದ ಆನಾಜೆ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ಆನಾಜೆ ವೀರಮಂಗಲ ಇವರ ಸಹಕಾರದೊಂದಿಗೆ 23ನೇ ವರ್ಷದ ಸಾರ್ವಜನಿಕ ಶ್ರೀಶನೈಶ್ಚರ ಪೂಜೆಯ ಅಂಗವಾಗಿ ಕ್ರೀಡಾ ಸಂಭ್ರಮವು ನ.26ರಂದು ವೀರಮಂಗಲ ಪಿ.ಎಂ.ಶ್ರೀ ಸ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಕ್ರೀಡಾ ಕೂಟಗಳ ಉದ್ಘಾಟನೆಯನ್ನು ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು, ಆನಾಜೆ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ಅಧ್ಯಕ್ಷರಾಗಿರುವ ಬೆಳಿಯಪ್ಪ ಗೌಡ ವಿ. ಪೆಲತ್ತಡಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ನಂತರ ನಡೆದ ಕ್ರೀಡಾ ಸಂಭ್ರಮದಲ್ಲಿ ಪ್ರಾಥಮಿಕ ಶಾಲಾ ಕಿರಿಯ ವಿದ್ಯಾರ್ಥಿಗಳಿಗೆ ಅಭಿನಯ ಗೀತೆ, ಕೆರೆದಡ, ಹಿರಿಯ ವಿದ್ಯಾರ್ಥಿಗಳಿಗೆ ಅದೃಷ್ಟದ ಆಟ, ಪಾಸಿಂಗ್ ಬಾಲ್, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಮರಣ ಶಕ್ತಿ, ಭಕ್ತಿಗೀತೆ, ಮಹಿಳೆಯರಿಗೆ ಹಗ್ಗಜಗ್ಗಾಟ, ಗುಂಡೆಸೆತ ಸ್ಪರ್ಧೆಗಳು ಹಾಗೂ ಪುರುಷರಿಗೆ ವಾಲಿಬಾಲ್ ಪಂದ್ಯಾಟ ಮತ್ತು ಕಬಡ್ಡಿ ಪಂದ್ಯಾಟಗಳು ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ಇಂದಿರಾನಗರ ಮಾತನಾಡಿ, ಕ್ರೀಡೆಯು ಮನುಷ್ಯಗೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾಗಿದೆ. ಸಂಜೆಯ ವೇಳೆ ನಿರಂತರವಾಗಿ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ವ್ಯಸನಮುಕ್ತವಾಗಲು ಕ್ರೀಡೆಯು ಸಹಕಾರಿಯಾಗಲಿದೆ. ವ್ಯಸನ ಮುಕ್ತ ಸಮಾಜ, ಮುಕ್ತ ತ್ಯಾಜ್ಯಮುಕ್ತ ಪರಿಸರ ನಿರ್ಮಾಣವಾಗಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಪಿ.ಎಂ ಪಾಲ್ತಾಡು ಮಾತನಾಡಿ, ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳಿಗೆ ಶಿಕ್ಷಣದಷ್ಟೇ ಕ್ರೀಡೆಯು ಬಹುಮುಖ್ಯ. ಕಬಡ್ಡಿಯಲ್ಲಿ ವೀರಮಂಗಲದ ಶಶಾಂಕ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ವೀರಮಂಗಲದ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಮಂಗಲ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಪ್ರಾರಂಭಗೊಂಡ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನ ಕಳೆದ 23 ವರ್ಷಗಳಿಂದ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ಜನರ ಸಹಕಾರದಿಂದ ಉತ್ತಮ ರೀತಿಯಲ್ಲಿ ಬೆಳೆಯುತ್ತಿರುವ ಪ್ರತಿಷ್ಠಾನವು ಕಲೆ,ಕ್ರೀಡೆ, ಸಾಂಸ್ಕೃತಿಕವಾಗಿ ಜನರಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಿದೆ ಎಂದರು.
ವೀರಮಂಗಲ ಶಾಲಾ ಎಸ್‌ಡಿಎಂಸಿ ಸದಸ್ಯ ಲಿಂಗಪ್ಪ ಗೌಡ, ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ರೈ, ಅಂಗನವಾಡಿ ಕಾರ್ಯಕರ್ತೆ ವಸುಧಾ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರು ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಆತ್ಮಿಕ, ರಶ್ಮಿಕಾ ಪ್ರಾರ್ಥಿಸಿದರು. ಹರ್ಷ ಗುತ್ತು ಸ್ವಾಗತಿಸಿದರು. ವಿಜಿತ್ ಆನಾಜೆ, ಚಿತೇಶ್ ವೀರಮಂಗಲ, ವಿಜಯ್ ಆನಾಜೆ, ಭವಿತ್ ಆನಾಜೆ, ಗುರುಪ್ರಸಾದ್ ಡೆಬ್ಬೆಲಿ, ಪ್ರಥಮ್ ವೀರಮಂಗಲ ಅತಿಥಿಗಳನ್ನು ತಾಂಬೂಲ ನಿಡಿ ಸ್ವಾಗತಿಸಿದರು. ಹರೀಶ್ ಆಚಾರ್ಯ ವೀರಮಂಗಲ ಬಹುಮಾನ ವಿಜೇತರ ಪಟ್ಟಿ ಓದಿದರು. ನಿರಂಜನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.