ಉಪ್ಪಿನಂಗಡಿ: ರಾಜ್ಯದ ಅಧಿಕಾರ ಬಿಜೆಪಿಯ ಬಳಿ ಇರುವಾಗ ಅನುಮೋದನೆಗೊಂಡ ರಸ್ತೆ ಕಾಮಗಾರಿಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ತಡೆ ಹಿಡಿದಿದೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಇಳಂತಿಲದ ಕಂಗಿನಾರುಬೆಟ್ಟಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್, ಬನ್ನೆಂಗಳ – ಕಂಗಿನಾರುಬೆಟ್ಟು ರಸ್ತೆ ಕಾಮಗಾರಿಗೆ ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ಬಿಜೆಪಿ ನೇತೃತ್ವದ ರಾಜ್ಯ ಸರಕಾರ ತನ್ನ ಆಡಳಿತಾವಧಿಯ ಕೊನೆಯ ಅವಧಿಯಲ್ಲಿ ಇದಕ್ಕೆ ಅನುದಾನ ಬಿಡುಗಡೆಗೊಳಿಸಿದ್ದು, ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ ಬಳಿಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದಿದ್ದು, ಆ ಬಳಿಕ ಕಾಮಗಾರಿ ಮುಂದುವರಿಯಲಿಲ್ಲ. ರಸ್ತೆ ತೀರಾ ಹದಗೆಟ್ಟಿದ್ದರಿಂದ ಈ ಭಾಗದ ಜನರು ಸಂಕಷ್ಟಪಡುವಂತಾಗಿದೆ. ಕಾಂಗ್ರೆಸ್ ಸರಕಾರ ಅಭಿವೃದ್ಧಿಗೆ ಸ್ಪಂದಿಸದೆ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ. ಮುಂದಿನ 15 ದಿನಗಳೊಳಗೆ ಕಾಮಗಾರಿ ಮುಂದುವರಿಸಬೇಕು ಎಂದರು.
ಎಪಿಎಂಸಿ ಮಾಜಿ ಸದಸ್ಯ ಜಯಾನಂದ ಕಲ್ಲಾಪು ಮಾತನಾಡಿ, ತೀರಾ ಹದಗೆಟ್ಟು ಹೋದ ರಸ್ತೆಯಲ್ಲಿ ಶಾಲಾ ಮಕ್ಕಳ ಸಹಿತ ವೃದ್ಧರು ನಡೆದಾಡಲು ಅಸಾಧ್ಯವಾಗಿದ್ದು, ಬಾಡಿಗೆ ವಾಹನ ಚಾಲಕರು ಅತ್ತ ಬರಲು ಒಪ್ಪುತ್ತಿಲ್ಲ. ಶಾಸಕರು ಅನುದಾನ ಬಿಡುಗಡೆಗೊಳಿಸಿ ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಸಿದ ಬಳಿಕ ಕಾಮಗಾರಿಯನ್ನು ಇಲ್ಲಿ ತಡೆಹಿಡಿಯಲಾಗಿದ್ದು, ಈ ಕುರಿತು ಶಾಸಕರನ್ನು ಸಂಪರ್ಕಿಸಿ ಮನವರಿಕೆ ಮಾಡುವ ಭರವಸೆ ನೀಡಿದರು.
ಇಳಂತಿಲ ಗ್ರಾ.ಪಂ. ಅಧ್ಯಕ್ಷ ಮಾತನಾಡಿ, ತಕ್ಷಣವೇ ಇಲ್ಲಿನವರ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ವಸಂತ, ರಾಜೇಶ, ಮಂಜುನಾಥ, ಜಯಂತ, ರಾಘವೇಂದ್ರ, ನಾಗರಾಜ, ಪುರುಷೋತ್ತಮ, ರವಿಚಂದ್ರ, ಧನಂಜಯ, ಯತೀಶ, ಆನಂದ, ಬೇಬಿ, ಉಗ್ಗಪ್ಪ ಮತ್ತಿತರರು ಇದ್ದರು.