ಎಸ್‌ ವೈ ಎಸ್‌ ಗೆ 30ರ ಹರೆಯ-ನ.30 ರಂದು ಉಪ್ಪಿನಂಗಡಿಯಲ್ಲಿ ಯುವಜನೋತ್ಸವ

0

ಪುತ್ತೂರು: ಯುವ ಸಮೂಹ ತಮ್ಮ ಯುವತ್ವವನ್ನು ವಿನಾಶಕಾರಿ ಕೃತ್ಯಗಳಲ್ಲಿ ವ್ಯರ್ಥಮಾಡದಂತೆ ತಡೆಯಲು ಮತ್ತು ಯುವ ಶಕ್ತಿಯನ್ನು ಸಮಾಜೋಪಯೋಗಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ತರಬೇತಿ ನೀಡಿ ಅವರನ್ನು ಪಕ್ವಗೊಳಿಸುವ ಸಲುವಾಗಿ 3 ದಶಕಗಳ ಹಿಂದೆ ಕನ್ನಡದ ಮಣ್ಣಲ್ಲಿ ರೂಪುಗೊಂಡ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬ ಘೋಷವಾಕ್ಯದೊಂದಿಗೆ ವೈವಿಧ್ಯಮಯ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 30ನೇ ವರ್ಷಾಚರಣೆಗೆ ಸಜ್ಜಾಗಿದೆ. ಇದರ ಪ್ರಚಾರಾರ್ಥ ನ.30ರಂದು ಉಪ್ಪಿನಂಗಡಿ ಎಂ ಹೆಚ್‌ ಅಡಿಟೋರಿಯಂ ಮುಂಭಾಗದಲ್ಲಿ ಸುನ್ನಿ ಸಮಾವೇಶ “ಯುವಜನೋತ್ಸವ” ನಡೆಯಲಿದೆ ಎಂದು ಅಬ್ದುಲ್‌ ಅಝೀಝ್‌ ಮಿಸ್ಬಾಹಿ ಈಶ್ವರಮಂಗಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬದುಕಿನ ಅತ್ಯಮೂಲ್ಯ ಹಂತದಲ್ಲಿರುವ ಯುವಕರು ಧರ್ಮಬದ್ಧ, ನೀತಿವಂತ, ಸಮಾಜಸೇವಕ, ದೇಶಪ್ರೇಮಿಗಳಾಗಿ ಸಾರ್ಥಕ ಬದುಕು ಸಾಗಿಸಲು ಮಾರ್ಗದರ್ಶನ ನೀಡುವುದನ್ನು ಗುರಿಯಾಗಿಸಿಟ್ಟುಕೊಂಡಿರುವ ಎಸ್‌ ವೈ ಎಸ್‌ ನ ಈ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಅಬ್ದುಲ್‌ ವಹ್ಹಾಬ್‌ ಸಖಾಫಿ ಮಂಬಾಡ್‌ ಮುಖ್ಯಪ್ರಭಾಷಣ ನೀಡಲಿದ್ದಾರೆ. ಇದಲ್ಲದೇ ಉಲಮಾ ಸಾದಾತುಗಳು, ರಾಜಕೀಯ, ಸಾಮಾಜಿಕ ನೇತಾರರು ಈ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಸಮಾವೇಶಕ್ಕೂ ಮುನ್ನ ಸಂದೇಶ ರ‍್ಯಾಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಎಸ್‌ ವೈ ಎಸ್‌ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ನಾನಾ ವಿಧದ ಕಾರ್ಯಕ್ರಮಗಳೊಂದಿಗೆ ಕ್ರಿಯಾಶೀಲವಾಗಿ ಬೆಳೆದು ಬಂದಿದ್ದು, 2024 ಜನವರಿ 24 ರಂದು 3 ದಶಕಗಳನ್ನು ಪೂರೈಸಿದ ಸವಿನೆನಪಿಗಾಗಿ ಮಂಗಳೂರಿನಲ್ಲಿ ಬೃಹತ್‌ ಮಹಾಸಮ್ಮೇಳನ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್‌ ಕರೀಮ್‌ ಹಾಜಿ ಚೆನ್ನಾರ್‌, ಮುಸ್ತಫಾ ಕೋಡಪದವು, ಸ್ವಾಲಿಹ್‌ ಮುರ ಮತ್ತು ಸಲೀಂ ಕನ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here