ವಿಟ್ಲಮುಡ್ನೂರು ಬೇರಿಕೆ ಓಟೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

0

ಸರಕಾರದ ಯೋಜನೆಯ ಬಗ್ಗೆ ಬಿಜೆಪಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು: ಶಾಸಕ ಅಶೋಕ್ ರೈ

ಪುತ್ತೂರು: ರಾಜ್ಯದ ಕಾಂಗ್ರೆಸ್ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಅದರ ಬಗ್ಗೆ ವಿರೋಧ ಪಕ್ಷಗಳು ಭಾರೀ ಟೀಕೆಗಳನ್ನೇ ಮಾಡಿತ್ತು, ಜನರನ್ನು ಮೋಸಗೊಳಿಸುವ ಯೋಜನೆ ಇದು ಕಾರ್ಯರೂಪಕ್ಕೆ ಬರುವುದೇ ಇಲ್ಲ ಎಂದು ಹೇಳಿದ್ದರು. ಆದರೆ ಸರಕಾರ ಆಡಳಿತಕ್ಕೆ ಬಂದು ಒಂದೇ ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಆದರೆ ಬಿಜೆಪಿ ಮಾತ್ರ ಈ ಯೋಜನೆ ನಿಲ್ಲುತ್ತದೆ ಎಂದು ಅಪಪ್ರಚಾರ ಮತ್ತು ಸುಳ್ಳನ್ನು ಜನರ ನಡುವೆ ಬಿತ್ತರಿಸುತ್ತಿದೆ. ಈ ಕೆಲಸವನ್ನು ಅವರು ನಿಲ್ಲಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಮುಡ್ನೂರು ಗ್ರಾಮದ ಬೇರಿಕೆ ಓಟೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆ ಮಾಡಿದ್ದರಿಂದ ಈ ಬಾರಿ ರಸ್ತೆಗೆ ಸೇರಿದಂತೆ ಇತರೆ ಯಾವುದೇ ಕಾಮಗಾರಿಗೆ ಅನುದಾನ ನೀಡುವುದಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡಿದ್ದರು. ಆದರೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಬಳಿಕ ಇತರೆ ಕಾಮಗಾರಿಗಳಿಗೂ ಅನುದಾನವನ್ನು ನೀಡುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 40 ಮಿಕ್ಕಿ ಗ್ರಾಮೀಣ ರಸ್ತೆಗಳಿಗೆ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ವಿರೋಧ ಪಕ್ಷದವರ ಸುಳ್ಳು ಪ್ರಚಾರಕ್ಕೆ ಪ್ರತ್ಯುತ್ತರವನ್ನು ನೀಡಿದೆ. ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಸರಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದು. ರಾಜ್ಯದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಯಾಗಿತ್ತು. ರಾಜ್ಯದ ಜನತೆ ಸುಭದ್ರ ಸರಕಾರವನ್ನು ಬಯಸಿದ್ದರು, ಅದಕ್ಕಾಗಿ ಕಾಂಗ್ರೆಸ್ ಅಭೂತಪೂರ್ವ ಜಯವನ್ನು ಗಳಿಸಿತ್ತು ಎಂದು ಶಾಸಕರು ಹೇಳಿದರು.

ಅಭಿವೃದ್ದಿ ಜೊತೆ ಕೈಜೋಡಿಸಿ ನಾನು ಶಾಸಕನಾದ ಬಳಿಕ ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ, ಶಾಸಕನಾಗಿ ರಾಜಧರ್ಮವನ್ನು ಪಾಲನೆ ಮಾಡುತ್ತಿದ್ದೇನೆ. ನಾನು ಕ್ಷೇತ್ರದ ಎಲ್ಲಾ ಜನರ ಶಾಸಕನಾಗಿ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಅಭಿವೃದ್ದಿ ಮತ್ತು ನೆಮ್ಮದಿಯ ವಾತಾವರಣದ ಸೃಷ್ಟಿಯೇ ನನ್ನ ಗುರಿಯಾಗಿದೆ ಎಂದು ಹೇಳಿದರು.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಮಾತನಾಡಿ ವಿಟ್ಲ ಮುಡ್ನೂರು ಗ್ರಾಮದ ಬೇರಿಕೆ ಓಟೆ ರಸ್ತೆಕಾಮಗಾರಿ ಇಲ್ಲಿನ ಜನತೆಯ ಬಹುಕಾಲದ ಬೇಡಿಕೆಯಾಗಿತ್ತು. ಈ ಬರಿ ಅದು ಈಡೇರಿದೆ. ಅಶೋಕ್ ರೈ ಶಾಸಕರಾದ ಬಳಿಕ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲದೆ ಭ್ರಷ್ಟಾಚಾರ ಮುಕ್ತ ಕ್ಷೇತ್ರವಾಗಿ ಮುಂದುವರೆಯುತ್ತಿರುವುದು ಜನ ಸಾಮಾನ್ಯರಲ್ಲಿ ನೆಮ್ಮದಿಗೆ ಕಾರಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ, ಬೂತ್ ಅಧ್ಯಕ್ಷರಾದ ನವೀನ್ ಗೌಡ, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಹೊನ್ನಪ್ಪ ನಾಯ್ಕ, ಮಹೇಶ್ ಗೌಡ ಓಟೆ, ವಿಶ್ವನಾಥ ಪೂಜಾರಿ, ಚೆನ್ನಪ್ಪ ಗೌಡ, ಲೋಹಿತ್‌ ಪೂಜಾರಿ, ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ರವೀಂದ್ರ ಶೆಟ್ಟಿ ಸೇನರಮಜಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here