ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಪುತ್ತೂರು: ಹನುಮಗಿರಿ -ಶಾಂತದುರ್ಗಾ ಸಂಪರ್ಕ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಕುರಿತು ಗುತ್ತಿಗೆದಾರ ವಿರುದ್ಧ ಸದಸ್ಯರ ಅಕ್ರೋಶ ವ್ಯಕ್ತಪಡಿಸಿದ ಘಟನೆ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. ತಿಂಗಳೊಳಗೆ ಕಾಮಗಾರಿ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ ರವರ ಅಧ್ಯಕ್ಷತೆಯಲ್ಲಿ ನ.26 ರಂದು ನಡೆಯಿತು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ  ಹನುಮಗಿರಿ – ಶಾಂತದುರ್ಗಾ  ಧಾರ್ಮಿಕ ಕೇಂದ್ರ ಸಂಪರ್ಕ ರಸ್ತೆ ಅಭಿವೃದ್ಧಿ 8 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದೆ.ಕೆಲವೊಂದು ಭಾಗದಲ್ಲಿ ರಸ್ತೆಯ ಡಾಮರು ಮಾಯವಾಗಿದೆ. ಸಜಂಕಾಡಿ ಮತ್ತು ಇನ್ನೀತರ 2 ಭಾಗದಲ್ಲಿ ತಡೆಗೋಡೆ ನಿರ್ಮಾಣ ಹಾಗೆಯೇ ಇದೆ. ಮೈಂದನಡ್ಕ – ಚೆಕ್ಕಿತ್ತಡಿ  ಕವಲು ರಸ್ತೆಗೆ ಗ್ರಾ.ಪಂ ವತಿಯಿಂದ ನಿರ್ಮಾಣಗೊಂಡಿರುವ ಮೋರಿ ತೆರವುಗೊಳಿಸಿ ಚರಂಡಿ ನಿರ್ಮಾಣ ಮಾಡಿದ್ದಾರೆ ಆ ಬಳಿಕ ಚರಂಡಿಗೆ ಮೋರಿ ಅಳವಡಿಸಿ ಎರಡೂ ಭಾಗದಲ್ಲಿ ಕಟ್ಟೆ ನಿರ್ಮಾಣ ಮಾಡದೆ ಮಳೆಗಾಲದಲ್ಲಿ ರಸ್ತೆ ನೀರು ಚರಂಡಿಗೆ ಹರಿದು ರಸ್ತೆ ಡಾಮರು ಕೊಚ್ಚಿಕೊಂಡು ಹೋಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ. ಗುತ್ತಿಗೆದಾರರಿಗೆ ಕರೆ ಮಾಡುವಾಗ ಕರೆ ಸ್ವೀಕರಿಸುತ್ತಿಲ್ಲ. ಎಂದು ಸದಸ್ಯ ಸಂತೋಷ್ ಆಳ್ವ ಗಿರಿಮನೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ವೆಂಕಟೇಶ್ ಕನ್ನಡ್ಕ, ರವಿರಾಜ ರೈ ಸಜಂಕಾಡಿ ಧ್ವನಿ ಗೂಡಿಸಿದರು.ಬಳಿಕ ಸಭೆಯಲ್ಲಿ ಚರ್ಚಿಸಿ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಿದ್ದಲ್ಲಿ ಗುತ್ತಿಗೆದಾರ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ಸರ್ವಸದಸ್ಯರ ಒಮ್ಮತದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪೆರಿಗೇರಿ – ಅಂಬಟೆಮೂಲೆ  ಜಿ.ಪಂ ರಸ್ತೆ ಮಾರ್ಜಿನ್ ನಲ್ಲಿ  ಖಾಸಗಿ ವ್ಯಕ್ತಿಯೊಬ್ಬರು ಕಂಪೌಡು ನಿರ್ಮಾಣ ಮಾಡಿದ ಬಗ್ಗೆ ಸದಸ್ಯರು ಸಭೆಯ ಮಾಹಿತಿ ನೀಡಿದರು. ಈ ಬಗ್ಗೆ ಜಿ.ಪಂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.


ಮೈಂದನಡ್ಕ ಚೆಕ್ಕಿತ್ತಡಿ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮಾಜಿ ಶಾಸಕ ಸಂಜೀವ ಮಠಂದೂರು ರವರ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಸುಮಾರು 10 ಲಕ್ಷ ರೂಪಾಯಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಆದರೆ ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ನೀರು ಹಾಕದೇ ಕಾಂಕ್ರೀಟ್ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಪತ್ರಿಕೆಯಲ್ಲಿ ವರದಿಯಾದರು ಗುತ್ತಿಗೆದಾರರು ಯಾವುದೇ ಸ್ಪಂದನೆ ನೀಡುತ್ತಿಲ್ಲ ಈ ಬಗ್ಗೆ ಸಂಬಂಧ ಪಟ್ಟ ಇಂಜಿನಿಯರಿಗೆ ಬರೆಯಲು ಸದಸ್ಯ ಸಂತೋಷ್ ಆಳ್ವ ಗಿರಿಮನೆ ಒತ್ತಾಯಿಸಿದರು ಇವರೊಂದಿಗೆ ಸದಸ್ಯರಾದ ವೆಂಕಟೇಶ್ ಕನ್ನಡ್ಕ ಕುಮಾರ ಅಂಬಟೆಮೂಲೆ, ದಮಯಂತಿ ಕೆಮ್ಮತ್ತಡ್ಕ, ಉಪಾಧ್ಯಕ್ಷೆ ಸುಶೀಲ ಪಕ್ಯೋಡ್ ಧ್ವನಿ ಗೂಡಿಸಿದರು.ಬಳಿಕ ಚರ್ಚಿಸಿ ಸಂಬಂಧ ಪಟ್ಟ ಇಂಜಿನಿಯರಿಗೆ ಬರೆಯಲು ನಿರ್ಣಯಿಸಲಾಯಿತು.ಮಹಿಳಾ ಗ್ರಾಮ ಸಭೆ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿ ಪಡಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್  ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ರವಿಚಂದ್ರ ಸಾರೆಪ್ಪಾಡಿ, ಧರ್ಮೇಂದ್ರ ಕುಲಾಲ್ ಪದಡ್ಕ, ಲಿಂಗಪ್ಪ ಗೌಡ ಮೋಡಿಕೆ, ವೆಂಕಟೇಶ್ ಕನ್ನಡ್ಕ, ಜ್ಯೋತಿ ಅಂಬಟೆಮೂಲೆ, ಸುಜಾತ ಮೈಂದನಡ್ಕ, ಹೇಮಾವತಿ ಮೋಡಿಕೆ, ದಮಯಂತಿ ಕೆಮ್ಮತ್ತಡ್ಕ, , ಶ್ರೀಮತಿ ಕನ್ನಡ್ಕ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here