ಡಿ.3: ಕ ಸಾ ಪ ಪುತ್ತೂರು ನೇತೃತ್ವದಲ್ಲಿ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ-ಸಾಧಕ ಪ್ರಶಸ್ತಿಗೆ ಐವರು ಆಯ್ಕೆ

0

ಪುತ್ತೂರು: ವಿಶ್ವ ವಿಕಲಚೇತನ ದಿನದಂದು ವಿಕಲಚೇತನರಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತಂದು ಸಮಾಜಕ್ಕೆ ಪರಿಚಯಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಪುತ್ತೂರು ತಾಲೂಕು ವಿವಿದೋದ್ದೇಶ, ಗ್ರಾಮೀಣ ಹಾಗೂ ನಗರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾಶ್ರಮದಲ್ಲಿ ಡಿ.3ರಂದು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಭಿನ್ನ ಸಾಮರ್ಥ್ಯದ ಪ್ರತಿಭೆಗಳಿಗಾಗಿ ಕವಿ ಗೋಷ್ಠಿ, ಕಥಾ ಗೋಷ್ಠಿ,ಕನ್ನಡ ಗೀತ ಗಾಯನ, ಪ್ರತಿಭಾ ಪ್ರದರ್ಶನ ಹಾಗೂ ವಿವಿಧ ಮನೋರಂಜನ ಆಟೋಟ ಸ್ಪರ್ಧೆಗಳು, ಸಂತೋಷ ಕೂಟ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನಲ್ಲಿ ವಿಶೇಷ ಸಾಧನೆ ಮಾಡಿದ 4 ವಿಕಲ ಚೇತನರನ್ನು 1 ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ದಿವ್ಯಾಂಗ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಬಹುಷಃ ದಿವ್ಯಾಂಗರಿಗಾಗಿ ಈ ರೀತಿಯ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ನಡೆಸುವುದು ಪ್ರಪ್ರಥಮ ಎನ್ನಬಹುದಾಗಿದೆ.

ದಿವ್ಯಂಗ ಸಾಧಕ ಪ್ರಶಸ್ತಿಗೆ ಆಯ್ಕೆಯಾದವರು
ಶ್ರೀ ಕೇಶವ ಅಮ್ಮೈ: ಗ್ಲುಕೋಮಾ ಎಂಬ ದೃಷ್ಟಿದೋಷದಿಂದ ಪೀಡಿತರಾದ ಇವರು 100% ದೃಷ್ಟಿಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರೂ ಎಸ್ ಆರ್ ಕೆ ಲ್ಯಾಡರ್ಸ್ ಎಂಬ ಸಂಸ್ಥೆಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದು ನೇರ ಹಾಗೂ ಪರೋಕ್ಷವಾಗಿ ಸುಮಾರು 500 ಜನರಿಗೆ ಉದ್ಯೋಗ ಸೃಷ್ಟಿ ಮಾಡಿಕೊಟ್ಟ ಗೌರವ ಇವರಿಗೆ ಸಲ್ಲುತ್ತದೆ.

ಮನು ಕುಮಾರ್: ತೀವೃತರಹದ 99% ದೃಷ್ಟಿ ಹೀನತೆ ದೃಷ್ಟಿ ದೋಷದಿಂದ ಬಳಲುತ್ತಿದ್ದರೂ ಶಿವಮಣಿ ಕಲಾತಂಡ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ 500 ಅಧಿಕ ಪುಟಾಣಿಗಳಿಗೆ ಮಕ್ಕಳಿಗೆ ನಾಟಕ,ಕುಣಿತ ಭಜನೆ, ಚಿತ್ರಕಲೆ, ಹಾಡು ಇತ್ಯಾದಿ ಗಳನ್ನು ಕಲಿಸಿ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಇವರಿಗೆ ಸಲ್ಲುತ್ತದೆ.

ನೇಹಾ ರೈ : ಹುಟ್ಟಿನಿಂದಲೇ ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿರುವ ಇವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ ಮಾತ್ರವಲ್ಲದೆ ನೂರಾರು ವಿದ್ಯಾರ್ಥಿಗಳಿಗೆ ಪಾಠವನ್ನು ಮನೆಯಲ್ಲೇ ಹೇಳಿಕೊಡುತ್ತಿದ್ದು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಮಾರ್ಗದರ್ಶಕರಾಗಿದ್ದಾರೆ.

ಅಬ್ದುಲ್ ಅಯೂಬ್ : 8ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಇವರು ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ ಎಂಬ ಬುದ್ಧಿಮಾಂದ್ಯತೆ ಪೀಡಿತರು. ಮನೆಯವರ ಸಹಕಾರದಿಂದ ನೃತ್ಯವನ್ನು ಕಲಿತ ಇವರು ರಾಜ್ಯದ ಪ್ರತಿಷ್ಠಿತ ಝೀ ಟಿ ವಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಯಲ್ಲಿ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿ ದ್ವಿತೀಯ ಹಂತದ ತನಕ ತಲುಪಿ ಉತ್ತಮ ಪ್ರದರ್ಶನ ನೀಡಿ ಊರಿಗೆ ಗೌರವ ತಂದಿದ್ದಾರೆ.

ಪಿ ವಿ ಸುಬ್ರಮಣಿ : ಕಳೆದ 12 ವರ್ಷಗಳಿಂದ ವಿಕಲ ಚೇತನರಶ್ರೇಯೋಭಿವೃದ್ಧಿಯಲ್ಲಿ ವಿಶೇಷ ಕಾಳಜಿವಹಿಸಿ ಸಾವಿರಾರು ಅರ್ಹ ವಿಶೇಷ ಚೇತನರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕ್ರೀಡೆ, ಇತ್ಯಾದಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಉದ್ಯೋಗ ಮೇಳ ಆಯೋಜನೆ ಮಾಡಿ ಹಲವಾರು ಜನರಿಗೆ ಉದ್ಯೋಗ ನೀಡಿದ ಗೌರವ ಇವರಿಗೆ ಸಲ್ಲುತ್ತದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಾದುಗಾರ ಪುತ್ತೂರು ಸುರೇಶ್ ನಾಯಕ್ ಅವರು ಮಾಡಲಿದ್ದಾರೆ. ದಿವ್ಯಾಂಗ ಸಾಧಕ ಪ್ರಶಸ್ತಿಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ನಯನ ರೈ, ನವೀನ್ ಕುಮಾರ್, ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಝೆವಿಯರ್ ಡಿ.ಸೋಜ ಅವರು ಭಾಗವಹಿಸಲಿದ್ದಾರೆ.

ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ವತಿಯಿಂದ ಹಾಗೂ ಉಪಹಾರವನ್ನು ನಾಗೇಶ್ ಪ್ರಭು ಪರ್ಲಡ್ಕ, ಸನ್ಮಾನದ ಕೊಡುಗೆಯನ್ನು ಸಚಿನ್ ಟ್ರೇಡಿಂಗ್ ಕಂಪನಿ, ಶಾಮಿಯಾನ ಧ್ವನಿವರ್ಧಕವನ್ನು ಎಂ. ಡಿ.ಎಸ್ ಪಡೀಲ್ , ಹಾಳೆ ತಟ್ಟೆಗಳನ್ನು ಹೆಗ್ಡೆ ಪ್ಲಾಸ್ಟಿಕ್, ಪಾಪ್ಯುಲರ್ ಸ್ವೀಟ್ ಅವರು ತಮ್ಮ ನೂತನ ಉತ್ಪಾದನೆಯ ಐಸ್ ಕ್ರೀಮ್ ಅನ್ನು ಕೊಡುಗೆಯಾಗಿ ನೀಡಲಿದ್ದಾರೆ. ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here