ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 21ನೇ ಉಚಿತ ವೈದ್ಯಕೀಯ ಶಿಬಿರ

0

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಂದ್ರ ಶೆಟ್ಟಿಯವರಿಗೆ ಸನ್ಮಾನ

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿ ಸಂಪ್ಯ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾದೊಂದಿಗೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ  ವಠಾರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರದ 21ನೇ ತಿಂಗಳ ವೈದ್ಯಕೀಯ ಶಿಬಿರವು ಡಿ.3ರಂದು ನಡೆಯಿತು.


ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ನಾನು ಪಕ್ಷಾತೀತ. ಎಲ್ಲಾ ಪಕ್ಷದವರೊಂದಿಗೆ ಇದ್ದೇನೆ. ಆದರೂ ಜನ ನಾಯಕನಾಗಿರುವ ಅರುಣ್ ಕುಮಾರ್ ಪುತ್ತಿಲರವರಿಗೆ ಬಿಜೆಪಿ ಅವಕಾಶ ನೀಡಬೇಕಿತ್ತು ಎಂದ ಅವರು ಪ್ರಶಸ್ತಿಗಿಂತ ಇಲ್ಲಿನ ಜನರ ಪ್ರೀತಿ ವಿಶ್ಚಾಸ ದೊರೆತಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಸೇವಾ ಕಾರ್ಯಗಳು ಇನ್ನಷ್ಟು ನಡೆಯಲಿ. ವ್ಯವಸ್ಥಾಪನಾ ಸಮಿತಿ ಬದಲಾದರೂ ಆರೋಗ್ಯ ಶಿಬಿರವು ದೇವಸ್ಥಾನದಲ್ಲಿ ನಿರಂತರವಾಗಿ ನಡೆಯಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ದಾನಿಗಳ ನೆರವು, ಭಕ್ತಾದಿಗಳ ಸಹಕಾರದಿಂದ ವೈದ್ಯಕೀಯ ಶಿಬಿರವು ಕಳೆದ 21 ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ. ವೈದ್ಯಕೀಯ ಶಿಬಿರದ ಜೊತೆಗೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ದಾನಿಗಳ ನೆರವು ಹಾಗೂ ಆರೋಗ್ಯ ರಕ್ಷಾ ಸಮಿತಿಯಿಂದ ದೇವಸ್ಥಾನದ ಹೊರಾಂಗಣದಲ್ಲಿ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜ.26ರಂದು ದೇವಸ್ಥಾನದ ಜಾತ್ರೋತ್ಸವವು ನಡೆಯಲಿದ್ದು ಭಕ್ತಾದಿಗಳು ಸಹಕರಿಸುವಂತೆ ಅವರು ವಿನಂತಿಸಿದರು.


ಅಭಿನಂದನಾ ಭಾಷಣ ಮಾಡಿದ ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪ್ರಾಮಾಣಿಕ, ನಿಸ್ವಾರ್ಥ ಸಮಾಜ ಸೇವೆಗೆ ಪ್ರಶಸ್ತಿ ಒಲಿದು ಬಂದಿದೆ. ಅವರ ಗೌರವದ ಹಿಂದೆ ಸಾಕಷ್ಟು ಸೇವೆಗಳಿವೆ. ದೇವಸ್ಥಾನದ ಜೀರ್ಣೋದ್ಧಾರ,ಅಭಿವೃದ್ಧಿಯಲ್ಲಿ ಬಹಳಷ್ಟು ಕೊಡುಗೆ ನೀಡಿದವರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ., ಸಂಪ್ಯ ನವಚೇತನಾ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ, ಮಾಜಿ ಅಧ್ಯಕ್ಷ ವಿಜಯ ಬಿ.ಎಸ್., ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಶಿಕಲಾ ನಿರಂಜನ್ ರೈ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ನವ ಚೇತನಾ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ವಂದಿಸಿದರು. 

LEAVE A REPLY

Please enter your comment!
Please enter your name here