ಪುತ್ತೂರು: ಸುಮಾರು 600 ವರ್ಷಗಳ ಇತಿಹಾಸವಿರುವ ಇರ್ದೆ ಗ್ರಾಮದ ಬಾಲ್ಯೊಟ್ಟುಮಾರ್ ತರವಾಡು ಮನೆಯಲ್ಲಿ 3 ನೇ ವರ್ಷದ ನೇಮೋತ್ಸವ ದ. 2 ಮತ್ತು 3 ರಂದು ವಿಜೃಂಭಣೆಯಿಂದ ನಡೆಯಿತು.
ದ. 2 ರಂದು ಬೆಳಿಗ್ಗೆ ವೇ.ಮೂ. ರಾಧಾಕೃಷ್ಣ ಭಟ್ ಕಕ್ಕೂರು ನೇತೃತ್ವದಲ್ಲಿ ನಾಗದೇವರು, ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ತಂಬಿಲ ಸೇವೆ, ಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಂಜೆ ಸುಳ್ಯಪದವು ಪಾದೆಗದ್ದೆ ಅಂಬಾ ಭವಾನಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು. ರಾಹುಗುಳಿಗ, ಚಾಮುಂಡಿ, ಜಾಲಕೊರತಿ ದೈವಗಳ ತಂಬಿಲ ನಡೆದು, ಬಳಿಕ ಧರ್ಮದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ಕಲ್ಲಾಳ್ತ ಗುಳಿಗ ನೇಮ ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕುಪ್ಪೆ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವದ ನೇಮ, ವರ್ಣರ ಪಂಜುರ್ಲಿ ನೇಮ ನಡೆಯಿತು.
ದ. 3 ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ನೇಮ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ಜರಗಿ ಸಂಜೆ ಕೊರತಿ ದೈವದ ನೇಮ, ರಾತ್ರಿ ಕೊರಗಜ್ಜ ದೈವದ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.
ಕುಟುಂಬದ ಹಿರಿಯರಾದ ನರಸಿಂಹ ಪೂಜಾರಿ ಬೊಳ್ಳಿಂಬಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇಷಪ್ಪ ಪೂಜಾರಿ ಪಳಂಬೆ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಹಾರಾಡಿ, ಪದಾಧಿಕಾರಿಗಳು, ಕುಟುಂಬಿಕರು, ಬಂಧು ಮಿತ್ರರು, ಊರ ಗಣ್ಯರು, ಊರ ಪರವೂರ ಭಕ್ತಾಭಿಮಾನಿಗಳು ಪಾಲ್ಗೊಂಡು ದೈವಗಳ ಪ್ರಸಾದ ಸ್ವೀಕರಿಸಿದರು.