ವಾಲಿಬಾಲ್ ಅಸೋಸಿಯೇಶನ್‌ನ ಸಮಾಲೋಚನಾ ಸಭೆ

0

ಪುತ್ತೂರು: ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ಸಮಾಲೋಚನಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಡಿ.9ರಂದು ನೆಹರುನಗರದ ಸುದಾನ ವಸತಿಯುತ ಶಾಲಾ ಎಡ್ವರ್ಡ್ ಹಾಲ್‌ನಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಸತೀಶ್ ಬಿ.ಎಸ್.ಮಾತನಾಡಿ, ವಾಲಿಬಾಲ್ ಅಸೋಸಿಯೇಶನ್ ಇಲ್ಲದೆ, ಮಕ್ಕಳಿಗೆ ಸೂಕ್ತ ತರಬೇತಿ, ಪ್ರೋತ್ಸಾಹಗಳು ದೊರೆಯದೇ ಇದ್ದು ವಾಲಿಬಾಲ್ ಕ್ರೀಡಾಪಟುಗಳು ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಸಹಕಾರ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಸೋಸಿಯೇಷನ್ ಬಲಪಡಿಸಬೇಕು. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕಳುಹಿಸಲು ಸಹಕಾರ ನೀಡಬೇಕು. ಅಸೋಸಿಯೇಶನ್ ಮೂಲಕ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ರಾಜ್ಯದಲ್ಲಿ ದ.ಕ ಜಿಲ್ಲೆಯಲ್ಲಿ ಮಾತ್ರ ಅಸೋಸಿಯೇಷನ್ ಸಕ್ರಿಯವಾಗಿದ್ದು ಪ್ರತಿಭೆ ಬೆಳೆಯಲು ಸಹಕಾರ ನೀಡಬೇಕು. ಪುತ್ತೂರಿನಲ್ಲಿ ಉತ್ತಮ ಕ್ರೀಡಾಪಟುಗಳಿದ್ದು ಊರಿನ ಕೀರ್ತಿ ಹೆಚ್ಚಿಸಲು ಸಹಕಾರಿಯಾಗಬೇಕು ಎಂದರು.
ಅಸೋಸಿಯೇಶನ್‌ನ ಗೌರವಾಧ್ಯಕ್ಷ ವಿಜಯ ಹಾರ್ವಿನ್ ಮಾತನಾಡಿ, ದಾನ, ಧರ್ಮ ಮಾಡುವುದು, ಧಾರ್ಮಿಕ ಕೇಂದ್ರಗಳಿಗೆ ಹೋಗುವುದು ಮಾತ್ರವೇ ಭಗವಂತನ ಸೇವೆಯಲ್ಲ. ಮಕ್ಕಳಲ್ಲಿರುವ ಪ್ರತಿಭೆಗಳಿಗೆ ತಕ್ಕಂತೆ ಪ್ರೋತ್ಸಾಹ, ಸಹಕಾರ, ತರಬೇತಿ ನೀಡುವುದು ಭಗವಂತನ ಸೇವೆಯೇ ಆಗಿದೆ. ವಾಲಿಬಾಲ್ ಕ್ರೀಡೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯವ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿ, ಉತ್ತೇಜನ ನೀಡಬೇಕಾದ ಅನಿವಾರ್ಯತೆಯಿದೆ. ನಾವು ಆಡಿ ಬೆಳೆದ ಕ್ರೀಡೆಯನ್ನು ಉಳಿಸಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಇದಕ್ಕೆ ಸುದಾನ ಕ್ಯಾಂಪಸ್‌ನಲ್ಲಿ ಅವಕಾಶ ನೀಡಲಾಗುವುದು ಎಂದರು.
ಸಭೆಯಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿ ಶಂಕರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಭಟ್ ಬೀರ್ನಕಜೆ ವಂದಿಸಿದರು.

LEAVE A REPLY

Please enter your comment!
Please enter your name here