ಅಗಲಿದ ವೀರ ಯೋಧರಿಗೆ ದೃಶ್ಯ ರೂಪಕದ ಮೂಲಕ ಶೃದ್ಧಾಂಜಲಿ

0

ಉಪ್ಪಿನಂಗಡಿ: ಕಾಶ್ಮೀರದ ರಾಜೋರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ವೀರೋಚಿತ ಸಾವನ್ನಪ್ಪಿದ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್‌ರವರಿಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ದೃಶ್ಯ ರೂಪಕದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರ್ಯಕ್ರಮ ವೀಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮೂಡಿ ಬಂದಿದೆ.

ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಷ್ಟ್ರ ರಕ್ಷಕರಿಗೆ ನಮನ ಎಂಬ ಭಾವದೊಂದಿಗೆ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಶ್ರೀಮಂತ ಕುಟುಂಬದಲ್ಲಿ ಎಂ.ವಿ. ಪ್ರಾಂಜಲ್ ಹುಟ್ಟಿದ್ದರೂ, ಅವರ ಸೇನೆ ಸೇರುವ ಕನಸು, ಅದಕ್ಕಾಗಿ ಹೆತ್ತವರ ಸಹಕಾರ, ಎನ್.ಡಿ.ಎ. ಪರೀಕ್ಷೆ ಬರೆದು ಸೇನೆ ಸೇರಿದ ಮಗನನ್ನು ಹರಸಿ ಕಳುಹಿಸುವ ಹೆತ್ತವರು, ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ವೀರೋಚಿತ ಮರಣ, ಮೃತ ದೇಹ ಮನೆಗೆ ಬಂದಾಗ ಹೆತ್ತವರು ಮತ್ತು ಮಡದಿ ಗೌರವ ಸಲ್ಲಿಸುವ ನಡೆಯನ್ನು ಸಾಂಸ್ಕೃತಿಕ ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮನೋಜ್ಞವಾಗಿ ಅಭಿನಯಿಸಿದಾಗ ಪ್ರೇಕ್ಷಕ ಸಮೂಹದ ನಡುವೆ ಮೌನ ಆವರಿಸಿತ್ತು. ಅಂತಿಮ ದೃಶ್ಯದ ವೇಳೆ ಕಣ್ಣಂಚಿನಲ್ಲಿ ನೀರು ಜಿನುಗುವಂತಿತ್ತು. ಪ್ರಾಂಜಲ್ ನೊಂದಿಗೆ ಅಗಲಿದ ಐವರೂ ಸೇನಾಧಿಕಾರಿಗಳಿಗೆ ಎದ್ದು ನಿಂತು ಮೌನ ಪ್ರಾರ್ಥನೆ ಸಲ್ಲಿಸಲು ಶಾಲಾ ಶಿಕ್ಷಕರು ಕರೆ ನೀಡಿದಾಗ ಇಡೀ ಸಭೆಯೇ ಸ್ಪಂದಿಸಿ ಮೌನ ಪ್ರಾರ್ಥನೆ ಸಲ್ಲಿಸಿತು.
ಒಟ್ಟಾರೆ ರಾಷ್ಟ್ರ ರಕ್ಷಣೆಗಾಗಿ ಸರ್ವಸ್ವವನ್ನೂ ಸಮರ್ಪಿಸುತ್ತಿರುವ ಸೈನಿಕರ ಬಗ್ಗೆ ಗೌರವಾದರಗಳು ಹೆಚ್ಚಿಸುವಂತೆ ಕಾರ್ಯಕ್ರವನ್ನು ರೂಪಿಸುವ ಮೂಲಕ ಹೊಸ ಸಂದೇಶವನ್ನು ಬಿತ್ತರಿಸಲಾಯಿತು. ಮಾತ್ರವಲ್ಲದೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ.ಕೀರ್ತನ್ ರಂಗ ನಾಯಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ. ಸುಧಾ ರಾವ್, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಯು.ಜಿ. ರಾಧಾ, ಪ್ರಾಂಶುಪಾಲ ಎಚ್.ಕೆ. ಪ್ರಕಾಶ್, ಮುಖ್ಯೋಪಾಧ್ಯಾಯಿನಿ ವೀಣಾ ಆರ್ ಪ್ರಸಾದ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here