ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕಾಗಿದೆ-ಹೇಮನಾಥ ಶೆಟ್ಟಿ
ಪುತ್ತೂರು: ಗ್ರಾಮಾಂತರ ಪ್ರದೇಶ ನಿಡ್ಪಳ್ಳಿಗೆ ಅದರದ್ದೇ ಆದ ವಿಶೇಷತೆಯಿದೆ. ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿಗೆ ಹೆಚ್ಚಿನ ಒತ್ತು ಕೊಟ್ಟಿರುವುದು ಈ ನಿಡ್ಪಳ್ಳಿ ಗ್ರಾಮ. ಎಲ್ಲಾ ಜಾತಿಯವರನ್ನು ಒಟ್ಟಾಗಿ ಸೇರಿಸಿಕೊಂಡು ಈ ಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ವಿಶೇಷವಾಗಿದೆ ಜೊತೆಗೆ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕಾಗಿದೆ ಎಂದು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಹೇಳಿದರು.
ನಿಡ್ಪಳ್ಳಿ ತಂಬುತ್ತಡ್ಕ ನವಜ್ಯೋತಿ ಯುವಕ ಮಂಡಲ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ಮುರಳೀಕೃಷ್ಣ ಭಟ್ ಮುಂಡೂರು ಸ್ಮರಣಾರ್ಥ 18ನೇ ವರ್ಷದ ಮ್ಯಾಟ್ ಅಂಕಣದ ಅಹರ್ನಿಶಿ ಮುಕ್ತ ಕಬಡ್ಡಿ ಪಂದ್ಯಾಟ, 55ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಡಿ.9 ರಂದು ಸಂಜೆ ತಂಬುತ್ತಡ್ಕ ಬಸ್ಸು ನಿಲ್ದಾಣದ ವಠಾರದಲ್ಲಿ ಜರಗಿದ್ದು, ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಎಂಬುದು ಜಾತಿ, ಧರ್ಮ ಮೀರಿಸುವ ಕ್ರೀಡೆ-ರಾಧಾಕೃಷ್ಣ ಬೋರ್ಕರ್:
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಓರ್ವ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ದೇಶಕ್ಕೆ ಗೌರವ ಹಾಗೂ ಯುವ ಪ್ರತಿಭೆಗೆ ಗೌರವಿಸುವ ಮೂಲಕ ಮತ್ತಷ್ಟು ವೇದಿಕೆಗೆ ಪ್ರೋತ್ಸಾಹ ಕೊಟ್ಟಂತಾಗಿದೆ. ಕ್ರೀಡೆ ಎಂಬುದು ಜಾತಿ, ಧರ್ಮ ಮೀರಿಸುವ ಕ್ರೀಡೆ. ಈ ಕಬಡ್ಡಿ ಕ್ರೀಡೆಯನ್ನು ನಾವೆಲ್ಲ ಆಸ್ವಾದಿಸೋಣ ಎಂದರು.
ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮ-ರವೀಂದ್ರ ಶೆಟ್ಟಿ ನುಳಿಯಾಲು:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಪಕ್ಷಾತೀತ, ಜಾತ್ಯಾತೀತ ಕಾರ್ಯಕ್ರಮವಾಗಿದ್ದು ಆಸಿಫ್ ತಂಬುತ್ತಡ್ಕರವರ ತಂದೆ ಕೂಡ ಪಕ್ಷಾತೀತವಾಗಿ ಕೆಲಸ ಮಾಡಿದವರು. ದಿ.ಮುರಳೀಕೃಷ್ಣರವರದ್ದು ಹಿಂದುತ್ವವಾದರೂ ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಸೌಹಾರ್ದತೆಯನ್ನು ಎತ್ತಿ ತೋರಿಸುತ್ತದೆ. ಅಧಿವೇಶನದಲ್ಲಿ ಶಾಸಕ ಅಶೋಕ್ ರೈಯವರು ಪುತ್ತೂರಿನ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಕುಗ್ರಾಮವಾಗಿರುವ ಈ ಊರಿಗೋಸ್ಕರ ಅಂದು ನಾನು ಬಹಳ ಶ್ರಮಿಸಿದ್ದು ಇಂದು ಅಭಿವೃದ್ಧಿಯಾಗಿರುವುದು ಶ್ಲಾಘನೀಯ ಎಂದರು.
ಶಿಸ್ತುಬದ್ಧವಾದ ಕಾರ್ಯಕ್ರಮ ಯಶಸ್ವಿಯಾಗುತ್ತದೆ-ಪ್ರಮೋದ್ ಆರಿಗ:
ಅಧ್ಯಕ್ಷತೆಯನ್ನು ವಹಿಸಿದ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಗೌರವಾಧ್ಯಕ್ಷ ಪ್ರಮೋದ್ ಆರಿಗ ಮಾತನಾಡಿ. ಗ್ರಾಮೀಣ ಭಾಗದ ಕ್ರೀಡೆಯಾಗಿರುವ ಕಬಡ್ಡಿ ಪಂದ್ಯಾಟವನ್ನು ನವಜ್ಯೋತಿ ಯುವಕ ಮಂಡಲದವರು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶಾಂತದುರ್ಗಾ ದೇವಸ್ಥಾನದ ಜೀರ್ಣೋದ್ಧಾರ ಕೈಂಕರ್ಯದ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ನುಳಿಯಾಲುರವರು ಬಹಳ ಸಹಕಾರ ನೀಡಿದ್ದಾರೆ. ಯಾವುದೇ ಸಂಘ-ಸಂಸ್ಥೆಗಳಾಗಲಿ ಯಾರು ಶಿಸ್ತುಬದ್ಧವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೋ ಆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ನವಜ್ಯೋತಿ ಯುವಕ ಮಂಡಲಕ್ಕೆ ಸಮಾಜದಲ್ಲಿ ಗೌರವವಿದೆ-ಜಗದೀಶ್ ಶೆಟ್ಟಿ:
ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ನವಜ್ಯೋತಿ ಯುವಕ ಮಂಡಲಕ್ಕೆ ಸಮಾಜದಲ್ಲಿ ಗೌರವವಿದೆ. ಹದಿನೆಂಟು ವರ್ಷದ ಹಿಂದೆ ಪ್ರಾರಂಭವಾಗಿರುವ ಈ ನವಜ್ಯೋತಿ ಯುವಕ ಮಂಡಲವು ಇಂದಿಗೂ ಮಾನಸಿಕವಾದ ಹೊಂದಾಣಿಕೆಯೊಂದಿಗೆ ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದರು.
ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸಿ ಸಾಧನೆ ಮಾಡುವವರಾಗಿ-ಮಹಮ್ಮದ್ ಕುಕ್ಕುವಳ್ಳಿ:
ದ.ಕ ಜಿಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಹಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿ, ಸುಂದರವಾದ ಭಾರತ ಹೇಗಿರಬೇಕೆಂದು ಈ ನವಜ್ಯೋತಿ ಯುವಕ ಮಂಡಲ ತೋರಿಸಿದೆ. ಮೈನಸ್ ಡಿಗ್ರಿ ಚಳಿಯಲ್ಲಿ ದೇಶವನ್ನು ಕಾಯುವ ಸೈನಿಕರನ್ನು ಸನ್ಮಾನ ಮಾಡುವುದು ಹೆಮ್ಮೆಯ ವಿಚಾರ. ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲೂ ಭಾಗವಹಿಸಿ ಸಾಧನೆ ಮಾಡುವವರಾಗಿ ಎಂದರು.
ಕ್ರೀಡೆಯಿಂದ ಶಿಸ್ತು, ಶಾಂತಿ, ಸೌಹಾರ್ದತೆ ಮೂಡುವಂತಾಗಿದೆ-ನವೀನ್ ರೈ:
ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ, ಈ ಭಾಗದಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ಇದ್ದು ಸೌಹಾರ್ದತೆಯಲ್ಲಿ ಜನರು ಜೀವನ ಸಾಗಿಸುತ್ತಿದ್ದಾರೆ. ಕ್ರೀಡೆಯ ಮೂಲಕ ಶಿಸ್ತು, ಶಾಂತಿ, ಸೌಹಾರ್ದತೆ ಮೂಡುವಂತಾಗಿದೆ ಎಂದರು.
ಶ್ರೀ ಕಟೀಲ್ ಲಾಜಿಸ್ಟಿಕ್ಸ್‌ನ ಜನಾರ್ದನ ಪೂಜಾರಿ ಪದಡ್ಕ, ನಿಡ್ಪಳ್ಳಿ ಮುಂದಾರಗಿರಿ ಗೋಪಾಲಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಸಂಜೀವ ಪೂಜಾರಿ ಕಾನ, ಮಣಿ ಅರ್ಥ್‌ಮೂವರ್‍ಸ್ ಮಾಲಕ ರಾಧಾಕೃಷ್ಣ ರೈ ಪಟ್ಟೆರವರು ಶುಭ ಹಾರೈಸಿದರು. ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮನೋಹರ್ ಆರಂಭ್ಯ, ಕೈಕಾರ ಆಜ್ಮೀಯ ಟ್ರೇಡರ್ಸ್ ನ ಯೂಸುಫ್ ಹಾಜಿ ಕೈಕಾರ, ಪಾಣಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮ್ಮರ್ ಜನಪ್ರಿಯ ಸಹಿತ ಹಲವರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವಜ್ಯೋತಿ ಯುವಕ ಮಂಡಲ ಅಧ್ಯಕ್ಷ ವಿಜಿತ್ ಕುಮಾರ್, ಸಿದ್ಧೀಕ್ ತಂಬುತ್ತಡ್ಕ, ಸುರೇಶ್, ಸಾಯಿ, ಅಝೀಝ್, ಸತೀಶ್ ರೈ, ಪ್ರಸಾದ್, ಭಾಸ್ಕರ್ ಕರ್ಕೇರಾ, ಸುಭಾಶ್ ಕಾನ, ನಾಸಿರ್ ನಿಡ್ಪಳ್ಳಿ, ರಾಮಚಂದ್ರ, ರವಿ ಕಾನ, ದೀಕ್ಷಿತ್, ಪ್ರಸಾದ್ ರೈ, ಹರೀಶ್ ನಿಡ್ಪಳ್ಳಿ, ತಾರಾನಾಥ, ವಿಶ್ವನಾಥ ಬೇರಿಕೆ, ಬಾಲಚಂದ್ರ ಮಾಣಿರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಸ್ವಾಗತಿಸಿ, ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲುರವರಿಗೆ ಹುಟ್ಟೂರ ಸನ್ಮಾನ ನೆರವೇರುವುದರೊಂದಿಗೆ ನಿವೃತ್ತ ಸೈನಿಕ ಬಾಲಕೃಷ್ಣ ಎನ್.ಪಟ್ಟೆ, ದೈವ ನರ್ತಕ ಶೇಷಪ್ಪ ಪರವ ಬಾಳಿಲ, ರಾಜ್ಯ ಮಟ್ಟದ ಕರಾಟೆಪಟು ಜಿವೇಶ್ ವಿ.ಪೂಜಾರಿ, ಕಬಡ್ಡಿ ತರಬೇತುದಾರರಾಗಿ ಆಯ್ಕೆಯಾಗಿರುವ ಬಾಲಕೃಷ್ಣ ರೈ ಪೊರ್ದಾಲ್‌ರವರುಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.
ಮೌನ ಪ್ರಾರ್ಥನೆ:
ಸಭಾ ಕಾರ್ಯಕ್ರಮದ ಅತಿಥಿಯಾಗಿದ್ದು, ಸಭಾ ಕಾರ್ಯಕ್ರಮ ಆರಂಭವಾಗುವ ಕೆಲ ಹೊತ್ತಿನ ಮುಂಚೆ ಅನಾರೋಗ್ಯದಿಂದ ಅಗಲಿದ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿರವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೋರಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಬಹುಮಾನಗಳು:
ಮುಕ್ತ ಕಬಡ್ಡಿ ಪಂದ್ಯಾಟದ ಬಹುಮಾನ ಮೊತ್ತವಾಗಿ ಪ್ರಥಮ ರೂ.10 ಸಾವಿರ, ದ್ವಿತೀಯ ರೂ.6 ಸಾವಿರ, ತೃತೀಯ ಹಾಗೂ ಚತುರ್ಥ ರೂ.೩ ಸಾವಿರ ಜೊತೆಗೆ ಶಾಶ್ವತ ಫಲಕ ಮತ್ತು ವೈಯಕ್ತಿಕ ಬಹುಮಾನಗಳು, 55 ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದ ಬಹುಮಾನ ಮೊತ್ತವಾಗಿ ಪ್ರಥಮ ರೂ.6 ಸಾವಿರ, ದ್ವಿತೀಯ ರೂ.4 ಸಾವಿರ, ತೃತೀಯ ಹಾಗೂ ಚತುರ್ಥ ರೂ.2 ಸಾವಿರ ಜೊತೆಗೆ ಶಾಶ್ವತ ಫಲಕ ಮತ್ತು ವೈಯಕ್ತಿಕ ಬಹುಮಾನಗಳು ಒಳಗೊಂಡಿದೆ.