ಹೊಸ ಪಡಿತರ ಕಾರ್ಡು ಮತ್ತು ತಿದ್ದುಪಡಿಗೆ ಅವಕಾಶ ಕೊಡಿ-ವಿಧಾನಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು:ದ ಕ ಜಿಲ್ಲೆಯಲ್ಲಿ 5500 ಹೊಸ ಪಡಿತರ ಚೀಟಿಯ ಅರ್ಜಿ ಬಾಕಿ ಇದೆ, ಕಳೆದ ಮೂರು ತಿಂಗಳಿಂದ ತಿದ್ದುಪಡಿಗೆ ವಾರದಲ್ಲಿ ಎರಡು ದಿನ ಅವಕಾಶ ಕಲ್ಪಿಸಿದರೂ ಸರ್ವರ್ ಬ್ಯುಸಿ ಇರುವ ಕಾರಣ ಯಾವುದೇ ತಿದ್ದುಪಡಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ, ಪುತ್ತೂರು ತಾಲೂಕಿನಲ್ಲಿ ಮೂರು ತಿಂಗಳಲ್ಲಿ ಕೇವಲ ಏಳು ಜನರಿಗೆ ಮಾತ್ರ ತಿದ್ದುಪಡಿ ಮಾಡಲು ಸಾಧ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು. ತಿಂಗಳಲ್ಲಿ ಹತ್ತು ದಿನ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಬೇಕು ಮತ್ತು ಸರ್ವರ್ ಬ್ಯುಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈಯವರು ಸರಕಾರವನ್ನು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅದಿವೇಶನ ಗಮನಸೆಳೆಯುವ ಕಲಾಪದ ವೇಳೆ ಮಾತನಾಡಿದ ಶಾಸಕ ಅಶೋಕ್ ರೈಯವರು ಸರಕಾರದ ಯೋಜನೆಯನ್ನು ಪಡೆದುಕೊಳ್ಳಲು ರೇಶನ್ ಕಾರ್ಡು ಇಲ್ಲದೆ ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ಬಡವರೇ ತೊಂದರೆಗೊಳಗಾಗಿದ್ದು ರೇಶನ್ ಕಾರ್ಡು ತಿದ್ದುಪಡಿ ಅಥವಾ ಹೊಸ ರೇಶನ್ ಕಾರ್ಡು ಪಡೆಯಲು ಸೈಬರ್ ಗಳಿಗೆ ಅಲೆದಾಡುವಂತಾಗಿದೆ. ಸರ್ವರ್ ಬ್ಯುಸಿಯಿಂದಾಗಿ ಈ ಸಮಸ್ಯೆ ಉಂಟಾಗಿದ್ದು ಶೀಘ್ರವೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

25 ಸಾವಿರ ತಿದ್ದುಪಡಿ ಅರ್ಜಿ ಬಾಕಿ:
ಒಟ್ಟು 25 ಸಾವಿರ ಮಂದಿ ಪಡಿತರ ಕಾರ್ಡು ತಿದ್ದುಪಡಿ ಮಾಡಲು ಅರ್ಜಿ ಹಿಡಿದು ಕಾಯುತ್ತಿದ್ದಾರೆ. ಪ್ರತೀ ದಿನ ಸೈಬರ್‌ಗೆ ತೆರಳುತ್ತಿದ್ದಾರೆ. ಆದರೆ ಸರ್ವರ್ ಬ್ಯುಸಿ ಇರುವ ಕಾರಣ ತಿದ್ದುಪಡಿ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರ ತಕ್ಷಣ ಸರ್ವರ್ ಏನು ಸಮಸ್ಯೆ ಇದೆಯೋ ಅದನ್ನು ಬಗೆಹರಿಸಿ ಜನತೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.

ಕರಾವಳಿಗೆ ಕುಚ್ಚಲಕ್ಕಿ ಕೊಡಿ:
ಈಗಾಗಲೇ ರಾಜ್ಯ ಸರಕಾರ 5 ಕೆ ಜಿ ಅಕ್ಕಿಯ ಬದಲಾಗಿ ಹಣವನ್ನು ಖಾತೆಗೆ ಜಮೆ ಮಾಡುತ್ತಿದೆ. ಮುಂದೆ ಅಕ್ಕಿ ನೀಡುವಾಗಿ ಕರಾವಳಿ ಭಾಗಕ್ಕೆ ಕುಚ್ಚಲಕ್ಕಿಯನ್ನೇ ಕೊಡಬೇಕು ಎಂದು ಶಾಸಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು ಕರಾವಳಿ ಭಾಗಕ್ಕೆ ಕುಚ್ಚಲಕ್ಕೆ ಕೊಡಬೇಕು ಎಂಬ ಬೇಡಿಕೆಯನ್ನು ಮಾನ್ಯ ಮಾಡುತ್ತೇನೆ. ಕುಚ್ಚಲಕ್ಕಿ ಕೊಡಲು ಶಕ್ತಿ ಮೀರಿ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಹೊಸ ತಂತ್ರಜ್ಞಾನಕ್ಕೆ ಶಿಫ್ಟ್ ಆದ ಬಳಿಕ ಸಮಸ್ಯೆ ಇತ್ಯರ್ಥ: ಸಚಿವರ ಭರವಸೆ
ಶಾಸಕ ಅಶೋಕ್ ರೈ ಪ್ರಶ್ನೆಗೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪರವರು ಶಾಸಕರು ತಿಳಿಸಿರುವ ಸಮಸ್ಯೆ ಬಗ್ಗೆ ಅರಿವಿದೆ. ಸರ್ವರ್ ಬ್ಯುಸಿ ಗಂಭೀರ ಸಮಸ್ಯೆಯಾಗಿದೆ. ಇಲಾಖೆಯ ಸರ್ವರ್‌ಗಳು ಎಲ್ಲಾ ವಿಭಾಗಕ್ಕೂ ಬಳಕೆಯಾಗುತ್ತಿರುವ ಕಾರಣ ಈಗ ಇರುವ ಇಲಾಖೆಯ ಸರ್ವರ್‌ಗಳು ಹಳೆಯದಾಗಿರುವ ಕಾರಣ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದೆ. ಈ ಕಾರಣಕ್ಕೆ ಹೊಸದಾಗಿ ಎನ್‌ಐಸಿಯಿಂದ ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್‌ಗೆ ಮೈಗ್ರೇಶನ್ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಹೊಸ ತಂತ್ರಜ್ಞಾನದ ಸರ್ವರ್ ಬಳಕೆ ಪ್ರಕ್ರಿಯೆ ನಡೆಯುತ್ತಿದ್ದು, ಅತಿ ಶೀಘ್ರವೇ ಈ ಸಮಸ್ಯೆ ಬಗೆಹರಿಯಲಿದೆ. ಆ ಬಳಿಕ ಹೊಸ ಪಡಿತರ ಮತ್ತು ಪಡಿತರ ಕಾರ್ಡು ತಿದ್ದುಪಡಿ ಸಮಸ್ಯೆ ಇಡೀ ರಾಜ್ಯದಲ್ಲಿ ಇತ್ಯರ್ಥವಾಗಲಿದೆ ಎಂದು ಸಚಿವರು ಉತ್ತರಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಂತ್ರಾಂಶದ ಸರ್ವೆಯರ್ ಹಳೆಯದು
ಎನ್‌ಐಸಿಯಿಂದ ಕರ್ನಾಟಕ ಸ್ಟೇಟ್ ಡಾಟಾ ಸಂಟರ್‌ಗೆ ಮೈಗ್ರೇಶನ್ ಪೂರ್ಣಗೊಂಡ ಬಳಿಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ. ಹೊಸ ತಂತ್ರಜ್ಞಾನದ ಸರ್ವರ್‌ಗಳು ಮುಂದಿನ ದಿನಗಳಲ್ಲಿ ಚಾಲ್ತಿಗೆ ಬರಲಿದ್ದು, ಆ ಬಳಿಕ ರಾಜ್ಯಾದ್ಯಂತ ಪಡಿತರ ಅರ್ಜಿ ಮತ್ತು ತಿದ್ದುಪಡಿ ಪ್ರಕ್ರಿಯೆಗಳು ಯಾವುದೇ ತೊಂದರೆಯಿಲ್ಲದೆ ಕಾರ್ಯ ನಿರ್ವಹಿಸಲಿದೆ ಎಂದು ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.

ನಾನು ಮಾತನಾಡುವಾಗ ಯಾಕೆ ನೀವು ಮಾತನಾಡುವುದು-ಪ್ರತಿಪಕ್ಷ ನಾಯಕ ಆರ್ ಅಶೋಕ್ ರನ್ನು ಪ್ರಶ್ನಿಸಿದ ಶಾಸಕರು
ಸಂಜೆ 5.15 ನಿಮಿಷಕ್ಕೆ ಗಮನಸೆಳೆಯುವ ಪ್ರಶ್ನೆಗೆ ಸಂಬಂಧಿಸಿದಂತೆ ವಿವಿಧ ಶಾಸಕರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ಪುತ್ತೂರು ಶಾಸಕ ಅಶೋಕ್ ರೈಯವರು ಮಾತನಾಡಲು ಸ್ಪೀಕರ್ ಹೆಸರು ಕರೆದಾಗ ಎದ್ದು ನಿಂತ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಲು ಪ್ರಾರಂಭಿಸಿದರು. ಆಗ ಅವರನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈ ʼಓ ವಿಪಕ್ಷ ನಾಯಕರೇ ನಾನು ಮಾತನಾಡುವಾಗಲೇ ಯಾಕೆ ನೀವು ಎದ್ದು ನಿಂತು ಮಾತನಾಡುತ್ತೀರಿ, ನಾನು ಮಾತನಾಡಬೇಕುʼ ಎಂದು ಹೇಳಿ ಆರ್ ಅಶೋಕ್ ಮಾತನಾಡುತ್ತಿರುವಾಗಲೇ ಶಾಸಕ ಅಶೋಕ್ ರೈ ಮಾತು ಮುಂದುವರೆಸಿದಾಗ ಆರ್ ಅಶೋಕ್‌ರವರು ಮಾತು ನಿಲ್ಲಿಸಿ ಕುಳಿತರು.

LEAVE A REPLY

Please enter your comment!
Please enter your name here