ಉಪ್ಪಿನಂಗಡಿ: ಒಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯ ಧೂಳು. ಇನ್ನೊಂದಡೆ ಇದ್ದ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳ ಸಾಲು. ಕೇಳುವವರಿಲ್ಲದಂತಾಗಿದೆ ಪ್ರಯಾಣಿಕರ ನಿತ್ಯದ ಗೋಳು. ಹೌದು…. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿ ಭಾಗದಲ್ಲಿ ನಡೆಯುತ್ತಿದ್ದು, ಆ ಬಳಿಕದಿಂದ ಇದ್ದ ಹೆದ್ದಾರಿಯೂ ನಿರ್ವಹಣೆ ಕಳೆದುಕೊಂಡು ಪ್ರಯಾಣಿಕರು ಸಂಕಷ್ಟವನ್ನೆದುರಿಸುವ ಪರಿಸ್ಥಿತಿ ಬಂದಿದೆ.
ಈ ಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಬಹುತೇಕ ಪಾಲು ಈಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಬಿಟ್ಟೇ ಹಾದು ಹೋಗುತ್ತಿದ್ದು, ಕೆಲ ಕಡೆಗಳಲ್ಲಿ ಈಗಿರುವ ಹೆದ್ದಾರಿ ಮೇಲೆಯೇ ಹಾದು ಹೋಗುತ್ತದೆ. ಕಾಮಗಾರಿಯ ಕೆಲಸಗಳು ಅಲ್ಲಲ್ಲಿ ನಡೆಯುತ್ತಿದ್ದು, ಬೃಹತ್ ಯಂತ್ರಗಳು ಬೆಟ್ಟ- ಗುಡ್ಡಗಳನ್ನು ಅಗೆಯುವ ಕಾಯಕ ಮಾಡುತ್ತಿವೆಯಲ್ಲದೇ, ತಗ್ಗು ಪ್ರದೇಶಗಳಿಗೆ ಮಣ್ಣು ತಂದು ಹಾಕಿ ಅದನ್ನು ಎತ್ತರಿಸುವ ಕೆಲಸವೂ ನಡೆಯುತ್ತಿದೆ ಇದರಿಂದಾಗಿ ಹೆದ್ದಾರಿ ಪ್ರಯಾಣವಿಡೀ ಧೂಳುಮಯವಾಗುವಂತಾಗಿದೆ.
ನಿರ್ವಹಣೆ ಇಲ್ಲ: ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಈಗಿರುವ ಹೆದ್ದಾರಿಯ ನಿರ್ವಹಣೆಯನ್ನು ಹೆದ್ದಾರಿ ಪ್ರಾಧಿಕಾರ ನಡೆಸಿಲ್ಲ. ಇದರಿಂದಾಗಿ ಈಗಿರುವ ಹೆದ್ದಾರಿ ಅಲ್ಲಲ್ಲಿ ಹೊಂಡ- ಗುಂಡಿಗಳಿಂದ ಕೂಡಿದ್ದು, ಕೆಲವು ಕಡೆ ಡಾಮರು ಎದ್ದು ಹೋಗಿದೆ. ಆದರೆ ಅದಕ್ಕೆ ತೇಪೆ ಹಾಕುವ ಕಾರ್ಯವನ್ನೂ ಮಾಡಿಲ್ಲ. ಇನ್ನು ಕೆಲವೆಡೆ ಚತುಷ್ಪಥ ಕಾಮಗಾರಿಗಾಗಿ ಹೆದ್ದಾರಿ ಬದಿಯನ್ನು ಅಗೆದಿದ್ದು, ತೋಡಿನಂತೆ ಮಾಡಿಡಲಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಹೆದ್ದಾರಿ ಪ್ರಯಾಣವೆನ್ನುವುದು ಸಂಕಷ್ಟಕರವಾಗಿ ಪರಿಣಮಿಸಿದೆ.
ಗಿಡ-ಗಂಟಿಗಳ ತೆರವಿಲ್ಲ:
ಹೆದ್ದಾರಿ ಬದಿಯ ಫುಟ್‌ಪಾತ್‌ನಲ್ಲಿ ಗಿಡ-ಗಂಟಿಗಳು ಬೆಳೆದು ರಸ್ತೆಯ ಮೇಲೆಯೇ ಬಾಗಿ ನಿಂತಿವೆ. ಆದರೂ ಇದನ್ನು ತೆರವುಗೊಳಿಸುವ ಕೆಲಸ ಹೆದ್ದಾರಿ ಪ್ರಾಽಕಾರದಿಂದಾಗಿಲ್ಲ. ಹೆದ್ದಾರಿಯ ಬದಿಯೆನ್ನುವುದೇ ಗಿಡ-ಗಂಟಿಗಳಿಂದ ಮುಚ್ಚಿ ಹೋಗಿದ್ದು, ಪಾದಚಾರಿಗಳು ಸಂಚರಿಸಬೇಕಾದರೆ ಹೆದ್ದಾರಿಯ ಮೇಲೆನೇ ಸಂಚರಿಸಬೇಕಾಗುತ್ತದೆ. ಹೆದ್ದಾರಿ ಬದಿ ಸಂಚರಿಸುವಂತೆಯೇ ಇಲ್ಲ. ಇನ್ನು ಕೆಲವು ಕಡೆ ಹೆದ್ದಾರಿಯಂಚಿನ ತುಂಬ ಆಳದಲ್ಲಿ ಫುಟ್‌ಪಾತ್ ಇದ್ದು, ಕಣಿಯಂತಿವೆ. ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುವ ವಾಹನಗಳೇನಾದರೂ ಎದುರಿಗೆ ಬಂದರೆ ಅಪಘಾತವನ್ನು ತಪ್ಪಿಸಲು ಇನ್ನೊಂದು ವಾಹನದವರು ರಸ್ತೆ ಬದಿಗೆ ಇಳಿಸಿದರೆ ಕಣಿಯಂತ ಈ ಫುಟ್‌ಪಾತ್‌ನಿಂದಾಗಿ ವಾಹನವೇ ಮಗುಚಿ ಬೀಳುವ ಸಾಧ್ಯತೆ ಇದೆ. ತಿರುವು ಪ್ರದೇಶದಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಗಿಡ-ಗಂಟಿಗಳಿಂದಾಗಿ ಕಾಣಿಸದಂತಹ ಸ್ಥಿತಿ ಎದುರಾಗಿದೆ. ಗಿಡ-ಗಂಟಿಗಳು ಆಳೆತ್ತರಕ್ಕೆ ಬೆಳೆದು ಬಾಗಿಕೊಂಡು ರಸ್ತೆಯಲ್ಲಿ ಹೋಗುವ ವಾಹನಗಳ ಮೇಲೆ ತಾಗುತ್ತಿದ್ದು, ದ್ವಿಚಕ್ರ ಸವಾರರು ರಸ್ತೆ ಬದಿಯಲ್ಲಿ ವಾಹನವನ್ನು ಚಲಾಯಿಸುವುದಾದರೆ ಇದಕ್ಕೆ ಸವರಿಕೊಂಡೇ ಹೋಗಬೇಕಾದಂತಹ ಸ್ಥಿತಿ ಇದೆ.
ಯಂತ್ರಗಳೇ ಸವಾಲು!:
ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ಮಣ್ಣನ್ನು ಅಗೆಯುವ ಹಿಟಾಚಿ, ಹೈಡ್ರೋಲಿಕ್ ಎಕ್ಸಾವೋಟರ‍್ಸ್‌ನಂತಹ ಬೃಹತ್ ಯಂತ್ರಗಳು ಕೆಲಸ ಮಾಡುತ್ತಿದ್ದು, ಚಕ್ರದ ಬದಲಾಗಿ ಇದು ಚೈನ್ ವ್ಯವಸ್ಥೆಯನ್ನು ಹೊಂದಿದೆ. ಇಂತಹ ಯಂತ್ರಗಳನ್ನು ಡಾಮರು ರಸ್ತೆಯಲ್ಲಿ ಓಡಿಸಬಾರದು. ಇದರ ಸಾಗಾಟಕ್ಕೆ ಟ್ರಾಲಿಯನ್ನು ಬಳಸಬೇಕೆಂಬ ನಿಯಮವಿದ್ದರೂ, ಕಾಮಗಾರಿ ಗುತ್ತಿಗೆದಾರರು ಇದನ್ನು ಗಾಳಿಗೆ ತೂರಿದ್ದಾರೆ. ಇವರ ಕೆಲಸ ನಡೆಯುವ ಸ್ಥಳಗಳಿಗೆ ಇವರು ಈ ಬೃಹತ್ ಯಂತ್ರಗಳನ್ನು ಈಗಿರುವ ಹೆದ್ದಾರಿ ಮೇಲೆಯೇ ಓಡಿಸಿಕೊಂಡು ಹೋಗುತ್ತಾರೆ. ಇದರಿಂದಾಗಿ ಆ ರಸ್ತೆಗಳು ಹಾಳಾಗುವಂತಾಗಿದೆ. ಚತುಷ್ಪಥ ಹೆದ್ದಾರಿಗೆ ಹೋಗದ ರಸ್ತೆಗಳು ಸರ್ವೀಸ್ ರಸ್ತೆಗಳಾಗಿ ಉಳಿಯಲಿದ್ದು, ಆದರೆ ರಸ್ತೆಯಲ್ಲಿ ಚಲಿಸಲು ಅರ್ಹತೆ ಪಡೆಯದ ಬೃಹತ್ ಯಂತ್ರಗಳನ್ನು ಇವರು ರಸ್ತೆಗಳಲ್ಲೇ ಚಲಾಯಿಸಿಕೊಂಡು ಹೋಗುವುದರಿಂದ ಚತುಷ್ಪಥ ಹೆದ್ದಾರಿಗೆ ಮೊದಲೇ ಸರ್ವೀಸ್ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಲಿವೆ. ದಿನ ನಿತ್ಯ ದ್ವಿಚಕ್ರ ವಾಹನಗಳಿಂದ ಹಿಡಿದು ಘನ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರ ಹಿತ ದೃಷ್ಟಿಯಿಂದ ಈಗಿರುವ ಹೆದ್ದಾರಿಯ ನಿರ್ವಹಣೆಯನ್ನು ಮಾಡಬೇಕಾಗಿರುವುದು ಅನಿವಾರ್ಯ ಎನ್ನುವುದು ನಾಗರಿಕರ ಆಗ್ರಹ.
ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರೋದು ಸಂತೋಷದ ವಿಚಾರನೇ. ಆದರೆ ಚತುಷ್ಪಥ ಕಾಮಗಾರಿ ಆಗುತ್ತದೆ ಅಂತ ಈಗ ಇರುವ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಽಕಾರ ಮರೆತು ಬಿಡಬಾರದು. ಹೊಂಡ- ಗುಂಡಿಗಳಿದ್ದಲ್ಲಿ ಅದಕ್ಕೆ ತೇಪೆ ಹಾಕುವ ಕಾರ್ಯ, ಹೆದ್ದಾರಿ ಬದಿಯ ಗಿಡ-ಗಂಟಿಗಳನ್ನು ತೆಗೆಯುವ ಕಾರ್ಯವನ್ನು ಮಾಡಬೇಕು. ಚತುಷ್ಪಥ ಕಾಮಗಾರಿ ಸದ್ಯಕ್ಕಂತೂ ಮುಗಿಯುವುದಿಲ್ಲ. ಅಲ್ಲಿಯವರೆಗೆ ನಮಗೆ ಹೋಗಲು ಉತ್ತಮ ರಸ್ತೆ ಬೇಕಲ್ಲವೆ? ಆ ಬಳಿಕನೂ ಸರ್ವೀಸ್ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಬೇಕು. ಅದಲ್ಲದೆ, ದಕ್ಷಿಣ ಕನ್ನಡದ ನೋಂದಣಿ ಇರುವ ವಾಹನಗಳಿಗೆ ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಟೋಲ್ ಅನ್ನು ಸಂಗ್ರಹಿಸಬಾರದು. ಯಾಕೆಂದರೆ ಇಲ್ಲಿ ಸರ್ವೀಸ್ ರಸ್ತೆಗಳನ್ನು ಸರಿಯಾಗಿ ವ್ಯವಸ್ಥೆ ಮಾಡಿಕೊಡಲಿಲ್ಲ ಹಾಗೂ ಈ ಭಾಗದಿಂದ ಮಂಗಳೂರಿಗೆ ಕೃಷಿ ಸಾಮಗ್ರಿಗಳನ್ನು ಆಗಾಗ ಮಾರಾಟಕ್ಕೆ ತೆಗೆದುಕೊಂಡು ಹೋಗಲು ಇರುತ್ತದೆ. ಆದ್ದರಿಂದ ಟೋಲ್ ಫ್ರೀ ಮಾಡಬೇಕು. ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಾಧಿಕಾರದ ರೀಜನಲ್ ಆಫೀಸರ್ ಹಾಗೂ ದ.ಕ. ಜಿಲ್ಲಾಧಿಕಾರಿಗೆ ರೈತ ಸಂಘಗಳ ಪದಾಽಕಾರಿಗಳನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿ, ರೀಜನಲ್ ಆಫೀಸರ್ ಹಾಗೂ ಹೆದ್ದಾರಿ ಪ್ರಾಽಕಾರದ ಯೋಜನಾ ನಿರ್ದೇಶಕರನ್ನು ಒಳಗೊಂಡು ಸಭೆ ನಡೆಸಲು ಮನವಿ ಮಾಡಿದ್ದೇನೆ.
ರೂಪೇಶ್ ರೈ ಅಲಿಮಾರ್, ಸಂಚಾಲಕರು, ರಾಜ್ಯ ರೈತ ಸಂಘ (ಹಸಿರು ಸೇನೆ), ದ.ಕ. ಜಿಲ್ಲೆ
ಹಾಗೂ ರೈತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥರು
ಗಗನಕುಸುಮಗಳಾದ ಅಧಿಕಾರಿಗಳು!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಮ್ಮ ಸಮಸ್ಯೆಗಳನ್ನು ಆಲಿಸಲು ಸಿಗುತ್ತಿಲ್ಲ. ಅವರು ಗ್ರಾಮ ಸಭೆಗಳಿಗೂ ಬರುತ್ತಿಲ್ಲ ಎನ್ನುವುದು ಉಪ್ಪಿನಂಗಡಿ ಭಾಗದ ಹೆಚ್ಚಿನ ಗ್ರಾ.ಪಂ.ಗಳ ಗ್ರಾಮ ಸಭೆಗಳಲ್ಲಿ ಜನಸಾಮಾನ್ಯರಿಂದ ವ್ಯಕ್ತವಾಗುವ ಆಕ್ರೋಶದ ಮಾತುಗಳು. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಽಕಾರಿಗಳು ಸಮಸ್ಯೆ ಹೇಳಲು ಜನ ಸಾಮಾನ್ಯರ ಕೈಗೆ ಸಿಗದೇ ಗಗನ ಕುಸುಮವಾದಂತಿದೆ.