ವರದಿ: ಸುನೀಲ್ ಕಾವು
ನಾನು ಕೂಡ ಕರಸೇವಕ-ಸುಬ್ರಹ್ಮಣ್ಯ ಶ್ರೀ
ಶ್ರೀರಾಮನ ಪುಣ್ಯಕಾರ್ಯದಲ್ಲಿ ಎಲ್ಲರೂ ಭಾಗಿಯಾಗೋಣ-ನನ್ಯ
ಅಕ್ಷತೆಯ ನೀಡಿ ಆಮಂತ್ರಣ-ಡಾ. ಕೃಷ್ಣಪ್ರಸನ್ನ
ಎಲ್ಲರೂ ರಾಮಸೇವಕನಾಗಿ ಬನ್ನಿ-ರವೀಂದ್ರ ಪಿ.
ಕಾವು: ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿ ಮಂದಿರದಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದಂಗವಾಗಿ ಪುತ್ತೂರು ತಾಲೂಕು ಗ್ರಾಮಾಂತರ ಸಮಾವೇಶದ ಮೂಲಕ ತಾಲೂಕಿನ 35 ಗ್ರಾಮಗಳಿಗೆ ಅಯೋಧ್ಯೆಯ ಅಕ್ಷತೆ ವಿತರಣಾ ಕಾರ್ಯಕ್ರಮವು ದ.14ರಂದು ಅಪರಾಹ್ನ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ನಡೆಯಿತು.
ನಾನು ಕೂಡ ಕರಸೇವಕ-ಸುಬ್ರಹ್ಮಣ್ಯ ಶ್ರೀ
ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀಶ್ರೀಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಮಾತನಾಡಿ ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾ ಮಹೋತ್ಸವವು ವಿಶ್ವದ ಎಲ್ಲಾ ಹಿಂದೂಗಳಿಗೆ ಅವಿಸ್ಮರಣೀಯ ದಿನವಾಗಿದೆ, ರಾಮ ನಾಮದ ಅದ್ಭುತ ಶಕ್ತಿಯು ಜೀವನವನ್ನು ಉದ್ಧರಿಸುವ ಮಂತ್ರವಾಗಿದೆ, 1992 ದ.6ರಂದು ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ನಾನು ಕೂಡ ಪೇಜಾವರ ಶ್ರೀಗಳ ಜತೆಯಲ್ಲಿ ಕರಸೇವಕನಾಗಿ ಕೆಲಸ ಮಾಡುವ ಯೋಗವನ್ನು ಪಡೆದಿದ್ದೆ, ಈಗ ಮತ್ತೊಮ್ಮೆ ಅಕ್ಷತೆ ವಿತರಣೆಯ ಮೂಲಕ ಶ್ರೀರಾಮನ ಕಾರ್ಯವನ್ನು ಮಾಡುವ ಸೌಭಾಗ್ಯ ನಮ್ಮ ಪಾಲಿಗೆ ಬಂದಿದೆ, ಈ ಅದ್ಭುತ ಕ್ಷಣ ಮತ್ತು ಭಾಗ್ಯವನ್ನು ಎಲ್ಲಾ ಹಿಂದೂಗಳು ಸಂಘಟಿತರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಶ್ರೀರಾಮನ ಪುಣ್ಯಕಾರ್ಯದಲ್ಲಿ ಎಲ್ಲರೂ ಭಾಗಿಯಾಗೋಣ-ನನ್ಯ
ಸ್ವಾಗತಿಸಿದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ಅಯೋಧ್ಯೆಯಿಂದ ಬಂದ ಅಕ್ಷತೆಯು ಪುತ್ತೂರಿನಿಂದ ಶ್ರೀಕ್ಷೇತ್ರ ಹನುಮಗಿರಿಯ ಕೋದಂಡರಾಮನ ಸನ್ನಿಧಿಗೆ ಬಂದು ಈ ದಿನ ತಾಲೂಕಿನ ಎಲ್ಲಾ ಗ್ರಾಮಗಳಿಗೆ ವಿತರಣೆಯಾಗಿ ಅಲ್ಲಿಂದ ಗ್ರಾಮದ ಉಪವಸತಿ ಮೂಲಕ ಎಲ್ಲಾ ಹಿಂದೂ ಮನೆಗಳಿಗೆ ತಲುಪಲಿದೆ ಈ ಪುಣ್ಯಕಾರ್ಯದಲ್ಲಿ ನಾವೆಲ್ಲರೂ ಒಟ್ಟು ಸೇರಿ ಕೆಲಸ ಮಾಡುವ ಎಂದು ಹೇಳಿದರು.
ಅಕ್ಷತೆಯ ನೀಡಿ ಆಮಂತ್ರಣ-ಡಾ. ಕೃಷ್ಣಪ್ರಸನ್ನ
ಪ್ರಸ್ತಾವನೆಗೈದ ವಿಶ್ವಹಿಂದೂ ಪರಿಷತ್‌ನ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನರವರು ಮಾತನಾಡಿ ಶ್ರೀರಾಮ, ಆಂಜನೇಯ, ಭಾರತಮಾತೆ ಸಮಾಗಮ ಆಗಿರುವ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಅಯೋಧ್ಯೆಯ ಅಕ್ಷತೆ ವಿತರಣೆ ನಡೆಯುತ್ತಿರುವುದು ಸೂಕ್ತ ಜಾಗವಾಗಿದೆ. ಜಗತ್ತಿನಲ್ಲಿರುವ ಎಲ್ಲಾ ಹಿಂದೂ ದೇಶಗಳಿಗೆ ಅಯೋಧ್ಯೆಯು ಪುಣ್ಯಸ್ಥಳವಾಗಿದೆ, ಹಾಗಾಗಿ ಶ್ರೀರಾಮ ಮಂದಿರ ರಾಷ್ಟ್ರಮಂದಿರವಾಗಲಿದೆ, ಶ್ರೀರಾಮನ ಮಂದಿರದ ಪ್ರತಿಷ್ಠಾ ಮಹೋತ್ಸವಕ್ಕೆ ಎಲ್ಲಾ ಹಿಂದೂ ಮನೆಗಳಿಗೆ ಅಕ್ಷತೆ ನೀಡಿ ಆಮಂತ್ರಣ ನೀಡುವುದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಉದ್ದೇಶವಾಗಿದೆ ಎಂದು ಹೇಳಿದರು.
ಎಲ್ಲರೂ ರಾಮಸೇವಕನಾಗಿ ಬನ್ನಿ-ರವೀಂದ್ರ ಪಿ.
ಅಕ್ಷತೆ ವಿತರಣೆಯ ಮಾಹಿತಿ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಮುಖ್ ರವೀಂದ್ರ ಪಿ.ರವರು ಮಾತನಾಡಿ ಅನೇಕ ವರ್ಷಗಳಿಂದ ನಮ್ಮ ಹಿರಿಯರು ಮಾಡಿದ ಹೋರಾಟದ ಫಲವನ್ನು ಅನುಭವಿಸುವ, ನೋಡುವ ಭಾಗ್ಯ ನಮ್ಮ ಪಾಲಿಗೆ ಬಂದಿದೆ, ಹಾಗಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ಕೆ ಯಾರೂ ರಾಜಕೀಯ ಲಾಭವನ್ನು ಬಯಸದೆ ರಾಮಸೇವಕರಾಗಿ ಬನ್ನಿ, ಶ್ರೀರಾಮನ ಕೆಲಸದಲ್ಲಿ ಯಾರಿಗೂ ನೋವಾಗದಂತೆ ಕೆಲಸ ಮಾಡಬೇಕು, ಅಕ್ಷತೆ ವಿತರಣಾ ಅಭಿಯಾನದಲ್ಲಿ ಯಾವುದೇ ಸಂಗ್ರಹವೂ ಇಲ್ಲ, ಖರ್ಚು ಇರುವುದಿಲ್ಲ, ಅಕ್ಷತೆ ವಿತರಣೆ ಕಾರ್ಯದಲ್ಲಿ ಗ್ರಾಮದ ಎಲ್ಲಾ ಉಪವಸತಿಗಳಲ್ಲೂ ಯಾವೊಂದು ಹಿಂದೂ ಮನೆಯನ್ನು ಬಿಡದೇ ಜ.15ರ ಒಳಗೆ ಅಭಿಯಾನ ಮುಗಿಸಬೇಕು ಎಂದು ಹೇಳಿದರು.
1992ರ ಕರಸೇವಕರಿಗೆ ಗೌರವಾರ್ಪಣೆ:
ಸಭೆಯಲ್ಲಿದ್ದ 1992ರ ಅಯೋಧ್ಯೆ ಕರಸೇವೆಯಲ್ಲಿ ಭಾಗವಹಿಸಿದ್ದ ಎಲ್ಲಾ ಕರಸೇವಕರಿಗೆ ವೇದಿಕೆಯಲ್ಲಿ ಸ್ವಾಮೀಜಿಯವರಿಂದ ಅಕ್ಷತೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಆರಂಭದ ಮುನ್ನ 13 ಬಾರಿ ರಾಮಜಪ ಮಾಡಲಾಯಿತು. ಅಕ್ಷತೆ ವಿತರಣೆಯ ಪ್ರಚಾರಕ ಡಾ. ಅಖಿಲೇಶ್‌ರವರು ಕಾರ್ಯಕ್ರಮ ನಿರ್ವಹಿಸಿ, ವಿ.ಹಿಂ.ಪ.ನ ಸಂಚಾಲಕ ರವಿ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ 35 ಗ್ರಾಮಗಳಿಂದ ಸುಮಾರು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಕೋದಂಡರಾಮನ ಸನ್ನಿಧಿಯಲ್ಲಿ ಅಕ್ಷತೆ ವಿತರಣೆ:
ಸಭಾಕಾರ್ಯಕ್ರಮದ ಬಳಿಕ ಶ್ರೀಕ್ಷೇತ್ರ ಹನುಮಗಿರಿಯ ಶ್ರೀ ಕೋದಂಡರಾಮನ ಸನ್ನಿಧಿಯಲ್ಲಿ ಪುತ್ತೂರು ಗ್ರಾಮಾಂತರ ತಾಲೂಕಿನ ಎಲ್ಲಾ 35 ಗ್ರಾಮಗಳಿಗೆ ಸುಬ್ರಹ್ಮಣ್ಯ ಶ್ರೀಗಳು ಅಕ್ಷತೆ ವಿತರಣೆ ಮಾಡಿದರು. ಎಲ್ಲಾ ಗ್ರಾಮಗಳಿಂದ ತಂಡವಾಗಿ ಬಂದಿದ್ದ ಹಿಂದೂ ಪ್ರಮುಖರುಗಳು ಅಕ್ಷತೆಯನ್ನು ಸ್ವೀಕರಿಸಿ ತಮ್ಮ ಗ್ರಾಮದ ದೇವಸ್ಥಾನಗಳಿಗೆ ಕೊಂಡೊಯ್ದರು.