ಉಪ್ಪಿನಂಗಡಿ: ಜೀರ್ಣೋದ್ಧಾರಗೊಳ್ಳುತ್ತಿರುವ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನೂತನ ರಾಜಗೋಪುರ ನಿರ್ಮಾಣದ ಜವಾಬ್ದಾರಿಯನ್ನು ಭಕ್ತರ ಸಮ್ಮುಖದಲ್ಲಿ ಶಿಲ್ಪಿಗೆ ವಹಿಸಿಕೊಡುವ ಮೂಲಕ ಮಠದ ಆಡಳಿತ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಅವರು ರಾಜಗೋಪುರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಮಠದ ಜೀಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಸಭಾಭವನ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಮಠದ ಮುಂಭಾಗದಲ್ಲಿ ರಾಜಗೋಪುರ ನಿರ್ಮಾಣದ ಯೋಜನೆಯೂ ಇದ್ದು, ಡಿ.14ರಂದು ಬಾಲಾಲಯದಲ್ಲಿರುವ ಶ್ರೀ ರಾಯರ ಮುಂದೆ ವಿಶೇಷ ಸಂಕಲ್ಪ ಪ್ರಾರ್ಥನೆ ನೆರವೇರಿಸಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪಿಲಿಗೂಡು ಶ್ರೀ ಚಾಮುಂಡೇಶ್ವರಿ ಶಿಲ್ಪಕಲಾ ಕೇಂದ್ರದ ಪದ್ಮನಾಭ ಶಿಲ್ಪಿ ಅವರಿಗೆ ಫಲ- ತಾಂಬೂಲ ನೀಡುವ ಮೂಲಕ ಕಾಮಗಾರಿಯ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಮಠದ ಅರ್ಚಕ ರಾಘವೇಂದ್ರ ಭಟ್ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರೀಶ್ ಉಪಾಧ್ಯಾಯ, ಪದಾಧಿಕಾರಿಗಳಾದ ರಾಧಾಕೃಷ್ಣ ನಾಕ್, ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಶಿವಪ್ರಸಾದ್, ಸದಾನಂದ ನೆಕ್ಕಿಲಾಡಿ, ವಿದ್ಯಾಧರ ಜೈನ್, ಸುಧಾಕರ ಶೆಟ್ಟಿ ಕೋಟೆ, ಹರೀಶ್ ನಾಯಕ್ ನಟ್ಟಿಬೈಲು, ಜಯಪ್ರಕಾಶ್ ಶೆಟ್ಟಿ, ಸ್ವರ್ಣೇಶ್, ಶಶಿಧರ, ಭಕ್ತಾದಿಗಳಾದ ಚಿದಾನಂದ ಹೆಗ್ಡೆ ಸುಧೀರ್ ಹೆಗ್ಡೆ, ಸುಂದರ ಆದರ್ಶನಗರ, ಸುನೀಲ್ ವಿಟ್ಲ, ಆದೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ನಾೖಕ್ ಮಾತನಾಡಿ, ಮಠದ ಕಾಮಗಾರಿ ಭರದಿಂದ ಸಾಗುತ್ತಿದೆ. ತಾನು ತನ್ನ ಕುಟುಂಬದ ನೆಲೆಯಲ್ಲಿ ಒಂದು ಲಕ್ಷ ರೂ. ದೇಣಿಗೆಯನ್ನು ನೀಡುತ್ತೇನೆ ಎಂದು ಘೋಷಿಸಿದರಲ್ಲದೆ, ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತಾಧಿಗಳು ಹಾಗೂ ದಾನಿಗಳ ಇನ್ನಷ್ಟು ಸಹಕಾರ ಬೇಕಾಗಿದೆ ಎಂದು ತಿಳಿಸಿದರು.