ಪುತ್ತೂರು: ರೋಟರಿ ಜಿಲ್ಲೆ 3181ನಲ್ಲಿ ಬರುವ ರೋಟರಿ ಸಂಸ್ಥೆಗಳ ಆಮಂತ್ರಣ ಪತ್ರವನ್ನು ಕನ್ನಡದಲ್ಲಿ ಮುದ್ರಿಸುವ ಕುರಿತು ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ಅವರು ರೋಟರಿ ಕ್ಲಬ್ ಪುತ್ತೂರು ಸ್ವರ್ಣಕ್ಕೆ ಅಧಿಕೃತ ಭೇಟಿ ನೀಡಿದ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ವಿನಂತಿ ಪತ್ರ ನೀಡಿದರು. ಈ ವೇಳೆ ಉಮೇಶ್ ನಾಯಕ್ ಅವರು ಕನ್ನಡದಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿದ ರೋಟರಿ ಸ್ವರ್ಣವನ್ನು ಅಭಿನಂದಿಸಿದರು.
ವಿನಂತಿ ಪತ್ರ: ರೋಟರಿ ಗವರ್ನರ್ ಗೆ ಉಮೇಶ್ ನಾಯಕ್ ಅವರು ಸಲ್ಲಿಸಿದ ವಿನಂತಿ ಪತ್ರದಲ್ಲಿ, ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದರೂ ಸ್ಥಳೀಯ ಭಾಷೆ – ಸಂಸ್ಕೃತಿ -ಆಚಾರ ವಿಚಾರ- ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಪ್ರಸ್ತುತ ಹೆಚ್ಚಿನ ಜನರು ಹಾಗೂ ಸಂಘ-ಸಂಸ್ಥೆಗಳು ಆಂಗ್ಲ ಭಾಷಾ ವ್ಯಾಮೋಹದಿಂದ ಅಥವಾ ಆಂಗ್ಲ ಭಾಷೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸುವುದು ಪ್ರತಿಷ್ಠೆಯ ಸಂಕೇತವೆಂಬ ಭ್ರಮೆಯಿಂದ ಆಮಂತ್ರಣ ಪತ್ರಿಕೆಯನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸುವ ಸಂಪ್ರದಾಯ ಬೆಳೆಸಿಕೊಂಡಿರುತ್ತಾರೆ. ಇದರಿಂದಾಗಿ ಕನ್ನಡ ಭಾಷೆ ಹಾಗೂ ಲಿಪಿ ಅಳಿವಿನಂಚಿಗೆ ಸಾಗುವ ಭಯ ಕಾಡುತ್ತಿದೆ.
ಈ ಸಂದರ್ಭದಲ್ಲಿ ಅಲ್ಲೋ ಇಲ್ಲೋ ಎಂಬಂತೆ ಕೆಲ ರೋಟರಿ ಸಂಸ್ಥೆಗಳು ತಾವು ತಮ್ಮ ಸಂಸ್ಥೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ನಡದಲ್ಲಿ ಮುದ್ರಿಸುವ ಸಂಪ್ರದಾಯವನ್ನು ಬೆಳೆಸಿರುವುದು ಸಂತೋಷದ ವಿಚಾರವಾಗಿದೆ. ಇದು ಕನ್ನಡ ಭಾಷೆ ಹಾಗೂ ಲಿಪಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸಲಿದೆ.
ಇದಕ್ಕಾಗಿ ಕನ್ನಡದಲ್ಲಿ ಮುದ್ರಿಸಿದ ರೋಟರಿ ಸಂಸ್ಥೆಗಳಿಗೆ ಹಾಗೂ ತಮಗೆ ಅಭಿನಂದನೆಯ ಜೊತೆಗೆ ಧನ್ಯವಾದಗಳನ್ನು ತಿಳಿಸುತ್ತಾ ನಮ್ಮ 3181ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿಯೂ ಮುದ್ರಿಸಬೇಕೆಂದು ತಮ್ಮ ಅಧೀನದಲ್ಲಿ ಬರುವ ರೋಟರಿ ಸಂಸ್ಥೆಗಳಿಗೆ ಸೂಚಿಸಬೇಕೆಂದು ಗೌರವ ಪೂರ್ವಕ ವಿನಂತಿ. ಪ್ರಸ್ತುತ ರೋಟರಿ ಜಿಲ್ಲೆ 3181 ಮೈಸೂರು ಕೊಡಗು, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡಿದ್ದು ಒಟ್ಟು 87 ರೋಟರಿ ಸಂಸ್ಥೆಗಳಿರುವ ಈ ಜಿಲ್ಲೆಯಲ್ಲಿ ಸುಮಾರು 3700 ಸದಸ್ಯರಿದ್ದಾರೆ ಎಂದು ತಿಳಿಸಲಾಗಿದೆ.