ಕಾನೂನು ಬಾಹಿರ ಮರಳುದಂದೆ ತಡೆಯುವಂತೆ ಸರಕಾರ, ಅಧಿಕಾರಿಗಳಿಗೆ ಆಗ್ರಹ-ದ.ಕ.ಜಿಲ್ಲಾ ನಾನ್‌ಸಿಆರ್‌ಝಡ್ ಮರಳುಗಾರಿಕೆ ಮಾರಾಟಗಾರರ ಸಂಘದಿಂದ ಪತ್ರಿಕಾಗೋಷ್ಠಿ

0

ಪುತ್ತೂರು: ನಾನ್‌ಸಿಆರ್‌ಝಡ್ ಮೂಲಕ ಕಾನೂನುಬದ್ಧವಾಗಿ ಅಧೀಕೃತವಾಗಿ ಮರಳುಗಾರಿಕೆ ನಡೆಯುತ್ತಿದೆ. ನಾನ್ ಸಿ.ಆರ್.ಜಡ್‌ನಲ್ಲಿ ಮರಳಿಗೆ ಅಭಾವವಿಲ್ಲ. ಆದರೆ ಕಾನೂನು ಬಾಹಿರವಾಗಿ ನಡೆಯುವ ಮರಳುಗಾರಿಕೆಯಿಂದ ನಮಗೆ ತೊಂದರೆ ಆಗಿದೆ. ಕಾನೂನು ಬಾಹಿರವಾಗಿ ಅನಧೀಕೃತವಾಗಿ ನಡೆಯುವ ಮರಳುಗಾರಿಕೆ ವಿರುದ್ಧ ಸರಕಾರ ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ದ.ಕ.ಜಿಲ್ಲಾ ನಾನ್‌ಸಿಆರ್‌ಝಡ್ ಮರಳುಗಾರಿಕೆ ಮಾರಾಟಗಾರರ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಪೂರೈಕೆ ಕೊರತೆಯಿದೆ, ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮರಳನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿವಿಲ್ ಕಾಂಟ್ರಾಕ್ಟರ‍್ಸ್ ಅಸೋಸಿಯೇಷನ್ ಪತ್ರಿಕೆ ಮೂಲಕ ಹೇಳಿಕೆ ನೀಡಿದ್ದರು. ಆದರೆ ನಾನ್‌ಸಿಆರ್‌ಜಡ್‌ನಲ್ಲಿ ಎಲ್ಲೂ ಮರಳುಗಾರಿಕೆ ನಿಂತಿಲ್ಲ. ಕೆಲವೊಂದು ಸಂದರ್ಭ ಇಲಾಖೆ ಮತ್ತು ಸಾಮಾಜಿಕ ಕಾರ್ಯಕರ್ತರು ನಮ್ಮ ರ‍್ಯಾಂಪ್‌ಗೆ ಬಂದು ತೊಂದರೆ ಕೊಡುತ್ತಾರೆ. ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಈ ಸಂದರ್ಭ ಲೋಕಾಯುಕ್ತ ನಮ್ಮಲ್ಲಿ ಮಾಹಿತಿ ಕೇಳಿದಾಗ ನಮಗೆ ಒಂದಷ್ಟು ದಾಖಲೆ ನೀಡುವಲ್ಲೇ ಸಮಯ ವ್ಯರ್ಥವಾಗುತ್ತದೆ. ಇಂತಹ ಒತ್ತಡಗಳನ್ನು ನಮಗೆ ಹಾಕುವುದರಿಂದ ತೊಂದರೆ ಆಗುತ್ತಿದೆ. ಸರಕಾರದಿಂದ ಅಧಿಕೃತವಾಗಿ ಗುತ್ತಿಗೆ ಪಡೆದು ಮರಳು ಮಾಡುತ್ತಿರುವ ನಮ್ಮ ರ‍್ಯಾಂಪ್‌ಗಳ ಮಾಹಿತಿ ಬೇಕದಾದಲ್ಲಿ ಗಣಿ ಇಲಾಖೆಯನ್ನು ಸಂಪರ್ಕಿಸಬಹುದು. ಅದು ಬಿಟ್ಟು ನಮಗೆ ತೊಂದರೆ ಕೊಡಬೇಡಿ. ನಮ್ಮ ಎಲ್ಲಾ ಬ್ಲಾಕ್‌ಗಳಲ್ಲೂ ವೇಬ್ ಬ್ರಿಡ್ಜ್ ಅಳವಡಿಸಲಾಗಿದೆ. ಅಲ್ಲಿಂದ ಜಿಪಿಎಸ್ ಮೂಲಕವೇ ಮರಳು ಸಾಗಾಟ ನಡೆಯುತ್ತದೆ. ನಮಗೆ ಕಿರುಕುಳ ಕೊಡುವುದು ಬಿಟ್ಟು ಕಾನೂನು ಬಾಹಿರವಾಗಿ ಸಾಗಾಟವಾಗುತ್ತಿರುವ ಮರಳುಗಾರಿಕೆ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸರಕಾರ ಮತ್ತು ಅಧಿಕಾರಿಗಳನ್ನು ಆಗ್ರಹಿಸಿದರು. ನಮ್ಮ ಬ್ಲಾಕ್‌ಗಳಲ್ಲಿ ಬೆಳಿಗ್ಗೆ ಗಂಟೆ 6 ರಿಂದ ಸಂಜೆ ಗಂಟೆ 6ರ ತನಕ ಕಾರ್ಯ ನಿರ್ವಹಿಸಲಾಗುತ್ತದೆ. ರಾತ್ರಿ ಹೊತ್ತು ಮರಳು ಸಾಗಾಟ ನಾವು ಮಾಡುವುದಿಲ್ಲ. ಆದರೆ ರಾತ್ರಿ ಸಮಯ ರಾಜಾರೋಷವಾಗಿ ಕಾನೂನು ಬಾಹಿರ ಮರಳುಸಾಗಾಟ ನಡೆಯುತ್ತಿದೆ. ಅದನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಯಾರು ಅದನ್ನು ತಡೆಯಬೇಕೋ ಅದನ್ನು ಮಾಡದೆ ನಮಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಕಾನೂನು ಬಾಹಿರ ಮರಳುಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ನಮ್ಮಲ್ಲಿ ಮಂಗಳೂರಿನಲ್ಲಿ 4, ಬಂಟ್ವಾಳದಲ್ಲಿ 3, ಬೆಳ್ತಂಗಡಿಯಲ್ಲಿ 5, ಪುತ್ತೂರಿನಲ್ಲಿ 2, ಕಡಬದಲ್ಲಿ 11 ಮರಳು ಬ್ಲಾಕ್ ಇದೆ ಎಂದರು.


ಟೆಂಡರ್‌ನ ಶೇ.50 ಮಾರ್ಚ್ ಒಳಗೆ ಪಾವತಿಸಬೇಕಾಗಿದೆ:
ಅಧೀಕೃತ ಮರಳುಗಾರಿಕೆ ನಾನ್‌ಸಿಆರ್‌ಜಡ್‌ನಲ್ಲಿ ಟೆಂಡರ್ ಮೂಲಕ ಪಡೆದ ಬ್ಲಾಕ್‌ಗಳಿಗೆ ಸಂಬಂಧಿಸಿ ಮಾರ್ಚ್ ಅಂತ್ಯದೊಳಗೆ ಶೇ.50 ಪಾವತಿಸಬೇಕು. ಆದರೆ ಇಲ್ಲಿ ಕಾನೂನುಬಾಹಿರವಾಗಿ ಮರಳುಸಾಗಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಬ್ಲಾಕ್‌ಗಳಿಂದ ಮರಳು ಹೋಗುತ್ತಿಲ್ಲ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ. ನಮ್ಮಲ್ಲಿ ಒಟ್ಟು ಉತ್ಪಾದನೆಯಲ್ಲಿ ಮಾರಾಟವಾಗದಿದ್ದರೂ ಸರಕಾರಕ್ಕೆ ಹಣ ಪಾವತಿ ಮಾಡುವ ಮೂಲಕ ನಮಗೆ ನಷ್ಟ ಸಂಭವಿಸುತ್ತಿದೆ ಎಂದು ದ.ಕ.ಜಿಲ್ಲಾ ನಾನ್‌ಸಿಆರ್‌ಝಡ್ ಮರಳುಗಾರಿಕೆ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮೋನು ಬೆಳ್ತಂಗಡಿ, ಕೋಶಾಧಿಕಾರಿ ಸುರೇಶ್ ಕೆ ಕಡಬ, ಜೊತೆ ಕಾರ್ಯದರ್ಶಿ ಕುಂಡಡ್ಕ, ಸದಸ್ಯರಾದ ಸಂಜೀವ ಆರ್ ಬೆಳ್ತಂಗಡಿ, ಅಶೋಕ್ ಬೆಳ್ಳಿಪ್ಪಾಡಿ, ಮಹಮ್ಮದ್ ಜಕಾರಿಯ ಅದೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here