ಉಪ್ಪಿನಂಗಡಿ: ಈ ಹಿಂದೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಾಗಿ ಸ್ವಾಧೀನಪಡಿಸಿಕೊಂಡ ಜಾಗಕ್ಕಿಂತಲೂ ಕಾಮಗಾರಿ ಸಂದರ್ಭ ಹೆಚ್ಚುವರಿ ಜಾಗದಲ್ಲಿ ಕಾಮಗಾರಿ ನಡೆಸಲು ಗುತ್ತಿಗೆದಾರರು ಮುಂದಾಗಿದ್ದು, ಇದರಿಂದ ದೇವಸ್ಥಾನವನ್ನು ಧ್ವಂಸಗೊಳಿಸಬೇಕಾದ ಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಹೆಚ್ಚುವರಿ ಜಾಗ ನೀಡುವುದಕ್ಕೆ ಹಾಗೂ ಇಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವುದಕ್ಕೆ ನನ್ನ ಆಕ್ಷೇಪವಿರುವುದಾಗಿ ಬಜತ್ತೂರು ಗ್ರಾಮದ ಬೆದ್ರೋಡಿಯ ಚಂದ್ರ ಗೌಡ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಸರ್ವೇ ನಂ. 68/28ರಲ್ಲಿ ನಾನು 10 ಸೆಂಟ್ಸ್ ಜಾಗವನ್ನು ಹೊಂದಿದ್ದು, ಅದರಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ನಾನು ಈ ಹಿಂದೆ ಜಾಗವನ್ನು ಬಿಟ್ಟು ಕೊಟ್ಟಿದ್ದು, ಅದಕ್ಕೆ ಪರಿಹಾರವನ್ನು ಪಡೆದುಕೊಂಡಿದ್ದೇನೆ. ಅಲ್ಲದೇ, ಆ ಸಂದರ್ಭ ನನ್ನ ಜಾಗದಲ್ಲಿದ್ದ ಶ್ರೀ ಪುರದಮ್ಮ ದೇವಸ್ಥಾನವನ್ನು ಅಲ್ಲಿಂದ ಒಡೆದು, ಹಿಂದಕ್ಕೆ ನಿರ್ಮಿಸಿದ್ದೇನೆ. ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಹೋಗುವ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗುರುತು ಕೂಡಾ ಹಾಕಿದ್ದಾರೆ. ಆದರೆ ಈಗ ಕಾಮಗಾರಿ ನಡೆಯುತ್ತಿದ್ದು, ಈ ಹಿಂದೆ ಸರ್ವೇ ಮಾಡಿ ಗುರುತು ಹಾಕಿದ ಜಾಗಕ್ಕಿಂತಲೂ ಹೆಚ್ಚುವರಿ ಜಾಗದಲ್ಲಿ ಕಾಮಗಾರಿ ನಡೆಸಲು ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರು ಮುಂದಾಗಿದ್ದು, ಇದನ್ನು ಪ್ರಶ್ನಿಸಿದಾಗ ಇಲ್ಲೊಂದು ಬಸ್ ನಿಲ್ದಾಣವನ್ನು ನಿರ್ಮಿಸುವ ಯೋಜನೆಯೂ ಇದೆ ಎಂದು ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಜಾಗದಲ್ಲಿ ಕಾಮಗಾರಿ ನಡೆಸಿದ್ದೇ ಆದಲ್ಲಿ ಶ್ರೀ ಪುರದಮ್ಮ ದೇವಾಲಯಕ್ಕೆ ಹಾನಿವುಂಟಾಗುವುದಲ್ಲದೆ, ದೇವಾಲಯದ ಅರ್ಧ ಭಾಗವನ್ನು ಮತ್ತೆ ಧ್ವಂಸ ಮಾಡಬೇಕಾಗಿದೆ. ಆದ್ದರಿಂದ ಈಗ ಹಾಕಿರುವ ಗುರುತಿಗಿಂತ ಹೆಚ್ಚುವರಿ ಜಾಗವನ್ನು ಹಾಗೂ ಇಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವುದಕ್ಕೆ ನನ್ನ ಆಕ್ಷೇಪವಿದೆ ಎಂದು ಯೋಜನಾ ನಿರ್ದೇಶಕರಿಗೆ ನೀಡಿದ ಲಿಖಿತ ಮನವಿಯಲ್ಲಿ ಅವರು ತಿಳಿಸಿದ್ದಾರೆ.