ಆಲಂಕಾರು: ವಲಯ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ

0

ಸಮುದಾಯ ಭವನ ಸ್ವಾಭಿಮಾನದ ಸಂಕೇತ-ಶ್ರೀ ಧರ್ಮಪಾಲನಾಥ ಸ್ವಾಮೀಜಿ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ಮತ್ತು ಸವಣೂರು ವಲಯದ ಗ್ರಾಮ ಸಮಿತಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಡಿ.26ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಕಡಬ ಹೊಸಮಠದಲ್ಲಿನ ನೂತನ ನಿವೇಶನದಲ್ಲಿ ನಡೆಯುವ ನೂತನ ಸಮುದಾಯ ಭವನದ ಶಿಲಾನ್ಯಾಸ, ನೂತನ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ, ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆ ಡಿ.14ರಂದು ಸಂಜೆ ಆಲಂಕಾರು ಭಾರತಿ ಶಾಲಾ ಸಭಾಂಗಣದಲ್ಲಿ ನಡೆಯಿತು.


ಆಮಂತ್ರಣ ಪತ್ರ ಬಿಡುಗಡೆ ಹಾಗೂ ಪದಗ್ರಹಣ ನೆರವೇರಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು, ಸಮುದಾಯದ ಆತ್ಮವಾಗಿರುವ ಸಮುದಾಯ ಭವನ ಒಕ್ಕಲಿಗ ಸಮಾಜದ ಸ್ವಾಭಿಮಾನದ ಸಂಕೇತವಾಗಿದೆ. ನಮ್ಮಲ್ಲಿ ಆತ್ಮಾಭಿಮಾನ ಇರಬೇಕು. ಇದರಿಂದ ಸಾಮಾಜಿಕ ಸಂಘಟನೆಯ ಜೊತೆಗೆ ಅಸ್ತಿತ್ವವೂ ಉಳಿಯಲಿದೆ ಎಂದು ನುಡಿದರು. ನಾವು ಇನ್ನೊಬ್ಬರು ಹೆಮ್ಮೆ ಪಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ಒಂದೇ ವರ್ಷದಲ್ಲಿ ಭವನ ನಿರ್ಮಾಣಗೊಳ್ಳುವ ಮೂಲಕ ದಾಖಲೆ ನಿರ್ಮಾಣವಾಗಬೇಕೆಂದು ಹೇಳಿದ ಸ್ವಾಮೀಜಿಯವರು ಈ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಕಡಬ ತಾಲೂಕಿನ ಒಕ್ಕಲಿಗ ಸಮಾಜದ ಪ್ರತಿ ಮನೆಯ ಎಲ್ಲಾ ಸದಸ್ಯರೂ ಪಾಲ್ಗೊಳ್ಳಬೇಕು. ಇದಕ್ಕಾಗಿ ಗ್ರಾಮ, ವಲಯಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕೆಂದು. ಬೃಹತ್ ಕಾರ್ಯಕ್ರಮದ ಮೂಲಕ ಶಕ್ತಿಪ್ರದರ್ಶನ ಆಗಬೇಕು ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಅವರು ಮಾತನಾಡಿ, ಕಡಬದಲ್ಲಿ ಒಕ್ಕಲಿಗ ಸಮುದಾಯ ಭವನ ಇದ್ದರೂ ಅದು 500 ಜನಕ್ಕೆ ಸೀಮಿತವಾಗಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಬಲ್ಯ ಗ್ರಾಮದ ಹೊಸಮಠದಲ್ಲಿ 3 ಎಕ್ರೆ ಜಾಗ ಖರೀದಿಸಲಾಗಿದೆ. ಈ ಯೋಜನೆಗೆ 1ಲಕ್ಷ ರೂ.,ನೀಡಿದವರನ್ನು ಸ್ಥಾಪಕ ಸದಸ್ಯರನ್ನಾಗಿ ಮಾಡಲಾಗುತ್ತಿದ್ದು ಈಗಾಗಲೇ 178 ಮನೆಯವರು ತಲಾ ರೂ.1 ಲಕ್ಷದಂತೆ ದೇಣಿಗೆ ನೀಡಿದ್ದಾರೆ. ಡಿ.20ರ ತನಕ ಸ್ಥಾಪಕ ಸದಸ್ಯತ್ವ ಪಡೆಯಲು ಅವಕಾಶವಿದೆ. ಹೊಸಮಠದ ನಿವೇಶನದಲ್ಲಿ ಸುಮಾರು 15 ಕೋಟಿ ರೂ.ವೆಚ್ಚದ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಇದಕ್ಕೆ ಕಡಬ ತಾಲೂಕಿನ ಒಕ್ಕಲಿಗ ಸಮಾಜದ 1 ಮನೆಯವರು ಕನಿಷ್ಠ 10 ಸಾವಿರ ರೂ. ದೇಣಿಗೆ ನೀಡಿ ಸಹಕರಿಸಬೇಕೆಂದು ಹೇಳಿದರು.

ಡಿ.26ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ಸುಮಾರು 20 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ, ಡಿ.ಕೆ.ಶಿವಕುಮಾರ್, ಡಿ.ವಿ.ಸದಾನಂದ ಗೌಡ, ಆರ್.ಅಶೋಕ್, ಡಾ.ಎಂ.ಸಿ.ಸುಧಾಕರ್, ಹೆಚ್.ಡಿ.ಕುಮಾರಸ್ವಾಮಿ, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ, ಮಂತರ್‌ಗೌಡ ಸೇರಿದಂತೆ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ಸಮಾಜದ ಶಕ್ತಿಯ ಅನಾವರಣ ಆಗಬೇಕು. ಈ ಮೂಲಕ ಇತಿಹಾಸ ಪುಟ ಸೇರಬೇಕೆಂದು ಹೇಳಿದರು.


ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಡಬ ತಾಲೂಕು ಒಕ್ಕಲಿಗ ಗೌಡ ಸಂಘ 8 ತಿಂಗಳ ಹಿಂದೆ ಆರಂಭಗೊಂಡಿದೆ. ಗ್ರಾಮ ಸಮಿತಿ, ಯುವ ಸಮಿತಿ, ಮಹಿಳಾ ಸಮಿತಿಯೂ ರಚಿಸಲಾಗಿದೆ. ಕಡಬ ತಾಲೂಕಿನ 42 ಗ್ರಾಮಗಳಲ್ಲಿ ಒಕ್ಕಲಿಗ ಸಮುದಾಯದ 16 ಸಾವಿರ ಮನೆಗಳಿವೆ. 400ಕ್ಕೂ ಹೆಚ್ಚು ಮನೆಗಳಿಗೆ ತಾಲೂಕು ಸಮಿತಿ ಪದಾಧಿಕಾರಿಗಳು ಭೇಟಿ ನೀಡಿದ್ದಾರೆ. ಡಿ.26ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗಿಯಾಗಬೇಕೆಂದು ಹೇಳಿದರು.


ಕಡಬ ತಾಲೂಕು ಘಟಕದ ಉಪಾಧ್ಯಕ್ಷ ದಯಾನಂದ ಗೌಡ ಆಲಡ್ಕ, ನಿರ್ದೇಶಕರಾದ ಆಶಾತಿಮ್ಮಪ್ಪ ಗೌಡ, ನೀಲಾವತಿ ಶಿವರಾಮ ಗೌಡ ಮುಂಗ್ಲಿಮನೆ, ಪ್ರವೀಣ್ ಗೌಡ ಕುಂಟ್ಯಾನ, ಕಡಬ ತಾಲೂಕು ಯುವ ಘಟಕದ ಅಧ್ಯಕ್ಷ ಬಿ.ಎಂ.ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ಬಲ್ಯ, ಪ್ರಧಾನ ಕಾರ್ಯದರ್ಶಿ ಸುಧೀಶ್ ಗೌಡ ಪಟ್ಟೆ ಕೊಯಿಲ, ಮಹಿಳಾ ಘಟಕದ ಅಧ್ಯಕ್ಷೆ ವೀಣಾರಮೇಶ್ ಗೌಡ ಕೊಳ್ಳೆಸಾಗು, ಪ್ರಧಾನ ಕಾರ್ಯದರ್ಶಿ ಲಾವಣ್ಯಹೇಮಂತ್ ಮಂಡೆಕರ, ಆಲಂಕಾರು ವಲಯ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ಕಾರ್ಯದರ್ಶಿ ಮಂಜಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆಲಂಕಾರು ವಲಯ ಯುವ ಸಮಿತಿ ಗೌರವಾಧ್ಯಕ್ಷ ಚಕ್ರಪಾಣಿ ಬಾಕಿಲ ಸ್ವಾಗತಿಸಿ, ಕುಂತೂರು ಗ್ರಾಮ ಸಮಿತಿ ಕಾರ್ಯದರ್ಶಿ ಅಶೋಕ್ ಶೇಡಿ ವಂದಿಸಿದರು. ಆಲಂಕಾರು ವಲಯ ಯುವ ಸಮಿತಿಯ ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಆಶಾ ತಿಮ್ಮಪ್ಪ ಗೌಡ ಪ್ರಾರ್ಥಿಸಿದರು. ಆಲಂಕಾರು ಹಾಗೂ ಸವಣೂರು ವಲಯದ ಗ್ರಾಮ ಸಮಿತಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಮಂತ್ರಣ ಬಿಡುಗಡೆ:
ಡಿ.26ರಂದು ಹೊಸಮಠ ಬಲ್ಯದ ಸ್ವಂತ ನಿವೇಶನದಲ್ಲಿ ನಡೆಯುವ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ, ಕಡಬ ತಾಲೂಕು ಘಟಕದ ಪದಗ್ರಹಣ ಹಾಗೂ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರವನ್ನು ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.


ಪದಗ್ರಹಣ:ಆಲಂಕಾರು ಹಾಗೂ ಸವಣೂರು ವಲಯದ ವಿವಿಧ ಗ್ರಾಮ ಸಮಿತಿಗಳ ನೂತನ ಪದಾಧಿಕಾರಿಗಳಿಗೆ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಶಾಲು ಹಾಕಿ ಪದಗ್ರಹಣ ನೆರವೇರಿಸಿದರು.

LEAVE A REPLY

Please enter your comment!
Please enter your name here