ಕುಕ್ಕೆ: ಚಂಪಾಷಷ್ಠಿ ಮಹೋತ್ಸವಕ್ಕೆ ಸಿದ್ದಗೊಳ್ಳುತಿದೆ ಬೆತ್ತದ ರಥ – ರಥಗಳ ಹಿಂದಿದೆ ಮೂಲ ನಿವಾಸಿಗಳ ಕರಕೌಶಲ್ಯ- ಶ್ರದ್ಧಾ ಭಕ್ತಿಯ ಕಾಯಕ

0

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಸಂಭ್ರಮದಲ್ಲಿದ್ದು ಜಾತ್ರಾ ಮಹೋತ್ಸವದಲ್ಲಿ ಬಹುಪಾಲು ರಥಗಳದ್ದೆ ಆಗಿದ್ದು, ಕುಕ್ಕೆಗೆ ತೇರಿನ ಊರು ಎಂದೂ ಕರೆಯುವುದಿದೆ. ಜಾತ್ರೆಗೆ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಆಕರ್ಷಕ ಬೆತ್ತದ ರಥಗಳು ಭೂಷಣವಾಗಿದೆ. ಶ್ರೀ ಕ್ಷೇತ್ರದ ಜಾತ್ರೆಗೆ ಸಾಲಾಂಕೃತ ರಥಗಳ ನಿರ್ಮಾಣ ಕಾರ್ಯ ಭರದಿಂದ ಆರಂಭಗೊಂಡಿದೆ.

ಕಾರ್ತಿಕ ಮಾಸದ ಶುದ್ಧ ಪೌರ್ಣಮಿ ದಿನ ಸಹಸ್ರನಾಮಾರ್ಚನೆಯ ಬಳಿಕ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತವನ್ನು ಕ್ಷೇತ್ರ ಪುರೋಹಿತರು ವೈದಿಕ ವಿಧಿ ವಿಧಾನ ನೆರವೇರಿಸುತ್ತಾರೆ. ನಂತರ ಪೂರ್ವಶಿಷ್ಟ ಸಂಪ್ರದಾಯದಂತೆ ರಥ ಕಟ್ಟಲಿರುವ ಮೂಲನಿವಾಸಿ ಮಲೆಕುಡಿಯ ಜನಾಂಗದ ಗುರಿಕಾರರಿಗೆ ರಥ ಕಟ್ಟಲು ಗಂಧ ಪ್ರಸಾದದ ರೂಪದಲ್ಲಿ ರಥ ಕಟ್ಟಲು ವೀಳ್ಯವನ್ನು ನೀಡುತ್ತಾರೆ. ದೇವಳದ ಪಾಟಾಳಿಯವರ ನಿರ್ದೇಶನದಂತೆ, ಗುರಿಕಾರರ ನೇತೃತ್ವದಲ್ಲಿ ಶ್ರೀ ದೇವಳದಿಂದ ಪಡಿಯಕ್ಕಿ ಪಡೆದು ರಥಕಟ್ಟುವ ಬೆತ್ತದ ಹಗ್ಗ (ಮುರಿಹಗ್ಗ) ತರಲು ಮಲೆಕುಡಿಯ ಜನಾಂಗದವರು ಕಾಡಿಗೆ ತೆರಳಿ ಸುಮಾರು 4 ದಿನಗಳ ಕಾಲ ಕಾಡಿನಲ್ಲಿ ಬೆತ್ತದ ಹಗ್ಗ ಸಂಗ್ರಹಿಸಿ ಐದನೇ ದಿನ ಕ್ಷೇತ್ರಕ್ಕೆ ಆಗಮಿಸಿ ರಥ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಬೆತ್ತದ ರಥ:
ಯಾವುದೇ ಹಗ್ಗವನ್ನು ಬಳಸದೇ ಬೆತ್ತಗಳಿಂದಲೇ ವಿಶಿಷ್ಟವಾದ ಸುಂದರ ರಥವನ್ನು ಇಲ್ಲಿ ಮೂಲ ನಿವಾಸಿಗಳು ನಿರ್ಮಿಸುತ್ತಿದ್ದಾರೆ. ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಮತ್ತೊಂದು ವಿಶೇಷ. ಕುಕ್ಕೆ ಕ್ಷೇತ್ರದ ಜಾತ್ರೆಯಲ್ಲಿ ರಥಗಳು ಪ್ರಧಾನವಾಗಿವೆ. ಆದುದರಿಂದ ಸಾಲಾಂಕೃತ ರಥಗಳು ಜಾತ್ರೆಯ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ಇದೀಗ ಮೂಲನಿವಾಸಿ ಮಲೆಕುಡಿಯ ಜನಾಂಗದವರು ಕಾಡಿನಿಂದ ಸಂಗ್ರಹಿಸಿದ ಬೆತ್ತವನ್ನು ಉಪಯೋಗಿಸಿಕೊಂಡು ಪವಿತ್ರವಾದ ರಥಗಳನ್ನು ಪೂರ್ವಶಿಷ್ಠ ಸಂಪ್ರದಾಯದಂತೆ ನಿರ್ಮಿಸುವ ಕಾರ್ಯವನ್ನು ಭಕ್ತಿ ಶ್ರದ್ಧೆಯಿಂದ ನಡೆಸುತ್ತಿದ್ದಾರೆ.

ಕುಕ್ಕೆಯಲ್ಲಿ ಯಾವುದೇ ಹಗ್ಗ ಬಳಸದೇ ಕೇವಲ ಬಿದಿರು, ಮರದ ಹಲಗೆ ಹಾಗೂ ಬೆತ್ತವನ್ನು ಉಪಯೋಗಿಸಿ ರಥವನ್ನು ಕೌಶಲ್ಯಪೂರಿತವಾಗಿ ಮೂಲನಿವಾಸಿಗಳು ನಿರ್ಮಿಸುತ್ತಿದ್ದಾರೆ. ಬಾರಿ ಗಾತ್ರದ ಬೆತ್ತವನ್ನು 8 ಆಕಾರದಲ್ಲಿ ರಥದ ಮೇಲ್ಭಾಗಕ್ಕೆ ಬಿಗಿದು ಅನಂತರ ರಥದ ಅಟ್ಟೆಯನ್ನು ಬಿದಿರು ಹಾಗೂ ಬೆತ್ತಗಳಿಂದ ಬ್ರಹ್ಮರಥದದ ಮೇಲ್ಭಾಗವನ್ನು ರಚಿಸುತ್ತಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾವುದೇ ಗಂಟುಗಳನ್ನು ಹಾಕಲಾಗುವುದಿಲ್ಲ ಬದಲಾಗಿ ಬೆತ್ತವನ್ನು, ಹೂವನ್ನು ಸುರಿಯುವ ಮಾದರಿಯಲ್ಲಿ ಸುರಿದು ರಥವನ್ನು ಗಟ್ಟಿ ಮಾಡಲಾಗುತ್ತದೆ.

ರಥ ಕಟ್ಟಲು ಒಬ್ಬರು 5ರಂತೆ 250 ಕ್ಕೂ ಅಧಿಕ ಮುರಿಹಗ್ಗ(ಬೆತ್ತದ ಹಗ್ಗ) ಬಳಸುತ್ತಾರೆ. ಬ್ರಹ್ಮರಥಕ್ಕೆ ಸುಮಾರು 200 ತುಂಡು ಬಿದಿರನ್ನು ಬಳಸಲಾಗುತ್ತದೆ. ಅಲ್ಲದೆ ಮೇಲಿಂದ ಕೆಳಗೆ 100ಕ್ಕೂ ಅಧಿಕ ಅರುಗಳನ್ನು ಅಳವಡಿಸಲಾಗುವುದು. ಮಹಾರಥದ ಐದು ಅಂತಸ್ತುಗಳಿಗೆ 8 ಆಕಾರದಲ್ಲಿ ಬೆತ್ತವನ್ನು ಸುತ್ತಲಾಗುತ್ತದೆ. ಸುಮಾರು 20ರಿಂದ 25 ಬೆತ್ತಗಳನ್ನು ಒಂದಾಗಿಸಿ 8 ಆಕೃತಿಯ ಬೆತ್ತವನ್ನು ರಚಿಸಲಾಗುತ್ತದೆ. ಆದರೂ 8 ಆಕೃತಿಯ ರಚನೆಗೆ ಬಳಸುವ ಬೆತ್ತದ ಸಂಖ್ಯೆಯು ಬೆತ್ತದ ಸಾಂದ್ರತೆಗೆ ಅನುಗುಣವಾಗಿ ಬಳಸಿಕೊಳ್ಳಲಾಗುತ್ತದೆ. ಸುಮಾರು 7000 ಪತಾಕೆಗಳನ್ನು ಬ್ರಹ್ಮರಥಕ್ಕೆ ಅಳವಡಿಸಲಾಗುತ್ತದೆ. ಬಳಿಕ ಫಲವಸ್ತುಗಳು, ಹೂ, ಬಾಳೆ, ಮಾವಿನ ಎಲೆಗಳಿಂದ ಸಿಂಗಾರ ಮಾಡಲಾಗುವುದು. ನಂತರ ರಥ ಎಳೆಯುವ ಬೆತ್ತವನ್ನು ಅಳವಡಿಸಲಾಗುತ್ತದೆ. ಸುಮಾರು 6 ಅಡಿ ಉದ್ದದ 12 ಬೆತ್ತವನ್ನು ಬ್ರಹ್ಮರಥವನ್ನು ಎಳೆಯಲು ಬಳಸಲಾಗುತ್ತದೆ. ಇದೀಗ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಹಿರಿಯರ ಮಾರ್ಗದರ್ಶನದಂತೆ ರಥನಿರ್ಮಾಣ ಕಾರ್ಯ ನಡೆಯುತ್ತಿದೆ.

ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ರಥದ ಕೆಲಸ ಆರಂಭಿಸಿದ್ದಾರೆ. ರಥದ ಮೇಲ್ಭಾಗವನ್ನು ಬೆತ್ತದಿಂದಲೇ ನಿರ್ಮಿಸಲಾಗುತ್ತಿದೆ. ರಥ ಎಳೆಯಲು ಕೂಡಾ ಬೆತ್ತವನ್ನೇ ಬಳಸುವುದು ವಿಶೇಷ, ಉಳಿದಂತೆ ರಥಕಟ್ಟಲು ಬೆತ್ತದ ಸೀಳುಗಳನ್ನು ಬಳಸಿದರೆ, ಎಳೆಯಲು ಉಪಯೋಗಿಸುವ ಬೆತ್ತ ಮಾತ್ರ ಇಡಿಯಾಗಿರುತ್ತದೆ. ಈ ರೀತಿಯಾಗಿ ಮೂಲ ನಿವಾಸಿಗಳಾದ ಮಲೆ ಕುಡಿಯ ಜನಾಂಗದವರು ಆಕರ್ಷಕ ಶೈಲಿಯಲ್ಲಿ ರಥವನ್ನು ನಿರ್ಮಿಸಿ, ಇದಕ್ಕೆ ಬಟ್ಟೆಯ ಪತಾಕೆಗಳಿಂದ ಸಿಂಗರಿಸುತ್ತಾರೆ.

LEAVE A REPLY

Please enter your comment!
Please enter your name here