ಕುಕ್ಕೆ ಸುಬ್ರಹ್ಮಣ್ಯಕ್ಕೆ ಧಾರ್ಮಿಕ ನೆಲೆಯಿಂದ ಅದರದ್ದೇ ಆದ ಚಾರಿತ್ರಿಕ ಹಿನ್ನಲೆಯಿದೆ.ಇನ್ನೇನು ಚಂಪಾ ಷಷ್ಠಿ ಹತ್ತಿರ ಬರುತ್ತಿರುವ ಹಿನ್ನಲೆಯಿಂದ ಹಾಗೂ ದಶಂಬರ 11 ನ್ನು ವಿಶ್ವಪರ್ವತ ದಿನವನ್ನಾಗಿ ಆಚರಿಸಿದ ಹಿನ್ನೋಟದಿಂದ ಕುಮಾರಪರ್ವತ ಪಯಣದ ಅವಲೋಕನ ಇಲ್ಲಿದೆ.
ಕುಮಾರ ಪರ್ವತವು ಕರ್ನಾಟಕದ ಪಶ್ಚಿಮ ಘಟ್ಟದ ಒಂದು ಭಾಗ. ಬೆಟ್ಟದತಪ್ಪಲಿನಲ್ಲಿರುವಂತದ್ದು ಪ್ರಾಚೀನ ಹಾಗೂ ಪ್ರಸಿದ್ಧವಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ,ಸುಬ್ರಹ್ಮಣ್ಯನಿಗೆ ಇರುವ ಇನ್ನೊಂದು ಹೆಸರೇ ಕುಮಾರ. ಈ ಹೆಸರೇ ಪರ್ವತಕ್ಕಿದೆ. ದೇವಾದಿದೇವನಾದ ಶಿವನ ಮಗನೇ ಕುಮಾರ. ಬಾಲ್ಯದಲ್ಲಿಯೇ ತಾರಕಾಸುರನನ್ನು ಕೊಂದು ಸಮರ್ಥ ಯೋಧನೆನಿಸಿಕೊಂಡವನು. ಈತನು ಯೋಗಿಗಳ ರೀತಿಯಲ್ಲಿ ಕುಮಾರಪರ್ವತದ ತುದಿಯಲ್ಲಿ ನಿಂತ ಸ್ಥಿತಿಯಲ್ಲಿ ಸ್ವ ಇಚ್ಚೆಯಿಂದ ನಿರ್ವಾಣ ಹೊಂದಿ ಮಹಾಸಮಾಧಿಯಾದ ಎನ್ನುವ ಐತಿಹ್ಯವಿದೆ. ಹಾಗಾಗಿ ಸುಬ್ರಹ್ಮಣ್ಯದಲ್ಲಿ ಚಂಪ ಷಷ್ಠಿ ಮಹೋತ್ಸವದ ಆರಂಭವು ಕುಮಾರ ಪರ್ವತದ ತುದಿಯಲ್ಲಿರುವ ಶಿವಲಿಂಗಕ್ಕೆ ದೀಪವನ್ನು ಪ್ರಜ್ವಲಿಸುವ ಮೂಲಕ ಚಾಲನೆ ದೊರೆಯುತ್ತದೆ ಎನ್ನುವ ಪ್ರತೀತಿಯಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಹಚ್ಚಹಸಿರಿನ ಕಾಡಿನ ದಟ್ಟವಾದ ಹೊದಿಕೆಯೊಂದಿಗೆ ಶೇಷಪರ್ವತವು ಎತ್ತರವಾಗಿ ನಿಂತಿದೆ.ಶೇಷಪರ್ವತವನ್ನು ದಾಟಿದ ನಂತರ ಕುಮಾರಪರ್ವತ ಅಥವಾ ಪುಷ್ಪಗಿರಿ ಗೋಚರಿಸುತ್ತದೆ. ಇದು ಶಿಖರದ ಹೆಸರು. ಇಲ್ಲಿಗೆ ನಡೆಸುವ ಚಾರಣವು ಕುಮಾರಪರ್ವತ ಟ್ರಕ್ಕಿಂಗ್ ಎಂದೇ ಜನಪ್ರಿಯವಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಟ್ಟಾಗಲೆಲ್ಲಾ ನನಗೆ ಅನಿಸುತ್ತಿದ್ದದ್ದು ಜೀವನದಲ್ಲಿ ಒಮ್ಮೆಯಾದರೂ ಕುಮಾರ ಪರ್ವತವನ್ನು ಏರಬೇಕೆಂಬ ಆಸೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವಂತೆ ಅದರ ಸವಾಲಿನ ಒಂದು ಪರಿಜ್ಞಾನವಿಲ್ಲದೆ ನಾನು ಹಾಗೂ ನನ್ನ ಐದು ಜನಸ್ನೇಹಿತರು ಕುಮಾರಪರ್ವತವನ್ನು ಏರುವ ಸಂಕಲ್ಪವನ್ನು ಮಾಡಿಕೊಂಡೆವು. ದಶಂಬರ 07ರಂದು ಮಧ್ಯಾಹ್ನ ಒಂದು ಗಂಟೆಗೆ ನಮ್ಮ ಪಯಣವನ್ನು ಆರಂಭಿಸಿದೆವು. ಪರ್ವತದ ಬುಡ ತಲುಪಿದಾಗ ಏರಬಲ್ಲೆನಾ ಎಂಬ ಅನುಮಾನ ಸುರುವಾಯಿತು. ನಮ್ಮ ಮುಂದಿತ್ತು ಸವಾಲಿನ ಏರಿಕೆ.
1712 ಮೀ (5,600 ಅಡಿ) ಗಿಂತ ಸ್ವಲ್ಪ ಹೆಚಾಗಿರುವ ಕುಮಾರಪರ್ವತವು ಕರ್ನಾಟಕದ ಅತ್ಯಂತ ಸವಾಲಿನ ಚಾರಣವಾಗಿದೆ. ಇದು ಕೊಡಗು ಜಿಲ್ಲೆಯ ಎರಡನೇ ಅತೀ ಎತ್ತರದ ಶಿಖರವಾಗಿದ್ದು, ಕರ್ನಾಟಕದ 6 ನೇ ಅತೀ ಎತ್ತರದ ಶಿಖರವಾಗಿದೆ. ಅರಣ್ಯದ ಹಾದಿಯು ತುಂಬಾ ಕಡಿದಾದ ಮತ್ತು ಸಡಿಲವಾದ ಕೆಸರು ಮತ್ತು ಜಲ್ಲಿ ಕಲ್ಲುಗಳಿಂದಾಗಿ ಹೆಚ್ಚಾಗಿ ಜಾರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಕಾಡಿನೊಳಗೆ ಇಳಿಯಬೇಕಾಗುತ್ತದೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಗಳಿರುವುದರಿಂದ ಮುಂಜಾಗ್ರತ ಕ್ರಮವಾಗಿ ಅರಣ್ಯ ಇಲಾಖೆಯು ಪ್ರತಿ ವರ್ಷ ಮಾರ್ಚ್ 01 ರಿಂದ ಸೆಪ್ಟೆಂಬರ 30 ರವರೆಗೆ ಕುಮಾರಪರ್ವತವನ್ನು ಮುಚ್ಚುತ್ತದೆ. ಈ ಟ್ರಕ್ಕಿಂಗ್ 22 ಕಿಲೋಮೀಟರ್ ದೂರವನ್ನು
ಕ್ರಮಿಸುತ್ತದೆ. ಸಾಮಾನ್ಯವಾಗಿ ಎರಡು ದಿನಗಳಲ್ಲಿ ಮಾಡಲಾಗುತ್ತದೆ.
ನಮ್ಮ ಪಯಣವು ಎರಡು ದಿನವನ್ನು ಒಳಗೊಂಡಿತ್ತು. ಸುಮಾರು 5 ಕಿಲೋಮೀಟರ್ನ್ನು ಕ್ರಮಿಸಿದಾಗ ಸಿಗುವುದು ಭಟ್ಟರ ಮನೆ. ಸುಮಾರು ಸಂಜೆ 5.30 ಕ್ಕೆ ಅಲ್ಲಿಗೆ ತಲುಪಿದೆವು. ಆದಿನ ನಾವು ಅಲ್ಲಿಯೇ ವಿಶ್ರಾಂತಿಯನ್ನು ಪಡೆದುಕೊಂಡೆವು. ಮುಂದೆ ಅರಣ್ಯ ಕಚೇರಿಗೆ ತೆರೆಳಿ ಮರುದಿನದ ಶಿಖರದ ಏರಿಕೆಗೆ ಶುಲ್ಕವನ್ನು ಪಾವತಿಸಿದೆವು. ಬೆಳಿಗ್ಗೆ 5.30 ಕ್ಕೆ ಪ್ರಾರಂಭವಾಯಿತು ನಮ್ಮ ಮುಂದಿನ ಸವಾಲಿನೆ ಏರಿಕೆ. ಈ ಟ್ರಕ್ಕಿಂಗ್ನ್ನು ಚಾರಣಿಗರು ಹೆಚ್ಚು ಇಷ್ಟಪಡಬಹುದು. ಏಕೆಂದರೆ ದಟ್ಟ ಕಾಡುಗಳಿಂದ ಹಿಡಿದು ವಿಶಾಲವಾದ ಹುಲ್ಲುಗಾವಲು ಮತ್ತು ಜಲಪಾತಗಳನ್ನು ನಾವಿಲ್ಲಿ ನೋಡಬಹುದು. ಬೆಳಿಗ್ಗೆ 10.45ಕ್ಕೆ ನಾವು ಶಿಖರದ ತುದಿಯನ್ನು ತಲುಪಿದೆವು. ಮೋಡಗಳ ಗುಂಪು ನಮ್ಮನ್ನು ಸ್ವಾಗತಿಸುವಂತೆ ಕಾಣುತ್ತಿತ್ತು.
ಶಿಖರದ ಮೇಲೇರಿ ನಿಂತಾಗ ಆದ ಸಂತೋಷ ಅಷ್ಟಿಷ್ಟಲ್ಲ. ಶಿಖರ ತಲುಪಿದ ತೃಪ್ತಿಯಲ್ಲಿ ಸುತ್ತಲೂ ದಿಟ್ಟಿಸಿದರೆ ಕಣ್ಣೆರಡು ಸಾಲದೆಂಬಂತೆ ಕಾಣುವ ಪ್ರಕೃತಿ ಸೌಂದರ್ಯ, ಒಂದು ನಿಮಿಷ ಮೌನವಾಗಿ ಕುಳಿತುಕೊಳ್ಳಬೇಕೆನಿಸಿತು. ನಿಶ್ಚಲ ಮನಸ್ಥಿತಿ, ಎದುರಿಗೆ ಕಾಣುವ ಔನ್ನತ್ಯ, ಪ್ರಶಾಂತ ವಾತವರಣದಲ್ಲಿ ಏಳಬೇಕೆನಿಸದೆ ಸ್ವಲ್ಪ ಹೊತ್ತು ಹಾಗೆಯೇ ಕುಳಿತುಕೊಂಡೆವು. ಜಗದಗೊಂದಲಗಳೆಲ್ಲ ದೂರವಾಗಿ ಮನಸ್ಸು ನಿರಾಳವಾಗಿತ್ತು. ಯೋಚನೆಗಳೇ ಇಲ್ಲದ ಸ್ತಬ್ದ ಸ್ಥಿತಿ ನಿರ್ಮಾಣಗೊಂಡಿತ್ತು. ಪರ್ವತವನ್ನು ಏರುತ್ತಾ ಹೋದ ಹಾಗೆ ನಾವೆಷ್ಟು ಚಿಕ್ಕವರುಎಂಬುದನ್ನು ಚಾರಣವು ಅರ್ಥ ಮಾಡಿಸಿತ್ತು. ಅಷ್ಟು ಮಾತ್ರವಲ್ಲದೆ ನಾವು ಪ್ರಬುದ್ಧತೆಯ ಇನ್ನೊಂದು ಮೆಟ್ಟಿಲನ್ನು ಏರಿದಂತಾಗಿತ್ತು.
ಕಡಿದಾದ ಶಿಖರವನ್ನು ಮತ್ತೆ ಕೆಳಗೆ ಇಳಿಯಬೇಕಲ್ಲ ಎಂಬ ಯೋಚನೆ ಬಂದಾಗಮತ್ತೊಮ್ಮೆ ಮೈ ಜುಮ್ಮೆಂದಿತು. 7 ಕಿಲೋಮೀಟರ್ ಕೆಳಗೆ ಇಳಿದು ಭಟ್ಟರ ಮನೆ ತಲುಪಿದಾಗ ಮಧಾಹ್ನ 2.30 ಗಂಟೆ. ನಂತರ ಸಂಜೆ 3.45 ಕ್ಕೆ ಅಲ್ಲಿಂದ ಪಯಣವನ್ನು ಬೆಳೆಸಿ ಪರ್ವತದ ತಪ್ಪಲನ್ನು ತಲುಪಿದಾಗ ಸಂಜೆ 6.00 ಗಂಟೆಯಾಗಿತ್ತು. ಆ ಸಮಯದಲ್ಲಿ ನೆಮ್ಮದಿಯ ನಿಟ್ಟುಸಿರು ನಮ್ಮಿಂದ ಹೊರಬಂತು.
ಟ್ರಕ್ಕಿಂಗ್ ಎಂಬುದು ಕೇವಲ ಏರಿಳಿಯುವ ವಿಷಯವಲ್ಲ;
ಅಲ್ಲಿ ಜೀವವಿದೆ. ಪ್ರತಿಹಂತದಲ್ಲೂ ಕಲಿಯುವ ವಿಷಯವಿದೆ, ಪ್ರತಿ ಸಂದರ್ಭಕ್ಕೆ ತಕ್ಕಹಾಗೆ ಒಗ್ಗಿಕೊಳ್ಳುವುದನ್ನು ಇದುಕಲಿಸುತ್ತದೆ. ಸವಾಲನ್ನು ಎದುರಿಸಲು ಇದು ಸಹಾಯ ಮಾಡುತ್ತದೆ. ಒಟ್ಟಿನಲ್ಲಿ ಟ್ರಕ್ಕಿಂಗ್ ಸಾಹಸಮಯವಾದ ಎಲ್ಲರೂ ಇಷ್ಟಪಡಬಹುದಾದ ಚಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಸ್ಥಳೀಯವಾಗಿ ಪ್ರತೀತವಾಗಿರುವ ಮಾತೇನೆಂದರೆ ಪರ್ವತವು ಮನಸ್ಸು ಮಾಡಿದರೆ ಮಾತ್ರ ಚಾರಣರಿಗೆ ಮೇಲೇರಲುಸಾಧ್ಯವಾಗುತ್ತದೆ ಎನ್ನುವುದು.
ಲೇಖನ : ಅಶ್ವಿನ್ ಎಲ್. ಶೆಟ್ಟಿ
ಆಡಳಿತಾಧಿಕಾರಿಗಳು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು.