ಬೌದ್ಧಿಕ ಆಯಾಮದ ಶಿಕ್ಷಣ ಸಿಗಬೇಕು: ಸುಬ್ರಹ್ಮಣ್ಯ ಸ್ವಾಮೀಜಿ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಡಿ.16ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಬೌದ್ಧಿಕ ಆಯಾಮ, ಆಕಾರದಲ್ಲಿ ಶಿಕ್ಷಣ ಕೊಡಬೇಕು. ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಗಳು ಇದಕ್ಕೆ ಒತ್ತು ನೀಡುತ್ತಿವೆ. ಆದ್ದರಿಂದಲೇ ಪೋಷಕರೂ ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಗಳ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಮಕ್ಕಳ ಮನಸ್ಸು, ಬುದ್ಧಿ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಕೇಂದ್ರಿಕರಿಸುವ ಕೆಲಸವನ್ನೂ ವಿದ್ಯಾಸಂಸ್ಥೆಗಳು ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯು ಶ್ರಮ ವಹಿಸಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೇಜಾವರ ಶ್ರೀಗಳ ಮೇಲಿನ ಅಪಾರ ಗೌರವದಿಂದ ಇಲ್ಲಿನ ಆಡಳಿತ ಮಂಡಳಿಯು ಸ್ವಾರ್ಥವಿಲ್ಲದೆ ಸೇವೆ ಮಾಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಂಸ್ಥೆಯ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವ ಮೂಲಕ ತಮ್ಮ ಜೀವನದಲ್ಲೂ ಉತ್ತುಂಗಕ್ಕೇರಬೇಕೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಅದೇ ದಾರಿಯಲ್ಲಿ ಮುನ್ನಡೆಯಬೇಕು. ಇದರಿಂದ ಯಶಸ್ಸು ಪಡೆಯಲು ಸಾಧ್ಯವಿದೆ. ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳ ನಡುವಿನ ಸಂಬಂಧ ಗಟ್ಟಿಗೊಳಿಸಲು ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ, ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ ಮಾತನಾಡಿ, ಶ್ರದ್ಧೆ, ಆತ್ಮವಿಶ್ವಾಸ, ಓದುವ ಕಲೆ ಇದ್ದಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ. ರಾಮಕುಂಜದಲ್ಲಿ ಅತ್ಯುತ್ತಮ ಶಿಕ್ಷಕರ ತಂಡವಿದ್ದು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗಿದ್ದಾರೆ. ವಿದ್ಯಾರ್ಥಿಗಳು ಅವಕಾಶ ಬಳಸಿಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ಪುತ್ತೂರು ಪಡೀಲ್‌ನಲ್ಲಿರುವ ಶ್ರೀದುರ್ಗಾ ಕ್ಲಿನಿಕ್‌ನ ವೈದ್ಯ ಡಾ.ಶೈಲೇಶ್ ಬಿ.ಎಸ್. ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಕೀರ್ತಿಯನ್ನು ಇನ್ನಷ್ಟೂ ಎತ್ತರಕ್ಕೆ ಕೊಂಡೊಯ್ಯಬೇಕೆಂದು ಹೇಳಿದರು. ಹಿರಿಯ ವಿದ್ಯಾರ್ಥಿ ಆಲಂಕಾರು ಆಕಾರ್ ಎಸೋಸಿಯೇಟ್ಸ್‌ನ ಸಿವಿಲ್ ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಮಾತನಾಡಿ, ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥರ ಹುಟ್ಟೂರು ರಾಮಕುಂಜಕ್ಕೆ ದೇಶ, ವಿದೇಶದಲ್ಲೂ ವಿಶೇಷ ಗೌರವವಿದೆ. ಅವರ ಮಾರ್ಗದರ್ಶನದ ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಎಲ್ಲಾ ಚಟುವಟಿಕೆಗಳಿಗೂ ಅವಕಾಶವಿದೆ. ವಿದ್ಯಾರ್ಥಿಗಳು ಯಾಂತ್ರಿಕೃತ ಬದುಕಿನಿಂದ ಹೊರಬಂದು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಕುವೆಚ್ಚಾರು ಮಾತನಾಡಿ, ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ. ಇದರಲ್ಲಿ ಪ್ರಾಂಶುಪಾಲರ, ಉಪನ್ಯಾಸಕರ, ಮುಖ್ಯಶಿಕ್ಷಕರ ಹಾಗೂ ಶಿಕ್ಷಕರ ಶ್ರಮವಿದೆ. ಇಲ್ಲಿನ ವಿದ್ಯಾರ್ಥಿಗಳೂ ಶಿಸ್ತು, ಪ್ರಾಮಾಣಿಕತೆಯಲ್ಲಿ ಎತ್ತಿದ ಕೈ. ಹಿರಿಯ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘವೂ ಪ್ರೋತ್ಸಾಹ ನೀಡುತ್ತಿದೆ. ಸುಮಾರು 25 ಲಕ್ಷ ರೂ.ವೆಚ್ಚದ ಸೈನ್ಸ್ ಪಾರ್ಕ್ ಇದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನೀಟ್, ಸಿಇಟಿ, ಎನ್‌ಟಿಎಸ್‌ಇ, ಎನ್‌ಎಂಎಂಎಸ್ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪ್ರಣವ ಪೌಂಡೇಶನ್, ವಿಷ್ಣು ದಯಾ, ಎಂಆರ್‌ಪಿಎಲ್ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಆರ್ಥಿಕ ನೆರವು ನೀಡುತ್ತಿವೆ. ಪೇಜಾವರ ಹಾಗೂ ಸುಬ್ರಹ್ಮಣ್ಯ ಮಠಾಧೀಶರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ ಎಂದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ ಟಿ.ನಾರಾಯಣ ಭಟ್, ಕೋಶಾಧಿಕಾರಿ ಕೆ.ಸೇಸಪ್ಪ ರೈ, ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ರವಿಕುಮಾರ್, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಪ್ರೀತಮ್ ಅವರು ವಿದ್ಯಾರ್ಥಿ ಚಟುವಟಿಕೆಗಳ ಕುರಿತು ವರದಿ ವಾಚಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್ ಸ್ವಾಗತಿಸಿ, ಪ್ರಾಂಶುಪಾಲ ಚಂದ್ರಶೇಖರ ಕೆ.ವಂದಿಸಿದರು. ಶಿಕ್ಷಕಿ ನಿಶ್ಚಿತಾ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ:
ಕಬಡ್ಡಿ ತರಬೇತುದಾರ ಮಂಜುನಾಥ್, ಸಂಸ್ಥೆಯ ಆಲ್ಬಮ್ ಸಾಂಗ್ ರಚನೆ ಮಾಡಿದ ಹಿರಿಯ ವಿದ್ಯಾರ್ಥಿಗಳಾದ ಚರಣ್ ಹಾಗೂ ಸಿರೀಸ ಅವರನ್ನು ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು. ಸಮಾರಂಭದ ಅತಿಥಿಗಳನ್ನೂ ಸನ್ಮಾನಿಸಿ ಗೌರವಿಸಲಾಯಿತು. ಪ್ರಾಂಶುಪಾಲ ಚಂದ್ರಶೇಖರ ಕೆ., ಮುಖ್ಯಶಿಕ್ಷಕ ಸತೀಶ್ ಭಟ್ ಅವರು ಅತಿಥಿಗಳನ್ನು ಪರಿಚಯಿಸಿದರು.
ದತ್ತಿನಿಧಿ/ಬಹುಮಾನ ವಿತರಣೆ:
ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ದತ್ತಿನಿಧಿ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಅನುಷಾ, ಸ್ವಾತಿ ಎನ್., ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ, ವೆಂಕಟೇಶ್ ದಾಮ್ಲೆ, ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೆ., ಉಪನ್ಯಾಸಕ ಚೇತನ್ ಮೊಗ್ರಾಲ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಹಿರಿಯ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಶಿಕ್ಷಕ ಪ್ರವೀಣ್‌ಕುಮಾರ್ ವಿಜೇತರ ಹೆಸರು ವಾಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಪ್ರತಿಭಾ ಪುರಸ್ಕಾರ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ನಡೆಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯದ ತುಳು ಹಾಸ್ಯಮಯ ನಾಟಕ ‘ಮಲ್ಲ ಸಂಗತಿಯೇ ಅತ್ತ್’ ಪ್ರದರ್ಶನಗೊಂಡಿತು. ಡಿ.17ರಂದು ಬೆಳಿಗ್ಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಮಧ್ಯಾಹ್ನ ಪೇಜವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ದ ಪ್ರಯುಕ್ತ ಶ್ರೀಗಳಿಗೆ ಗುರುವಂದನೆ ನಡೆಯಲಿದೆ.