ಪುತ್ತೂರು: ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಇದರ 19ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವವು ಡಿ.16ರಂದು ಬೊಳುವಾರು ವಿಶ್ವಕರ್ಮ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಾಟ್ಯರಂಗ ಪುತ್ತೂರು ಇದರ ನಿರ್ದೇಶಕಿ ಮಂಜುಳಾ ಸುಬ್ರಹ್ಮಣ್ಯ ಮಾತನಾಡಿ, ಎರಡು ಜಡೆ ಸೇರಿದರೆ ಅಲ್ಲಿ ಜಗಲವಾಗುತ್ತದೆ ಎಂಬ ಮಾತಿದೆ. ಆದರೆ ಮಹಿಳಾ ಮಂಡಳಿಯು ಅದನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಮನೆಯ ಜವಾಬ್ದಾರಿ ಜೊತೆಗೆ ಸಮಾಜದ ಅಭಿವೃದ್ಧಿಗೆ ಮಹಿಳೆಯರನ್ನು ಒಟ್ಟು ಸೇರಿಸುತ್ತಿರುವ ಮೂಲಕ ಮಹಿಳಾ ಘಟಕದ ಸಮಾಜದ ಸಮಷ್ಠಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಸಾಮಾಜಿಕ ಸಂಘಟಿತರಾಗಿ ತಳಮಟ್ಟದಲ್ಲಿರುವ ಸಮಾಜ ಬಾಂಧವರನ್ನು ಒಟ್ಟು ಸೇರಿಸಬೇಕು. ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಪ್ರತಿಯೊಬ್ಬರು ನಮ್ಮದು ಎಂಬ ಭಾವನೆಯಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಲಹಾ ಸಮಿತಿ ಸದಸ್ಯರಾದ ಎಸ್.ಎನ್ ಜಗದೀಶ ಆಚಾರ್ಯ ಮಾತನಾಡಿ, ಜೀವನದಲ್ಲಿ ಸತತ ಪರಿಶ್ರಮ ಮುಖ್ಯ.ಸಾಧನೆಯ ಉದ್ದೇಶ ನಮ್ಮಲ್ಲಿರಬೇಕು. ಸಾಧನೆಗೆ ಛಲ ಮುಖ್ಯ. ಅದಕ್ಕೆ ವಯಸ್ಸು ಅಡ್ಡಿಬರುವುದಿಲ್ಲ. ಪ್ರಾಮಾಣಿಕತೆ, ಶ್ರದ್ಧೆಯಿಂದ ಭಾಗವಹಿಸಬೇಕು ಎಂದ ಅವರು ಮಹಿಳಾ ಮಂಡಳಿಯ ಸಾಮಾಜಿಕ ಸೇವಾ ಕಾರ್ಯಗಳು ನಿರಂತರವಾಗಿರಲಿ ಎಂದರು.
ವಿಶ್ವ ಬ್ರಾಹ್ಮಣ ಸಮಾಜ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ ಮಾತನಾಡಿ, ವಿಶ್ಚಕರ್ಮ ಮಹಿಳಾ ಸಮಾಜವು19 ವರ್ಷಗಳಿಂದ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ಇನ್ನ ಆರು ವರ್ಷದಲ್ಲಿ ರಜತ ಮಹೋತ್ಸವ ಆಚರಿಸಲಿದ್ದು, ಇದರ ಸವಿನೆನಪಿಗಾಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಪೂರಕವಾಗುವಂತೆ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಲ್ಲಿರುವ ಮಾನಸಿಕ ಸ್ಥೈರ್ಯ ವೃದ್ಧಿಸಲು ತರಬೇತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜದ ಮೂರು ಸಂಘಗಳಲ್ಲಿ ಮಹಿಳಾ ಮಂಡಳಿಯು ಕ್ರಿಯಾಶೀಲವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಹೊಸ ಹೊಸ ಸದಸ್ಯರನ್ನು ಸೇರಿಸಿಕೊಂಡು ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ಮಕ್ಕಳನ್ನು ತೊಡಗಿಸಲು ಕ್ರೀಡಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ ಮಾತನಾಡಿ, ಯುವ ಸಮಾಜ, ವಿಶ್ವ ಬ್ರಾಹ್ಮಣ ಸೇವಾ ಸಂಘ ಹಾಗೂ ಸಲಹಾ ಸಮಿತಿಯ ಉತ್ತಮ ಪ್ರೋತ್ಸಾಹದಿಂದ ಮಹಿಳಾ ಮಂಡಳಿಯು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಸದಸ್ಯರ ಸಂಖ್ಯೆ ವೃದ್ಧಿಯಾಗುತ್ತದೆ. ವಿವಿಧ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ ನೀಡಲಾಗುತ್ತದೆ. ಪ್ರತಿಯೊಬ್ಬರು ಪ್ರೀತಿಯಿಂದ ಸಂಘದ ಜೊತೆ ತೊಡಗಿಸಿಕೊಂಡು ಸಮಾಜವನ್ನು ಬಲಪಡಿಸಲು ಸಹಕರಿಸುವಂತೆ ವಿನಂತಿಸಿದರು.
ಸನ್ಮಾನ:
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವೃದ್ಧಿ ಪ್ರವೀಣ್, ಅನಘ ಕೆ.ವಿ., ಹಿರಿಯ ಸದಸ್ಯೆ ಕಮಲ ವೀರಪ್ಪ ಆಚಾರ್ಯರವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸುನೀತಾ ಅಶೋಕ್ ಪ್ರಾರ್ಥಿಸಿದರು. ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಭವ್ಯಶ್ರೀ ವಾದಿರಾಜ ವರದಿ ವಾಚಿಸಿದರು. ಕೋಶಾಧಿಕಾರಿ ಶಾಂತಿ ಸತೀಶ್ ಲೆಕ್ಕಪತ್ರ ಮಂಡಿಸಿದರು. ಪ್ರಭಾ ವಿಠಲ ಆಚಾರ್ಯ , ಸುಜಾತ ಜಗದೀಶ್, ಉಷಾ ಸದಾನಂದ, ಜಯಶ್ರೀ ಪ್ರಭಾಕರ್, ಗೀತಾ ಗಂಗಾಧರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ವಾಣಿಶ್ರೀ ನವೀನ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಬೇಬಿ ಕೆ.ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಮಾಜದ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯರಿಂದ ನರಕಾಸುರ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ವಿಶ್ವಕರ್ಮ ಸಮಾಜ ಬಾಂಧವರೆಲ್ಲರೂ ಮೂಲಭೂತವಾಗಿ ಕಲಾವಿದರು. ಸಾಮಾಜಿಕ ಸಂಘಟನೆ ಮೂಲಕ ಕಲಾವಿದರನ್ನು ಗುರುತಿಸಿ, ಬೆಳೆಸಬೇಕು. ಮಾಡಬೇಕು. ಕಲೆ ನಮ್ಮ ಆತ್ಮದ ಕನ್ನಡಿ. ಕಲಾವಿದರ ಅಂತರಂಗದಲ್ಲಿರುವ ಭಾವನೆ, ನೋವು, ಅನುಭವವನ್ನು ತೋರ್ಪಡಿಸಲು ಕಲೆಯ ಉತ್ತಮ ವೇದಿಕೆಯಾಗಿದೆ.
-ಮಂಜುಳಾ ಸುಬ್ರಹ್ಮಣ್ಯ, ನಿರ್ದೇಶಕಿ ನಾಟ್ಯರಂಗ ಪುತ್ತೂರು