ಇಚ್ಲಂಪಾಡಿ: ಬೆಂಕಿ ಆಕಸ್ಮಿಕ-ಸ್ಮೋಕ್ ಹೌಸ್,ಹಟ್ಟಿಗೆ ಹಾನಿ

0

ನೆಲ್ಯಾಡಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಮೋಕ್ ಹೌಸ್ ಹಾಗೂ ಹಟ್ಟಿ ಸುಟ್ಟುಹೋಗಿರುವ ಘಟನೆ ಇಚ್ಲಂಪಾಡಿ ಗ್ರಾಮದ ನಿಡ್ಯಡ್ಕ ಎಂಬಲ್ಲಿ ಡಿ.15ರಂದು ಸಂಜೆ ನಡೆದಿದೆ.


ನಿಡ್ಯಡ್ಕ ನಿವಾಸಿ, ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ನಿರ್ದೇಶಕರೂ ಆಗಿರುವ ಜಾರ್ಜ್‌ಕುಟ್ಟಿ ಉಪದೇಶಿ ಅವರಿಗೆ ಸೇರಿದ ಸ್ಮೋಕ್ ಹೌಸ್‌ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಅದರ ಪಕ್ಕದಲ್ಲೇ ಇದ್ದ ಹಟ್ಟಿಗೂ ವ್ಯಾಪಿಸಿ ಸುಟ್ಟುಹೋಗಿದೆ. ಸ್ಮೋಕ್ ಹೌಸ್‌ನಲ್ಲಿ ಹಾಕಿದ್ದ ಹೊಗೆಯಿಂದ ಬೆಂಕಿ ಕಾಣಿಸಿಕೊಂಡು ಸ್ಮೋಕ್ ಹೌಸ್, ಅದರಲ್ಲಿ ಎರಡೂವರೇ ಕ್ವಿಂಟಾಲ್ ರಬ್ಬರ್ ಶೀಟ್ ಹಾಗೂ ಹಟ್ಟಿ ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹಟ್ಟಿಯಲ್ಲಿದ್ದ ಜಾನುವಾರುಗಳನ್ನು ರಕ್ಷಿಸಲಾಗಿದೆ. ಸ್ಥಳೀಯರು ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಆ ವೇಳೆಗಾಗಲೇ ಸ್ಮೋಕ್ ಹೌಸ್ ಹಾಗೂ ಹಟ್ಟಿ ಸಂಪೂರ್ಣ ಸುಟ್ಟುಹೋಗಿದ್ದು ಜಾರ್ಜ್‌ಕುಟ್ಟಿಯವರಿಗೆ ಸುಮಾರು 3 ಲಕ್ಷ ರೂ.ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಡೈಸಿ ವರ್ಗೀಸ್, ಮಾಜಿ ಸದಸ್ಯ ವರ್ಗೀಸ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಆಡಳಿತಾಧಿಕಾರಿಯವರ ಪರವಾಗಿ ಗ್ರಾಮ ಸಹಾಯಕರು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here