ನೆಲ್ಯಾಡಿ: ಪಿಎಂ ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೆಲ್ಯಾಡಿ ನೆಲ್ಯಾಡಿ ಇಲ್ಲಿ ಪ್ರತಿಭಾ ಪುರಸ್ಕಾರ, ಸಾಧಕ ಪೂರ್ವ ವಿದ್ಯಾರ್ಥಿಗಳ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಡಿ.16ರಂದು ಸಂಜೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಾಧಕ ಪೂರ್ವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಬೇಕು. ಶಿಕ್ಷಿಸಿ, ಕ್ಷಮಿಸಿ, ಕಲಿಸುವವನೇ ಶಿಕ್ಷಕ. ಬಾಯಿ ಪಾಠ ಮಾಡಿ ರ‍್ಯಾಂಕ್ ಪಡೆಯುವುದೇ ಶಿಕ್ಷಣವಲ್ಲ. ಶಿಕ್ಷಣದ ಜೊತೆಗೆ ಪರಿಸರದ ಜ್ಞಾನವೂ ಪಡೆದುಕೊಳ್ಳಬೇಕು. ಸಂಸ್ಕಾರ,ಸಂಸ್ಕೃತಿಯ ಶಿಕ್ಷಣ ಸಿಗಬೇಕು. ಹಿರಿಯರ ಆದರ್ಶಗಳೇ ಮಕ್ಕಳಿಗೆ ಮಾದರಿ ಆಗಬೇಕೆಂದು ಹೇಳಿದರು. ಒತ್ತಡ ಹೇರುವ ಶಿಕ್ಷಣ ಬೇಡ. ಉದ್ಯೋಗಕ್ಕಾಗಿ ಶಿಕ್ಷಣ ಅಲ್ಲ, ಶಿಕ್ಷಣ ಬದುಕಿಗೆ ದಾರಿದೀಪ ಆಗಬೇಕೆಂದು ಹೇಳಿದ ಶಾಸಕರು, 75ವರ್ಷ ತುಂಬಿದ ಸರಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇನೆ. ಅನುದಾನ ನೀಡಿದಲ್ಲಿ ನೆಲ್ಯಾಡಿ ಸರಕಾರಿ ಶಾಲೆಗೂ ಒದಗಿಸಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿದ ಉದನೆ ಸಂತ ಅಂತೋನಿ ವಿದ್ಯಾಸಂಸ್ಥೆ ಸಂಚಾಲಕರಾಗಿ ರೆ.ಫಾ.ಹನಿ ಜೇಕಬ್ ಅವರು ಮಾತನಾಡಿ, ಹರಿಯುತ್ತಿರುವ ನದಿ. ಇದಕ್ಕೆ ವಿರಾಮ ಎಂಬುದೂ ಇಲ್ಲ. ಜನನದಿಂದ ಮರಣದ ತನಕವೂ ವಿದ್ಯೆ ಪಡೆಯಬಹುದು. ಅಧ್ಯಾಪಕರೂ ಹೊಸತನ್ನು ಕಲಿಯುವುದನ್ನು ಕಾಣಬಹುದು. ದೇವರು ಪ್ರತಿಯೊಬ್ಬನಿಗೂ ಟ್ಯಾಲೆಂಟ್ ನೀಡಿರುತ್ತೇನೆ. ನಮ್ಮಲ್ಲಿರುವ ಪ್ರತಿಭೆಯನ್ನು ಇನ್ನೊಬ್ಬರಿಗೆ ಧಾರೆ ಎರೆಯುವ ಮೂಲಕ ಬೆಳಕು ನೀಡಬೇಕೆಂದು ಹೇಳಿದರು. ಅಲೆಟ್ಟಿ ಶಾಲಾ ಮುಖ್ಯಶಿಕ್ಷಕಿ ಸುನಂದ ಜಿ.,ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿದ್ದಿರುವುದರಿಂದಲೇ ಈ ಹಂತಕ್ಕೆ ಬರಲು ಸಾಧ್ಯವಾಯಿತು. ಶಿಕ್ಷಿಸುವುದರ ಜೊತೆಗೆ ಮಕ್ಕಳ ಮೇಲೆ ಪ್ರೀತಿಯನ್ನೂ ತೋರಿಸಬೇಕು ಎಂದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಕೊಕ್ಕಡ ಶಾಖಾ ಸಹಾಯಕ ಪ್ರಬಂಧಕ ಇಸ್ಮಾಯಿಲ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ಜಬ್ಬಾರ್‌ರವರು ಮಾತನಾಡಿ, ಶಾಲೆ ಎಲ್ಲಾ ಧರ್ಮದವರೂ ಆರಾಧಿಸುವ ವಿದ್ಯಾದೇಗುಲವಾಗಿದೆ. ಶಾಲೆಯವರು ಪಂಚಾಯತ್‌ಗೆ ಸಲ್ಲಿಸಿರುವ ಬೇಡಿಕೆ ಪೂರೈಕೆಗೆ ಸಹಕಾರ ನೀಡುವುದಾಗಿ ಹೇಳಿದರು.
ಸನ್ಮಾನ:
ಶಾಲೆಯ ಸಾಧಕ ಪೂರ್ವ ವಿದ್ಯಾರ್ಥಿಗಳಾದ ಸುಳ್ಯ ತಾಲೂಕು ಅಲೆಟ್ಟಿ ಸರಕಾರಿ ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕಿ ಸುನಂದ ಜಿ., ಉದನೆ ಸಂತ ಅಂತೋನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ.ಫಾ.ಹನಿ ಜೇಕಬ್, ಎಸ್‌ಸಿಡಿಡಿಸಿ ಕೊಕ್ಕಡ ಶಾಖೆಯ ಸಹಾಯಕ ಪ್ರಬಂಧಕ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಬ್ದುಲ್ ಜಬ್ಬಾರ್, ಅಬ್ರಹಾಂ ಪಿ.ಕೆ., ಜಯಾನಂದ ಬಂಟ್ರಿಯಾಲ್ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಬಹುಮಾನ ವಿತರಣೆ:
ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಿ| ದಾಮೋದರ ಸಾಲ್ಯಾನ್ ಸ್ಮರಣಾರ್ಥ ಅವರ ಮನೆಯವರು ನೀಡಿದ ನಗದು ಪುರಸ್ಕಾರ ಹಸ್ತಾಂತರಿಸಲಾಯಿತು. ದತ್ತಿನಿಧಿ, ಕ್ರೀಡಾಕೂಟದಲ್ಲಿ ಚಾಂಪಿಯನ್ ಆದ ವಿದ್ಯಾರ್ಥಿಗಳಿಗೆ, ಪೂರ್ವ ವಿದ್ಯಾರ್ಥಿಗಳಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ದೀಕ್ಷಾ, ಶ್ರೀಮತಿ ಪ್ರವೀಣ, ಜಯಂತಿ, ರತಿಲತಾರವರು ಹೆಸರು ವಾಚಿಸಿದರು. ಎಸ್‌ಡಿಎಂಸಿಸಿ ನಿರ್ಗಮನ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಉಷಾ ಜೋಯ್, ಅಬ್ದುಲ್ ಜಬ್ಬಾರ್, ಮಹಮ್ಮದ್ ಇಕ್ಬಾಲ್, ಆನಂದ ಪಿಲವೂರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎಸ್‌ಡಿಎಂಸಿ ಅಧ್ಯಕ್ಷ ಬಿನೋಜ್ ವಿ.ವಿ., ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಿತಿ ಅಧ್ಯಕ್ಷ ಅಬ್ರಹಾಂ ಕೆ.ಪಿ., ಶಾಲಾ ವಿದ್ಯಾರ್ಥಿ ನಾಯಕಿ ಫಾತಿಮತ್ ಇಬ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಶಿಕ್ಷಕಿ ವೀಣಾ ಮಸ್ಕರೇನಸ್ ವರದಿ ವಾಚಿಸಿದರು. ಎಸ್‌ಡಿಎಂಸಿ ಪೂರ್ವಾಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಜಾತ ವಂದಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.