ಪಕ್ಷ ಬಲಪಡಿಸಲು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳೇ ಸಾಕು: ಅಶೋಕ್ ರೈ
ಪುತ್ತೂರು: ದೇಶದ ಯವ ರಾಜ್ಯದಲ್ಲೂ ಇಲ್ಲದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ನೀಡಿದೆ. ಬಡವರ ಪರವಾಗಿರುವ ಈ ಯೋಜನೆಗಳು ಜನರಿಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು , ಪಕ್ಷವನ್ನು ಬಲಪಡಿಸಲು ಈ ಗ್ಯಾರಂಟಿ ಯೋಜನೆಗಳೇ ಸಾಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ವಿಟ್ಲ ಗಜಾನನ ಸಭಾಂಗಣದಲ್ಲಿ ನಡೆದ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ವಲಯಾಧ್ಯಕ್ಷರು ಹಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಗೃಹಜ್ಯೋತಿ ಗ್ಯಾರಂಟಿ ಯೋಜನೆಯಡಿ 200 ಯುನಿಟ್ ವಿದ್ಯುತ್ ಎಲ್ಲರಿಗೂ ಸರಕಾರ ಉಚಿತವಾಗಿ ನೀಡುತ್ತಿದೆ ಇದರಿಂದ ಪ್ರತೀಯೊಂದು ಕುಟುಂಬಕ್ಕೂ ತಿಂಗಳಿಗೆ 1200 ರಿಂದ 1500 ತನಕ ಉಳಿತಾಯವಾಗುತ್ತದೆ. ಶಕ್ತಿ ಯೋಜನೆಯಡಿ ಸರಕಾರಿ ಬಸ್ಸಿನಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಬಹುದು ಈ ಯೋಜನೆಯಿಂದ ನಿತ್ಯ ಪ್ರಯಾಣಿಸುವ ಮಹಿಳೆಗೆ ಕನಿಷ್ಟ 1000 ತಿಂಗಳಿಗೆ ಉಳಿತಾಯ ಮಾಡಬಹುದು. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರ ಖಾತೆಗೆ ತಿಂಗಳಿಗೆ 2000 ಜಮೆಯಾಗುತ್ತದೆ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡಲಾಗುತ್ತಿದೆ, ಅಕ್ಕಿಯ ಹಣವನ್ನು ಖಾತೆಗೆ ಜಮೆ ಮಾಡಲಾಗುತ್ತದೆ ಇಷ್ಟೊಂದು ಪ್ರಮಾಣದಲ್ಲಿ ಜನತೆಗೆ ಯಾವ ಸರಕಾರ ಉಚಿತ ಯೋಜನೆಗಳನ್ನು ನೀಡಿದೆ? ಕಾಂಗ್ರೆಸ್ ಇನ್ನೇನು ಕೊಡಬೇಕು ಎನ್ನುವಷ್ಟರ ಮಟ್ಟಿಗೆ ಜನರಿಗೆ ಸರಕಾರ ನೆರವು ನೀಡುತ್ತಿದೆ ಎಂದು ಹೇಳಿದ ಶಾಸಕರು ಕಾರ್ಯಕರ್ತರು ಪಕ್ಷ ಕಟ್ಟಲು ಇದನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಅನುದಾನ ಬರುತ್ತಲೇ ಇರುತ್ತದೆ
ವಿವಿಧ ಕಾಮಗಾರಿಗಳಿಗೆ ಅನುದಾನ ಬರುತ್ತಲೇ ಇರುತ್ತದೆ, ಆದ್ಯತೆಯ ಮೇರೆಗೆ ಕಾಮಗಾರಿಗಳೂ ನಡೆಯುತ್ತದೆ. ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಜನತೆಗೆ ಕೊಟ್ಟ ಭರವಸೆಯನ್ನು ಖಂಡಿತವಾಗಿಯೂ ಈಡೇರಿಸುವ ಕೆಲಸವನ್ನು ಮಾಡುತ್ತೇನೆ. ಸರಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದಿದೆ ಈಗಲೇ ಎಲ್ಲಾ ಭರವಸೆಗಳನ್ನು ಈಡೇರಿಸಿ ಎಂದರೆ ಅದು ಸಾಧ್ಯವಾಗದ ಮಾತು. ಕಾರ್ಯಕರ್ತರು ಜನರ ಸೇವೆಯನ್ನು ಮಾಡುವ ಮೂಲಕ ಅವರನ್ನು ಪಕ್ಷದತ್ತ ಬರಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ?
ನಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಕೆಲವರು ದೂರು ನೀಡಿದ್ದಾರೆ. ನಿಮ್ಮ ಖಾತೆಯಲ್ಲಿ ಕನಿಷ್ಟ ಮೊತ್ತ ಇಲ್ಲದೇ ಇದ್ದರೆ ನಿಮ್ಮ ಖಾತೆಗೆ ಹಣ ಜಮೆಯಾಗುವುದಿಲ್ಲ. ಝೀರೋ ಬ್ಯಾಲೆನ್ಸ್ ಅಕೌಂಟ್ ಇದ್ದವರ ಖಾತೆಗೆ ಖಾತೆಯಲ್ಲಿ ಹಣವಿಲ್ಲದೇ ಇದ್ದರೂ ಜಮೆಯಾಗುತ್ತದೆ. ಪ್ರತೀಯೊಬ್ಬರೂ ಖಾತೆಯಲ್ಲಿ ಕನಿಷ್ಟ ಹಣವನ್ನು ಇರಿಸಿಕೊಳ್ಳಬೇಕು.ಕೆಲವೊಂದು ತಾಂತ್ರಿಕ ದೋಷದಿಂದ ಖಾತೆಗೆ ಹಣ ಜಮೆಯಾಗದೇ ಇರಬಹುದು ಅಂತವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ನಾವು ವ್ಯವಸ್ಥೆ ಮಾಡುತ್ತೇವೆ, ಆದರೆ ಖಾತೆಯಲ್ಲಿ ಕನಿಷ್ಟ ಮೊತ್ತವನ್ನು ಎಲ್ಲರೂ ಇಟ್ಟುಕೊಂಡಿರಬೇಕು ಎಂದು ಶಾಸಕರು ಹೇಳಿದರು.
ಅಧಿಕಾರಿಗಳು ಬಿಜೆಪಿ ಮೆಂಟಾಲಿಟಿಯವರಿದ್ದಾರೆ
ಕೆಲವೊಂದು ಅಧಿಕಾರಿಗಳು ಬಿಜೆಪಿ ಮೆಂಟಾಲಿಟಿಯವರಿದ್ದಾರೆ, ಕೆಲವೊಂದು ಯೋಜನೆಗಳನ್ನು ಜಾರಿ ಮಾಡುವಲ್ಲಿ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ, ಜನರಿಗೆ ವೃಥಾ ತೊಂದರೆ ಕೊಡುತ್ತಿದ್ದಾರೆ, ಗ್ರಾಮಕರಣಿಕರಿಂದ ಹಿಡಿದು ತಾಲೂಕು ಕಚೇರಿಯ ತನಕ ಕೆಲವೊಂದು ಅಧಿಕಾರಿಗಳು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಶಾಸಕರಲ್ಲಿ ಆರೋಪಿಸಿದರು. ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಅಕ್ರಮ ಸಕ್ರಮ, 94 ಸಿ ಮತ್ತು 94 ಸಿ ಸಿ ಗಾಗಿ ಕೆಲವೊಂದು ಗ್ರಾಮಕರಣಿಕರು ಲಂಚ ಕೇಳಿದ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ಅಂಥವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು. ನಾನು ಶಾಸಕನಾಗಿರುವ ತನಕ ಬಡವರಿಂದ ಲಂಚ ಪಡೆಯಲು ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕರು ಲಂಚಕೋರರಿಗೆ ಎಚ್ಚರಿಕೆ ನೀಡಿದರು.
ಶಕುಂತಳಾ ಶೆಟ್ಟಿಯವರನ್ನು ನೋಡಿ ಕಲಿಯಲಿ
ಮಾಜಿ ಶಾಸಕರು ಹೇಗೆ ಇರಬೇಕು ಎಂಬುದನ್ನು ಮಾಜಿ ಶಸಕಿ ಶಕುಂತಳಾ ಶೆಟ್ಟಿಯವರನ್ನು ನೋಡಿ ಕಲಿಯಬೇಕು. ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಇಲ್ಲಿಗೆ ತಂದಿದ್ದರು. ಆದರೆ ಅದರ ಕಾಮಗಾರಿ ಮುಗಿಯುವ ವೇಳೆ ಶಾಸಕ ಸ್ಥಾನ ಕಳೆದುಕೊಂಡರೂ ಒಂದು ದಿನವೂ ನಾನು ತಂದ ಯೋಜನೆ ಎಂದು ಅಲ್ಲಿಗೆ ಭೇಟಿ ನೀಡಿ ಉದ್ಘಾಟನೆ ಮಾಡುವ ಪ್ರಯತ್ನ ಮಾಡಿಲ್ಲ. ಆದರೆ ಮಾಜಿ ಶಾಸಕರೊಬ್ಬರು ಪೆರ್ನೆ ಕಿಂಡಿ ಅಣೆಕಟ್ಟಿಗೆ ಬಾಗಿನ ಅರ್ಪಿಸುವ ನೆಪ ಹೇಳಿ ಅದನ್ನು ಉದ್ಘಾಟನೆ ಮಾಡುವ ಯತ್ನವನ್ನು ಮಾಡುವ ಮೂಲಕ ಅಧಿಕ ಪ್ರಸಂಗತನ ಮಾಡಲು ಹೊರಟಿದ್ದಾರೆ. ಯಾವುದೇ ಸರಕಾರಿ ಯೋಜನೆಯಾದರೂ, ಕಾಮಗಾರಿಯಾದರೂ ಅದನ್ನು ಉದ್ಘಾಟಿಸುವಾಗ ಸರಕಾರದ ನಿಯಮಗಳಿರುತ್ತದೆ ಆದರೆ ಅದನ್ನು ಮೀರಿ ಮಾಜಿ ಶಸಕರೋರ್ವರು ಬಾಗಿನ ಅರ್ಪಿಸಲು ಹೋಗಿರುವುದು ನಾಚಿಕೇಡಿನ ವಿಚಾರ. ಮರ್ಯಾದೆ ಇದ್ದವರು ಆ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ತಾನು 5 ವರ್ಷದಲ್ಲಿ ಮಾಡಿದ ಸಾಧನೆ ಏನು ಎಂಬುದು ಕ್ಷೇತ್ರದ ಜನತೆಗೆ ಗೊತ್ತಾಗಿದೆ, ಅವರು ಮಾಡಿದ ಸಾಧನೆ ಚಿತ್ರ ಸಮೇತ ಪ್ರಕಟವಾಗಿದೆ, ಎಲ್ಲವನ್ನೂ ಅರ್ಪಿಸಿದವರು ಮರ್ಯಾದೆಗೆಟ್ಟು ಬಾಗೀನ ಅರ್ಪಿಸಲು ಹೋಗಿದ್ದಾರೆ ಎಂದು ಹೆಸರು ಹೇಳದೆ ಮಾಜಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 18 ವಲಯ ಅಧ್ಯಕ್ಷರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಶಾಸಕರ ಕಾರ್ಯವೈಖರಿ ಬಗ್ಗೆ ಉತ್ತಮ ಅಭಿಪ್ರಾಯಗಳು ವ್ಯಕ್ತವಾದವು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಠಂತಬೆಟ್ಟು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ,ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಇಂಟಕ್ ಅಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಅಕ್ರಮಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ ಸೇರಿದಂತೆ ಪಕ್ಷದ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಯುನಿಕ್ ಅಬ್ದುಲ್ರಹಿಮಾನ್ರವರು ಕಾರ್ಯಕ್ರಮ ನಿರೂಪಿಸಿದರು. ಸಭೆ ಮುಗಿದ ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.