ವಿದ್ಯಾರ್ಥಿಗಳು ಉದ್ಯೋಗದಾತರಾಗುವ ಯೋಚನೆ ಬೆಳೆಸಿಕೊಳ್ಳಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು : ಹೊಸ ಆಲೋಚನೆಗಳಷ್ಟೇ ಉದ್ಯಮ ಕ್ಷೇತ್ರವನ್ನು ಬೆಳೆಸುತ್ತದೆ. ನಮ್ಮೊಳಗಿರುವ ಸೃಜನಶೀಲತೆ ಹಾಗೂ ಬುದ್ಧಿವಂತಿಕೆಗಳನ್ನು ಬಳಸಿಕೊಂಡರೆ ಅಮೋಘವಾದದ್ದನ್ನು ಸಾಧಿಸಬಹುದು. ಆದರೆ ಹೊಸದಕ್ಕೆ ನಮ್ಮನ್ನು ನಾವು ತೆರೆದುಕೊಳ್ಳುವ ಮನಃಸ್ಥಿತಿಯನ್ನು ಹೊಂದಿರಬೇಕಾದದ್ದು ಅತ್ಯಂತ ಮುಖ್ಯ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ವೆಂಚುರಾ 2023 ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಪಾರವಾದ ಕಲ್ಪನೆಗಳಿವೆ. ವಿನೂತನ ಆಲೋಚನೆಗಳಿವೆ. ಅವುಗಳನ್ನು ಜಾರಿಗೊಳಿಸುವ ನೆಲೆಯಲ್ಲಿ ಕಾರ್ಯತತ್ಪರರಾಗಬೇಕು. ಔದ್ಯೋಗಿಕ ಕ್ಷೇತ್ರಕ್ಕೆ ಉದ್ಯೋಗಿಗಳಾಗಿ ಅಡಿಯಿಡುವ ಕಲ್ಪನೆಯನ್ನು ಮಾತ್ರ ಹೊಂದದೆ ಉದ್ಯೋಗದಾತರಾಗಿ ಕ್ಷೇತ್ರವನ್ನು ಆವರಿಕೊಳ್ಳುವ ಬಗೆಗೆ ಚಿಂತನೆ ನಡೆಯಬೇಕು. ಈ ಸಮಾಜಕ್ಕೆ ಏನು ಬೇಕಾಗಿದೆ ಎಂಬುದನ್ನು ಚಿಂತಿಸಿ ಕಾರ್ಯಾರಂಭ ಮಾಡಿದರೆ ಗೆಲುವು ನಮ್ಮದಾಗುತ್ತದೆ ಎಂದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಉಪಸ್ಥಿತರಿದ್ದರು. ಏಷ್ಯನ್ ಪೈಂಟ್ಸ್ ತಂಡದವರು ಸಮಗ್ರ ಪ್ರಶಸ್ತಿ ಪಡೆದರೆ, ಎಚ್.ಡಿ.ಎಫ್.ಸಿ ತಂಡದವರು ರನ್ನರ‍್ಸ್ ಪ್ರಶಸ್ತಿಗೆ ಭಾಜನರಾದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಸಮೃದ್ಧಿ ಹಾಗೂ ವಿದ್ಯಾರ್ಥಿ ಯಶ್ವಿತ್ ಅನಿಸಿಕೆ ವ್ಯಕ್ತಪಡಿಸಿದರು.
ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಶ್ರೀಹರ್ಷಾ ಪ್ರಾರ್ಥಿಸಿದರು. ವೆಂಚುರಾ ೨೦೨೩ ಸ್ಪರ್ಧೆಯ ಸಂಯೋಜಕ, ಅಂತಿಮ ಬಿ.ಕಾಂ ವಿದ್ಯಾರ್ಥಿ ಶ್ರೀರಾಮ ಸ್ವಾಗತಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಚೈತನ್ಯಾ ವಂದಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರಿಯಾಲ್ ಆಳ್ವಾ ಕಾರ್ಯಕ್ರಮ ನಿರ್ವಹಿಸಿದರು. ಅಂತಿಮ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು.