ಪುತ್ತೂರು: ಪುತ್ತೂರಿನ ಗಾನಸಿರಿ ಕಲಾ ಕೇಂದ್ರಕ್ಕೆ 22 ವರ್ಷ ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ಸುಮಧುರ ಸ್ವರ ಲಹರಿ ಕಾರ್ಯಕ್ರಮ ಡಿ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅದ್ದೂರಿಯಾಗಿ ನಡೆಯಿತು. ಸುಳ್ಯದ ಪ್ರಗತಿ ಸೌಂಡ್ಸ್ & ಲೈಟ್ಸ್ ಮಾಲಕ ಶಾಫಿ ಸುಳ್ಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದರು.
ಮೊದಲ ಹಂತದ ಕಾರ್ಯಕ್ರಮದಲ್ಲಿ ಗಾನಸಿರಿ ಪುತ್ತೂರು ಶಾಖೆಯ ಜೂನಿಯರ್ ವಿದ್ಯಾರ್ಥಿಗಳಿಗೆ ಟಿ ವಿ ರಿಯಾಲಿಟಿ ಶೋ ಮಾದರಿಯಲ್ಲಿ ಮ್ಯೂಸಿಕಲ್ ರಿಯಾಲಿಟಿ ಶೋ ನಡೆಯಿತು.ಸಂಜೆ ಸೀನಿಯರ್ ವಿದ್ಯಾರ್ಥಿಗಳಿಗೆ ರಾಗ ಲಯ ಮಾಧುರ್ಯ ವಿಭಿನ್ನ ಸಂಗೀತ ಸ್ಪರ್ಧೆ ನಡೆಯಿತು.
ಹಿಮ್ಮೇಳ ಕಲಾವಿದರಾಗಿ ಡಾ. ದಿನೇಶ್ ರಾವ್ ಸುಳ್ಯ, ಪ್ರಭಾಕರ ಕಾಸರಗೋಡು ಮತ್ತು ಸುದರ್ಶನ್ ಆಚಾರ್ಯ ಸಹಕರಿಸಿದರು.
ಗಾನಸಿರಿ ಪೋಷಕರ ಪರವಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ ಬೆಳೆಯುವ ಸಂಗೀತ ಪ್ರತಿಭೆಗಳನ್ನು ಒಳ್ಳೆಯ ಮಾರ್ಗದರ್ಶನ ನೀಡಿ ಇಂತಹ ಅದ್ದೂರಿ ವೇದಿಕೆಗಳಲ್ಲಿ ಹಾಡಿಸುವುದು ತುಂಬಾ ಕಷ್ಟದ ಕೆಲಸ. ಈ ಕೆಲಸವನ್ನು ಕಳೆದ 22 ವರ್ಷಗಳಿಂದ ಪ್ರೀತಿಯಿಂದ ಮಾಡಿಕೊಂಡು ಬಂದಿರುವ ಕಿರಣ್ ಕುಮಾರ್ ರ ಕೆಲಸ ಶ್ಲಾಘನೀಯ ಎಂದರು.
ಡಾ.ಕಿರಣ್ ಕುಮಾರ್ ಶಿಷ್ಯೆ, ಸಂಸ್ಥೆಯ ಸಹಶಿಕ್ಷಕಿ ಕು.ಲಕ್ಷ್ಮಿ ಎಸ್ ಪುತ್ತೂರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಗಾಯಕ, ನಿರೂಪಕ ಕೃಷ್ಣರಾಜ್ ಸುಳ್ಯ ವಿಜೇತರಿಗೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸ್ಮರಣಿಕೆ ನೀಡಿ ಅಭಿನಂದಿಸಿದರು.
ವಾರ್ಷಿಕ ಸಂಗೀತ ಹಬ್ಬದ 2ನೇ ಭಾಗ ಚಿಣ್ಣರ ಸಂಗೀತ ಹಬ್ಬ ನಟರಾಜ ವೇದಿಕೆಯಲ್ಲಿ ಡಿ.31 ರಂದು ನಡೆಯಲಿದೆ.