ಡಿ.21-23:ಹಸಿರು ವನರಾಜಿಯ ನಡುವೆ ಕಂಗೋಳಿಸುವ ಸುದಾನ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

0

ಪುತ್ತೂರು: ’ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಪರಿಸರದ ಶಿಕ್ಷಣವೂ ಮುಖ್ಯ’ ಎನ್ನುವ ವಿಶಾಲ ದೃಷ್ಟಿಯಿಂದ ಹಚ್ಚ ಹಸಿರಿನ ನಡುವೆ ರೂಪುಗೊಂಡಿರುವ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಡಿ.21,22 ಮತ್ತು 23ರಂದು ಮೂರು ದಿನಗಳ ಕಾಲ ಶಾಲಾ ವಾರ್ಷಿಕೋತ್ಸವವು ವಿಜ್ರಂಭಣೆಯಿಂದ ನಡೆಯಲಿದೆ.


ಪ್ರತಿ ವರ್ಷವು ಒಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಅದರಂತೆಯೇ ಕಾರ್ಯಾಚರಿಸುವ ಸಂಸ್ಥೆಯು 2023-24ರ ಈ ವರ್ಷ ’ಭಾರತದ ಕರಾವಳಿಯ ವೈಭವದ ಪರಂಪರೆ’ ’ ಎಂಬ ಧ್ಯೇಯ ದೃಷ್ಪಿಯನ್ನು ಅಳವಡಿಸಿಕೊಂಡಿದೆ. ಈ ವರ್ಷ ಎಲ್ಲಾ ಕಾರ್ಯಕ್ರಮಗಳೂ ಈ ಆಶಯದೊಂದಿಗೆ ನಡೆಯಲಿದ್ದು ವಾರ್ಷಿಕೋತ್ಸವದಲ್ಲಿ ಭಾರತದ ಕರಾವಳಿಯ ಸಾಂಸ್ಕೃತಿಕ ಸಿರಿಯ ಅನಾವರಣವು ನಡೆಯಲಿದೆ.


1991-92ರಲ್ಲಿ ಆರಂಭವಾದ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದು, ರಾಜ್ಯಮಟ್ಟದ ’ಪರಿಸರ ಮಿತ್ರ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶಾಲೆಯಲ್ಲಿ ಹೈನುಗಾರಿಕೆ , ಪಕ್ಷಿಧಾಮ ,ಔಷಧೀಯ ಗಿಡಗಳ ವನ, ಗದ್ದೆ ಬೇಸಾಯ , ಅಲಂಕಾರಿಕ ಮತ್ತು ವಿವಿಧ ಹಣ್ಣುಗಳ ಗಿಡಗಳುಳ್ಳ ನರ್ಸರಿ , ಕಿಟ್ಟೆಲ್ ಲೈಬ್ರೇರಿ , ವಿಶಾಲವಾದ ಆಟದ ಮೈದಾನ ಮುಂತಾದ ಅನೇಕ ವಿನೂತನ ಸೌಲಭ್ಯಗಳನ್ನು ಹೊಂದಿದೆ.


ವರ್ಷ ಪೂರ್ತಿ ವಿದ್ಯಾರ್ಥಿಗಳಿಗೆ ಬೋಧಪ್ರದವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುವ ಶಾಲೆಯು ಇದಕ್ಕಾಗಿ ವಿವಿಧ ಕ್ಲಬ್‌ಗಳನ್ನು ಹೊಂದಿದ್ದು ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸುಮಾರು ಒಂದು ಸಾವಿರಕ್ಕಿಂತಲೂ ಮೀರಿ ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ’ಸರ್ವಧರ್ಮ ಸಮನ್ವಯತೆ ಮತ್ತು ಭಾರತೀಯತೆಯನ್ನು’ ಜಾಗೃತಗೊಳಿಸಲಾಗುತ್ತದೆ. ಪ್ರತಿ ವರ್ಷವು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗುರುತರವಾದ ಸಾಧನೆ ಮಾಡುವ ಸುದಾನ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ , ವಿಜ್ಞಾನ, ಸ್ಕೌಟ್ಸ್-ಗೈಡ್ಸ್ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.


ಹೀಗೆ ಶೈಕ್ಷಣಿಕವಾಗಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಾ ಸೃಜನಶೀಲತೆಯೊಂದಿಗೆ ಕಾರ್ಯಾಚರಿಸುತ್ತಿರುವ ಸುದಾನ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವು ನಡೆಯಲಿದ್ದು ಮೊದಲ ದಿನ, ಡಿ.21ರಂದು ಶಾಲಾ ವಾರ್ಷಿಕೋತ್ಸವದ ಉದ್ಘಾಟನೆ, ಶಾಲಾಗೀತೆ Sudana School Anthem ನ ಬಿಡುಗಡೆ, ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾಧಕ ಪುರಸ್ಕಾರ ಮತ್ತು ಯುಕೆಜಿ ಮಕ್ಕಳ ಘಟಕೋತ್ಸವು ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೋ, ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲ್ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಎರಡನೆಯ ದಿನ ಡಿ.22 ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ನಡೆಯಲಿದ್ದು ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ಸಂಜನಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದು ,ಅವನಿ ಬೆಳ್ಳಾರೆ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಮೂರನೆಯ ದಿನ ಡಿ.23ರಂದು ಪ್ರೌಢಶಾಲಾ ವಾರ್ಷಿಕೋತ್ಸವವು ನಡೆಯಲಿದ್ದು ಸಾಹಿತಿ ಡಾ.ನರೇಂದ್ರ ರೈ ದೇರ್ಲರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸುಶಾಂತ ಹಾರ್ವಿನ್ , ಡಾ. ವಿಖ್ಯಾತ್ ನಾರಾಯಣ್ , ಸತ್ಯಾತ್ಮ , ಹರ್ಷಿತ್ ಎಂ.ಬಿ ಭಾಗವಹಿಸಲಿದ್ದಾರೆ. ಮೂರು ದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ವಿದ್ಯಾರ್ಥಿಗಳು, ಶಿಕ್ಷಕರು,ಹಿರಿಯ ವಿದ್ಯಾರ್ಥಿಗಳು ಭಾರತದ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here