ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನವೀನ್, ಉಪಾಧ್ಯಕ್ಷರಾಗಿ ಪವಿತ್ರರವರು ಸಹಕಾರ ಭಾರತಿ ಹಾಗೂ ಪುತ್ತಿಲ ಪರಿವಾರ ಒಮ್ಮತದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯು ಡಿ.20 ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನವೀನ್ ಡಿ.ಯವರನ್ನು ಜಯರಾಮ ಪೂಜಾರಿ ಸೂಚಿಸಿ, ದೇವಪ್ಪ ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪವಿತ್ರ ಕೆ.ಪಿಯವರನ್ನು ವಿಶ್ವನಾಥ ಬಲ್ಯಾಯ ಸೂಚಿಸಿ, ನಮಿತಾ ಅನುಮೋದಿಸಿದ್ದರು.
ನಿರ್ದೇಶಕರಾದ ದೇವಪ್ಪ ಪಜಿರೋಡಿ, ಪ್ರವೀಣ್ ಶೆಟ್ಟಿ, ಚಂದ್ರ ಕುಮಾರ್ ಮಣಿಯ, ಶಿವಪ್ರಸಾದ್ ನಾಯ್ಕ ಹಾಗೂ ಪರಮೇಶ್ವರ ಭಂಡಾರಿ ಉಪಸ್ಥಿತರಿದ್ದರು. ಸಹಕಾರ ಇಲಾಖೆಯ ಶಿವಲಿಂಗಯ್ಯ ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ಹಣಾಧಿಕಾರಿ ಮಧುಕರ ಎಚ್. ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಒಟ್ಟು 12 ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಡಿ.10ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ 10 ಮಂದಿ ಹಾಗೂ ಕಾಂಗ್ರೆಸ್ನ ಇಬ್ಬರು ಅಭ್ಯರ್ಥಿಗಳು ಚುನಾಯಿತರಾಗಿದ್ದರು.
ಬಿಜೆಪಿ, ಪುತ್ತಿಲ ಪರಿವಾರದಿಂದ ಜಂಟಿ ಅಭಿನಂದನೆ
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಬಳಿಕ ಸಹಕಾರಿ ಸಂಘದ ಸಭಾ ಭವನದಲ್ಲಿ ಬಿಜೆಪಿ ಹಾಗೂ ಪುತ್ತಿಲ ಪರಿವಾರದಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಮಂದಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಲು ಹೊದಿಸಿ, ಹೂ ಹಾರ ಹಾಕಿ ಅಭಿನಂದಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಹಕಾರಿ ಸಂಘದಲ್ಲಿ ಪರಿವರ್ತನೆ ಮಾಡುವ ದೃಷ್ಠಿಯಲ್ಲಿ ನೂತನ ಆಡಳಿತ ಮಂಡಲಿಯನ್ನು ಜನತೆ ಹರಸಿದ್ದಾರೆ. ಅಧ್ಯಕ್ಷ ನವೀನ್ ಹಾಗೂ ಉಪಾಧ್ಯಕ್ಷೆ ಪವಿತ್ರರ ಜೊತೆಗೆ ನಿರ್ದೇಶಕರು ಹಾಗೂ ನರಿಮೊಗರು, ಶಾಂತಿಗೋಡಿನ ಜನತೆ ಸಹಕರಿಸಬೇಕು. ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಆಡಳಿತ ವಿಚಾರ, ರೈತರ ಸಾಲ ಮನ್ನಾ ವಂಚಿತರಾದ ರೈತರಿಗೆ ನ್ಯಾಯ ಒದಗಿಸಬೇಕು. ರಾಜ್ಯ ಸರಕಾರ ಘೋಷಿಸಿದ ಶೂನ್ಯ ಬಡ್ಡಿಯ ರೂ.5ಲಕ್ಷ ಸಾಲ, ಶೇ.3 ಬಡ್ಡಿ ದರದ ರೂ.15 ಲಕ್ಷ ಸಾಲದ ಪ್ರಯೋಜ ಪಡೆದುಕೊಳ್ಳುವಲ್ಲಿ ಹೋರಾಟ, ಸಾಲಮನ್ನಾ, ಬಡ್ಡಿ ಮನ್ನಾಕ್ಕೂ ಸರಕಾರವನ್ನು ಆಗ್ರಹಿಸಬೇಕು. ಕಳೆದ ಅವಧಿಯಲ್ಲಿ ಸಾಲ ಮನ್ನಾ ಯೋಜನೆಯಿಂದ ವಂಚಿತರಾದ ರೈತರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದ ಅವರು ಸಹಕಾರಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯವಿಲ್ಲ. ಪರಮೇಶ್ವರ ಭಂಡಾರಿಯವರು ನಮ್ಮ ಜೊತೆ ವೇದಿಕೆಯಲ್ಲಿರುವ ಮೂಲಕ ನೂತನ ಅಧ್ಯಕ್ಷ ನವೀನ್ ಹಾಗೂ ಉಪಾಧ್ಯಕ್ಷೆ ಪವಿತ್ರರಿಗೆ ತನ್ನ ಪೂರ್ಣ ಬೆಂಬಲವಿದೆ. ನಿಮ್ಮ ಜೊತೆ ಇದ್ದೇನೆ ಎಂಬ ಸಂದೇಶ ನೀಡಿದ್ದಾರೆ ಎಂದರು.
ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಾಮಾಜಿಕ ಕಳಕಲಿಯುಲ್ಲ ನಿರ್ದೇಶಕರನ್ನು ಆಯ್ಕೆ ಮಾಡುವ ಉದ್ದೇಶದಿಂದ ಸಾಮೂಹಿಕ ನಾಯಕತ್ವದಿಂದ ಸುರೇಶ್ ಪ್ರಭು ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಹಿಂದಿನ ಆಡಳಿತ ಮಂಡಳಿಯನ್ನು ಬದಲಾಯಿಸಿ, ಉತ್ತಮ ಹೊಸ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಂಘ ಅಭಿವೃದ್ಧಿಯತ್ತ ಸಾಗಬೇಕು ಎಂಬ ದೃಷ್ಠಿಯಲ್ಲಿ ಸಹಕಾರಿ ಬಂಧುಗಳು ಹರಸಿದ್ದಾರೆ. ಆಡಳಿತ ಮಂಡಳಿ ಹಾಗೂ ಸಂಘದ ಅಧಿಕಾರಿ, ಸಿಬಂದಿಗಳು ಜೊತೆಯಾಗಿ ಸಾಗಿದಾಗ ಸಂಘ ಅಭಿವೃದ್ಧಿಯಾಗಲಿದೆ. ಸಹಕರ ತತ್ವದ ಸೂಕ್ಷ್ಮತೆಯನ್ನು ಅರಿತುಕೊಂಡು ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಡಳಿತ ನಡೆಸಬೇಕು. ಸಂಘಕ್ಕೆ ಲಾs ತರುವ ಜೊತೆಗೆ ಸರಕಾರ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಕಳೆದ ಅವಧಿಯಲ್ಲಿ ಸಾಲಮನ್ನಾ ಯೋಜನೆಯಿಂದ ವಂಚಿತರಾದವರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಹೋರಾಟ ನಡೆಸಬೇಕಾಗಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಹದಿನೈದು ವರ್ಷಗಳ ಬಳಿಕ ಮತ್ತೆ ಸಹಕಾರ ಭಾರತಿಯು ಆಡಳಿತ ಬಂದಿದ್ದು ಹೊಸ ಶಕೆ ಆರಂಭವಾಗಿದೆ. ಸಂಘದ ಮೂಲಕ ರೈತರ ಸಮಸ್ಯೆಗಳನ್ನು ಶೀಘ್ರ ಸ್ಪಂದನೆ ನೀಡಬೇಕು. ತಾಲೂಕಿನಲ್ಲಿ ಮಾದರಿ ಸಂಘವಾಗಿ ಪರಿವರ್ತನೆಗೊಳಿಸಬೇಕು. ಅಧ್ಯಕ್ಷ, ಉಪಾಧ್ಯಕ್ಷ ವಾರದಲ್ಲಿ ಒಂದು ಸಂಘದ ಕಚೇರಿಯಲ್ಲಿ ಉಪಸ್ಥಿತರಿದ್ದು ರೈತರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಹಾಗೂ ಸಂಘದಲ್ಲಿ ಸಾಲ ಮನ್ನಾ ಯೋಜನೆಯಿಂದ ವಂಚಿತರಾದವರಿಗೆ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಯತ್ನಿಸಬೇಕು ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಸಂಘಟಿತ ಹಾಗೂ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಸಹಕಾರ ಭಾರತಿಯು ಚುನಾವಣೆಯಲ್ಲಿ ಬಹುಮತ ಪಡೆದುಕೊಂಡಿದೆ. ಯೋಗ್ಯ ನಿರ್ದೇಶಕರು ಚುನಾಯಿತರಾಗಿದ್ದು ಚುನಾವಣೆಯ ನೇತೃತ್ವ ವಹಿಸಿದ್ದ ಸುರೇಶ್ ಪ್ರಭುಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಸಹಕಾರಿ ಪ್ರಕೋಷ್ಠದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ಮಾತನಾಡಿ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘದ ಚುನಾವಣೆಯಲ್ಲಿ ಸಹಕಾರ ಭಾರತಿಯು ಅಭೂತಪೂರ್ವ ಜಯಗಳಿಸಿದ್ದು ಜಿಲ್ಲೆಯ ಎಲ್ಲಾ ಸಹಕಾರಿಗಳಿಗೆ ಪಾಠವಾಗಲಿದೆ. ನರಿಮೊಗರಿನ ಸಹಕಾರಿ ಬಂಧುಗಳು ಆಶಾ ಭಾವನೆಯಿಂದ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಿದ್ದು ಅದನ್ನು ಉಳಿಸಿ ಜನರ ವಿಶ್ವಾಸಗಳಿಸುವ ಮೂಲಕ ಹೊಸ ಬಾಷ್ಯ ಬರೆಯಬೇಕು ಎಂದರು.
ತಾಲೂಕ ಸಹಕಾರ ಪ್ರಕೋಷ್ಠದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಮಾತನಾಡಿ, ಯುವಕರ ಕೈಯಲ್ಲಿ ಆಡಳಿತ ನೀಡಿದ್ದು ಉತ್ತಮ ಆಡಳಿತದ ಮೂಲಕ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಎಲ್ಲರನ್ನು ವಿಶ್ವಾಸಕ್ಕೆ ಪಡೆದಯಕೊಂಡು ಸಂಘವನ್ನು ಮುನ್ನಡೆಸಿಕೊಂಡು ತಾಲೂಕಿನಲ್ಲಿಯೇ ಮಾದರಿ ಸಂಘವಾಗಿ ತೋರಿಸಿಕೊಡಬೇಕು ಎಂದರು.
ಸುರೇಶ್ ಪ್ರಭು ಮಾತನಾಡಿ, ಈ ಭಾರಿಯ ಚುನಾವಣೆಯಲ್ಲಿ ಸಹಕಾರ ಭಾರತಿಯನ್ನು ಆಡಳಿತಕ್ಕೆ ತರುವುದಾಗಿ ನಾನು ಚುನಾವಣಾ ಪೂರ್ವದಲ್ಲಿ ತಿಳಿಸಿದ್ದು ನಾನು ನುಡಿದಂತೆ ನಡೆದಿದ್ದೇನೆ. ಹದಿನೈದು ವರ್ಷಗಳ ನಂತರ ಆಡಳಿತ ಪಡೆದುಕೊಂಡಿದೆ. ಆಡಳಿತ ಮಂಡಳಿಯ ಜೊತೆ ನಾನು ಶ್ರಮಿಸುತ್ತೇನೆ. ನಮ್ಮ ಹೋರಾಟ ನಿರಂತರವಾಗಿರಲಿದೆ. ಸುಮಾರು 200 ಮಂದಿಗೆ ಸಾಲಮನ್ನಾ ಹಣ ಪಾವತಿಯಾಗಲು ಬಾಕಿಯಿದ್ದು ಅದನ್ನು ಪಾವತಿಸುವಂತೆ ಸರಕಾರವನ್ನು ಆಗ್ರಹಿಸುವುದೇ ನಮ್ಮ ಹೆಜ್ಜೆಯಾಗಿದೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸಂಘದ ನೂತನ ನಿರ್ದೇಶಕರಾದ ವಿಶ್ವನಾಥ ಬಲ್ಯಾಯ, ಪ್ರವೀಣ್ ಶೆಟ್ಟಿ, ದೇವಪ್ಪ ಪಿ., ಶಿವಪ್ರಸಾದ್, ಜಯರಾಮ ಪೂಜಾರಿ, ದೇವಪ್ಪ ಗೌಡ, ನಮಿತಾ, ಚಂದ್ರ ಹಾಗೂ ಪರಮೇಶ್ವರ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಮನೆ, ನಿತಿಶ್ ಶಾಂತಿವನ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಚಂದ್ರಶೇಖರ ರಾವ್ ಬಪ್ಪಳಿಗೆ, ಶರತ್ಚಂದ್ರ ಬೈಪಾಡಿತ್ತಾಯ, ತಾ.ಪಂ ಮಾಜಿ ಸದಸ್ಯ ಮುಕುಂದ ಬಜತ್ತೂರು, ಹರಿಪ್ರಸಾದ್ ಯಾದವ್, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ, ಉಪಾಧ್ಯಕ್ಷ ಉಮೇಶ್ ಇಂದಿರಾನಗರ, ಸದಸ್ಯರಾದ ನವೀನ್ ರೈ ಶಿಬರ, ಸುಧಾಕರ ಕುಲಾಲ್, ಕೇಶವ ಪೂಜಾರಿ ಮುಕ್ವೆ, ಹರ್ಷ ಜಿ., ಪ್ರವೀಣ್ ನಾಯಕ್ ಸೇರಾಜೆ, ಬೆಳಿಯಪ್ಪ ಗೌಡ ವೀರಮಂಗಲ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ ಭಟ್ ಸ್ವಾಗತಿಸಿ, ವಂದಿಸಿದರು.
ಅಭಿನಂದನಾ ಸಭೆಯಲ್ಲಿ ಕಾಂಗ್ರೆಸ್ನ ಪರಮೇಶ್ವರ ಭಂಡಾರಿ ಭಾಗಿ-ಅಧ್ಯಕ್ಷರಿಗೆ ಅಭಿನಂದನೆ
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಜಂಟಿಯಾಗಿ ಆಯೋಜಿಸಿದ್ದ ಅಭಿನಂದನಾ ಸಭೆಯ ವೇದಿಕೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿರುವ ಪರಮೇಶ್ವರ ಭಂಡಾರಿಯವರು ಭಾಗವಹಿಸಿದ್ದರು. ನಂತರ ಅವರು ನೂತನ ಅಧ್ಯಕ್ಷ ನವೀನ್ರವರನ್ನು ಹೂ ಹಾರ ಹಾಕಿ ಅಭಿನಂದಿಸಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.