50 ವರ್ಷದ ಇತಿಹಾಸದಲ್ಲಿ ಬಿಜೆಪಿ ಆಡಳಿತದಲ್ಲಿರುವ ಹಾಲು ಸೊಸೈಟಿ
ಈ ಬಾರಿ ಕಾಂಗ್ರೆಸ್ ಬೆಂಬಲಿತರಿಂದ ಸ್ಪರ್ಧೆ ಸಾಧ್ಯತೆ
ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಸ್ತುತ ಆಡಳಿತ ಮಂಡಳಿಯ ಅವಧಿ ಪೂರ್ಣಗೊಂಡಿದೆ. ಮುಂದಿನ ಅವಧಿಗೆ ಆಡಳಿತ ಮಂಡಳಿಯ ನೂತನ ನಿರ್ದೇಶಕರ ಆಯ್ಕೆಗೆ ಡಿ.30ರಂದು ಚುನಾವಣೆ ಜರಗಲಿದೆ.
ಒಟ್ಟು 13 ಸ್ಥಾನಗಳನ್ನು ಹೊಂದಿರುವ ಸಂಘದಲ್ಲಿ 7 ಸಾಮಾನ್ಯ ಸ್ಥಾನ, 2 ಮಹಿಳಾ ಮೀಸಲು ಸ್ಥಾನ ಮತ್ತು ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಎ ಹಾಗೂ ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರಗಳ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಡಿ.18ರಂದು ಪ್ರಾರಂಭಗೊಂಡಿದ್ದು ಡಿ.22 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಡಿ.23ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಡಿ.24ರಂದು ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಅದೇ ದಿನ ಅಭ್ಯರ್ಥಿಗಳಿಗೆ ಚಿಹ್ನೆ ವಿತರಣೆಯಾಗಲಿದೆ. ಡಿ.30ರಂದು ಸಂಘದ ಕಚೇರಿಯಲ್ಲಿ ಚುನಾವಣೆ ನಡೆದು ಸಂಜೆ ಫಲಿತಾಂಶ ಘೋಷಣೆಯಾಗಲಿದೆ. ಸಹಕಾರಿ ಇಲಾಖೆಯ ಶೋಭಾ ಚುನಾವಣಾಧಿಕಾರಿಯಾಗಿದ್ದಾರೆ.
ಮೊದಲ ಬಾರಿ ಸ್ಪರ್ಧೆ ಸಾಧ್ಯತೆ:
ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದು ಐವತ್ತು ವರ್ಷ ಸಂದಿದೆ. ಈ ಸಾಲಿನ ವರ್ಷದಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗಿದೆ. ಐವತ್ತು ವರ್ಷಗಳ ಅವಧಿಯಲ್ಲಿ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆದಿಲ್ಲ. ಆರಂಭದಿಂದ ಇದುವರೆಗೂ ಇಲ್ಲಿ ಬಿಜೆಪಿ ಬೆಂಬಲಿತರು ಆಡಳಿತ ನಡೆಸಿದ್ದಾರೆ. ಈ ಬಾರಿ ಮಾತ್ರ ಚುನಾವಣೆಯ ಕಾವು ಕಂಡು ಬಂದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಕಳೆದ ಅವಧಿಯಲ್ಲಿ ನಿರ್ದೇಶಕರಾಗಿದ್ದ ಕಾಂಗ್ರೆಸ್ ಬೆಂಬಲಿತರಿಗೆ ಮತ್ತೆ ಅವಿರೋಧ ಆಯ್ಕೆಯ ಅವಕಾಶ ನೀಡಿ ಎಂದಿನಂತೆ ಮತ್ತೊಮ್ಮೆ ಬಹುಮತದೊಂದಿಗೆ ಆಡಳಿತ ಪಡೆಯುವುದು ಬಿಜೆಪಿ ನಾಯಕರ ಯೋಜನೆಯಾಗಿತ್ತು. ಆದರೆ, ಕಾಂಗ್ರೆಸ್ ಬೆಂಬಲಿತರು ಅವಿರೋಧ ಆಯ್ಕೆಯ ಬದಲು ಸ್ಪರ್ಧೆಗೆ ಒಲವು ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆ ನಡೆಯುವುದು ಬಹುತೇಕ ನಿಚ್ಚಳವಾಗಿದೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರಿಂದ ನಾಮಪತ್ರ ಸಲ್ಲಿಕೆಯಾಗಿದ್ದು ನಾಮಪತ್ರ ಸಲ್ಲಿಕೆಗೆ ಡಿ.22ರವರೆಗೆ ಅವಕಾಶ ಇದೆ. ಡಿ.24ರಂದು ಅಂತಿಮ ಕಣ ಘೋಷಣೆಯಾಗಲಿದೆ.