ಲಗ್ನ ಪತ್ರಿಕೆಯಲ್ಲಿ ಸೃಜನಶೀಲತೆ ಮೆರೆದ ಹರ್ಷಿತ್ ಪಿಂಡಿವನ

0

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಉಪನ್ಯಾಸಕ ಈಗ ಕುತೂಹಲದ ಕೇಂದ್ರಬಿಂದು


ಪುತ್ತೂರು: ಪ್ರತಿಯೊಬ್ಬನ ಬದುಕಿನಲ್ಲೂ ಮದುವೆ ಎಂಬುದು ಮಹತ್ವದ ಕಾಲಘಟ್ಟ. ಮದುವೆಯ ಬಗೆಗೆ ಪ್ರತಿಯೊಬ್ಬರಲ್ಲೂ ನಾನಾ ಬಗೆಯ ಕನಸುಗಳಿರುತ್ತವೆ. ತನ್ನ ವಿವಾಹ ಸಮಾರಂಭ ಹೀಗೆಯೇ ನಡೆಯಬೇಕು ಎಂಬ ಕಲ್ಪನೆಗಳಿರುತ್ತವೆ. ಇಂತಹ ಕಲ್ಪನೆಗಳೇ ಸೃಜನಶೀಲ ಫೋಟೋ ಶೂಟ್, ವಿಶಿಷ್ಟ ವಿವಾಹ ಮಂಟಪ, ಚಿತ್ತಾಕರ್ಷಕ ಚಿತ್ತಾರ, ನಾನಾ ಬಗೆಯ ರುಚಿವೈವಿಧ್ಯವೇ ಮೊದಲಾದವುಗಳಿಗೆ ಕಾರಣವೆನಿಸುತ್ತವೆ.


ಇಲ್ಲೊಬ್ಬರು ತಮ್ಮ ವಿವಾಹ ಪತ್ರಿಕೆಯನ್ನು ದಿನಪತ್ರಿಕೆಯಂತೆ ರೂಪಿಸಿದ್ದಾರೆ. ವಿವಾಹವಾಣಿ ಎಂದು ಆಹ್ವಾನಪತ್ರಿಕೆಗೆ ಹೆಸರಿಟ್ಟಿದ್ದಾರೆ. ಪತ್ರಿಕಾವರದಿಯಂತೆ ಆಹ್ವಾನವನ್ನು ರೂಪಿಸಿದ್ದಾರೆ. ಸುದ್ದಿಯಲ್ಲಿನ ಬಾಕ್ಸ್ ಐಟಂನಂತೆ ಇಲ್ಲಿಯೂ ಬಾಕ್ಸ್‌ನೊಳಗೆ ಮುಖ್ಯ ವಿಷಯವಿದೆ. ತಲೆ ಬರಹ, ಅದರೊಂದಿಗಿರುವ ಉಪಬರಹಗಳೆಲ್ಲವೂ ಇದೆ. ಪತ್ರಿಕಾಪುಟದಲ್ಲಿರುವ ಜಾಹೀರಾತಿನಂತೆ ಇಲ್ಲೂ ಜಾಹೀರಾತಿದೆ. ಹೀಗೆ ಬಹುತೇಕ ಪತ್ರಿಕಾ ಪುಟವನ್ನೇ ಹೋಲುವ ಆಹ್ವಾನಪತ್ರಿಕೆ ಈಗಾಗಲೇ ಅನೇಕರ ಕೈ ಸೇರಿದೆ.


ಅಂದಹಾಗೆ ಇವರ ಹೆಸರು ಹರ್ಷಿತ್ ಪಿಂಡಿವನ. ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಉಪನ್ಯಾಸಕ. ಅವರು ಪತ್ರಿಕೋದ್ಯಮದ ಬೋಧಕನಾಗಿರುವುದು ಈ ಆಹ್ವಾನಪತ್ರಿಕೆ ಸಿದ್ಧಗೊಳ್ಳುವಲ್ಲಿ ಕಾರಣೀಭೂತವೆನಿಸಿದೆ.


ಹರ್ಷಿತ್ ಈ ಹಿಂದೆ ಬೇರೆ ಬೇರೆ ಮಾಧ್ಯಮ ಸಂಸ್ಥೆಯಲ್ಲೂ ಕೆಲಸ ಮಾಡಿ ಅನುಭವ ಗಳಿಸಿದ್ದಾರೆ. ಈ ಟಿವಿ ಕನ್ನಡ, ನ್ಯೂಸ್ 18 ಕನ್ನಡ, ಉದಯವಾಣಿ, ವಿಜಯವಾಣಿ, ಪ್ರಜಾ ಪ್ರಕಾಶ ನ್ಯೂಸ್ ಮಾತ್ರವಲ್ಲದೆ ಉಜಿರೆಯ ಎಸ್.ಡಿ.ಎಂ ಸೊಸೈಟಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿ ತಾನು ಕೆಲಸ ಮಾಡಿದ ಹಾಗೂ ಈಗ ಉದ್ಯೋದಲ್ಲಿರುವ ಸಂಸ್ಥೆಗಳ ಹೆಸರುಗಳನ್ನೆಲ್ಲ ಉಲ್ಲೇಖಿಸಿ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.


’ವಿವಾಹದ ಕರೆಯೋಲೆಯನ್ನು ವಿಶಿಷ್ಟವಾಗಿ ತಯಾರು ಮಾಡಬೇಕೆಂಬ ಕನಸಿತ್ತು. ನಾನು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದು ಹಾಗೂ ಈಗ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವುದರಿಂದ ಪತ್ರಿಕೋದ್ಯಮಕ್ಕೆ ಪೂರಕವೆನಿಸುವ ರೀತಿಯಲ್ಲಿ ಮಾಡಬೇಕೆಂದು ಹಂಬಲಿಸಿದ್ದೆ. ಆ ಪ್ರಕಾರವಾಗಿ ಈ ಲಗ್ನಪತ್ರಿಕೆ ರೂಪುಗೊಂಡಿದೆ’ ಎನ್ನುತ್ತಾರೆ ಹರ್ಷಿತ್.
ಒಟ್ಟಿನಲ್ಲಿ ಹೊಸತನಕ್ಕಾಗಿ ಹಂಬಲಿಸುವ ಮನಸ್ಸಿದ್ದಾಗ ಇಂತಹ ಸಂಗತಿಗಳು ಅನಾವರಣಗೊಳ್ಳುತ್ತವೆ. ಡಿಸೆಂಬರ್ ೨೫ರಂದು ತೇಜಸ್ವಿನಿ ಎಂಬ ವಧುವೊಂದಿಗೆ ಹಸೆಮಣೆ ಏರಲಿರುವ ಪತ್ರಿಕೋದ್ಯಮ ಮೇಷ್ಟ್ರಿಗೆ ಸರ್ವರ ಹಾರೈಕೆಗಳಿರಲಿ.

LEAVE A REPLY

Please enter your comment!
Please enter your name here