ವಿದ್ಯೆ ಅತೀ ದೊಡ್ಡ ಸಂಪತ್ತು: ಪುತ್ತೂರು ಬಿಷಫ್
ಪೆರಾಬೆ: ಮಾರ್ ಇವಾನಿಯೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾನಗರ, ಕುಂತೂರು ಇಲ್ಲಿನ 2023-24ನೇ ಸಾಲಿನ ಶಾಲಾ ವಾರ್ಷಿಕೋತ್ಸವ ‘ಐವಾನಿಯಾ-2023’ ಡಿ.20ರಂದು ಸಂಜೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕೋತ್ಸವ ಸಮಾರಂಭವನ್ನು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿವಂದನೀಯ ರೆ.ಫಾ.ಡಾ. ಗೀವರ್ಗೀಸ್ ಮಾರ್ ಮಕರಿಯೋಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯೆ ಬದುಕಿನ ಉದ್ದಕ್ಕೂ ನಮ್ಮೊಂದಿಗೆ ಇರುವಂತದ್ದು. ಇದೊಂದು ದೇವರ ಕೊಡುಗೆಯಾಗಿದೆ. ವಿದ್ಯೆಯು ಅತೀ ದೊಡ್ಡ ಸಂಪತ್ತೂ ಆಗಿದೆ. ಕಲಿಕೆಯು ಅಂಕಗಳಿಕೆ, ಸರಕಾರಿ ಉದ್ಯೋಗ ಪಡೆಯುವುದಕ್ಕೆ ಸೀಮಿತ ಆಗಿರಬಾರದು. ಮಕ್ಕಳಲ್ಲಿನ ಪ್ರತಿಭೆಗಳನ್ನು ಬೆಳಗಿಸಿ ಮುಂದೆ ಅವರು ರಾಜ್ಯ, ದೇಶವನ್ನು ಮುನ್ನಡೆಸುವ ನಾಯಕರನ್ನಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು. ವಿದ್ಯಾಲಯವು ದೇವಾಲಯ ಎಂಬ ಭಾವನೆ ಮಕ್ಕಳಲ್ಲಿ ಇರಬೇಕು. ನಮ್ಮತನ, ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು ಎಂದು ಹೇಳಿದ ರೆ.ಫಾ.ಡಾ.ಗೀವರ್ಗೀಸ್ ಮಾರ್ ಮಕರಿಯೋಸ್ ಅವರು, ಗ್ರಾಮೀಣ ಪ್ರದೇಶದಲ್ಲಿ ಮಾರ್ ಇವಾನಿಯೋಸ್‌ರ ಹೆಸರಿನಲ್ಲಿರುವ ಈ ವಿದ್ಯಾಸಂಸ್ಥೆ ಈ ಪ್ರದೇಶದ ಜನರ ಪ್ರೀತಿಗಳಿಸಿದೆ. ಸಂಸ್ಥೆಯೂ ಈ ಪ್ರದೇಶದ ಅಭಿವೃದ್ಧಿಯಲ್ಲಿಯೂ ತೊಡಗಿಕೊಂಡಿದೆ. ಸಂಸ್ಥೆ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ. ಅವರು ಮಾತನಾಡಿ, ಮಾರ್ ಇವಾನಿಯೋಸ್ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿದೆ. ಸಂಸ್ಥೆ ಇನ್ನಷ್ಟೂ ಎತ್ತರಕ್ಕೆ ಏರಲಿ ಎಂದು ಹಾರೈಸಿದರು. ಆಲಂಕಾರು ಕ್ಲಸ್ಟರ್ ಸಿಆರ್‌ಪಿ ಪ್ರಕಾಶ್ ಬಾಕಿಲ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಮನೆಯಿಂದಲೇ ಸಿಗಬೇಕು. ದಿನದ 24 ಗಂಟೆಯಲ್ಲಿ ಅರ್ಧ ತಾಸು ಆದರೂ ಪೋಷಕರು ಮಕ್ಕಳಿಗೆ ಸೀಮಿತಗೊಳಿಸಬೇಕು. ಪೋಷಕರೇ ಮಕ್ಕಳಿಗೆ ಮಾದರಿಯಾಗಿರಬೇಕೆಂದು ಹೇಳಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾರಾಯಣ ಕೆ.,ಅವರು ಮಾತನಾಡಿ, ವಾರ್ಷಿಕೋತ್ಸವದ ಮೂಲಕ ಸಂಸ್ಥೆ ವಿದ್ಯಾರ್ಥಿಗಳಿಗೆ ತಮ್ಮಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಒದಗಿಸಿಕೊಟ್ಟಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಆಂಗ್ಲಭಾಷೆಯಲ್ಲಿ ಪ್ರಬುದ್ಧತೆ ಬೆಳೆಸಿಕೊಂಡಿದ್ದಾರೆ. ಅಲೆನಾ ಮೇರಿ ಅವರ ನೇತೃತ್ವದಲ್ಲಿ ಸಂಸ್ಥೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ಡಾ.ಆದಂ ಶಾಕೀರ್ ಅವರು ಮಾತನಾಡಿ, ಮಾರ್ ಇವಾನಿಯೋಸ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ವಿದ್ಯಾರ್ಥಿಗಳು ಚೆನ್ನಾಗಿ ಕಲಿತು ಉನ್ನತ ಹುದ್ದೆಗೆ ಏರುವಂತಾಗಬೇಕೆಂದು ಹೇಳಿ ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರೋವಿನ್ಶಿಯಲ್ ಸುಪಿರಿಯರ್ ರೆ.ಮದರ್ ಅಲ್ಫೋನ್ಸಾ ಜೇಕಬ್ ಡಿ.ಎಂ.ಅವರು ಮಾತನಾಡಿ, ಪೋಷಕರೇ ಮಗುವಿನ ಮೊದಲ ಶಿಕ್ಷಕ. ಮಗುವಿನ ಕಲಿಕೆಗೆ ಶಿಕ್ಷಕರೊಂದಿಗೆ ಪೋಷಕರೂ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು.
ಬಹುಮಾನ ವಿತರಣೆ:
ಈ ಹಿಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಅನನ್ಯ ಎಸ್., ಸಹನಾ ಸಿ.ಎಸ್., ಜಯಶ್ರೀ ಎಂ., ಪ್ರಾಪ್ತಿ ಪಿ.ವಿ. ಹಾಗೂ ಕನ್ನಡದಲ್ಲಿ 125 ಪೂರ್ಣ ಅಂಕಗಳಿಸಿದ ಕ್ಷಮಾ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ ಕಲಿಯುತ್ತಿರುವ ತರಗತಿವಾರು ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ದ.ಕ.ಜಿಲ್ಲಾ ಪ್ರೋಟೋ ವಿಕಾರ್ ರೆ.ಫಾ.ಡೇನಿಯಲ್ ಕಡಕಂಪಲಿಲ್, ಶಾಲಾ ಮುಖ್ಯಶಿಕ್ಷಕಿ ಸಿ| ಅಲೆನ್ ಮೇರಿ ಡಿ.ಎಂ., ಶಾಲಾ ನಾಯಕಿ ಅವನಿ ಸಿ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸಿ| ಅಲೆನ್ ಮೇರಿ ಡಿ.ಎಂ. ವರದಿ ವಾಚಿಸಿದರು. ಶಾಲಾ ನಾಯಕಿ ಅವನಿ ಸಿ.ಪಿ.ಸ್ವಾಗತಿಸಿ, ಉಪನಾಯಕಿ ಧನ್ವಿ ಬಿ.ವಂದಿಸಿದರು. ಶಿಕ್ಷಕರಾದ ಅನು ಮ್ಯಾಗಿ, ಧನ್ಯಾ ಜೆರೀಸನ್, ಸಾಜನ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಹಾಗೂ ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.