ಉಪ್ಪಿನಂಗಡಿ: ಕೇಂದ್ರ ಸರಕಾರದ ಜನೋಪಯೋಗಿ ಯೋಜನೆಗಳನ್ನು ಜನ ಸಾಮಾನ್ಯರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಶನಿವಾರದಂದು ಉಪ್ಪಿನಂಗಡಿಗೆ ಆಗಮಿಸಿತು.
ಯಾತ್ರೆಯ ಮೂಲ ಉದ್ದೇಶದಂತೆ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾಯೋಜಿಸಲ್ಪಟ್ಟ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ದೇಶದ ಪ್ರತಿಯೋರ್ವ ಪ್ರಜೆಯನ್ನು ದೃಷ್ಠಿಯಲ್ಲಿರಿಸಿಕೊಂಡು ಕೇಂದ್ರ ಸರಕಾರ ಕೈಗೊಂಡ ಹಲವರು ಯೋಜನೆಗಳಿಂದಾಗಿ ಜನತೆಯ ಬದುಕು ಉನ್ನತೀಕರಣಗೊಂಡಿದೆ. ಯೋಜನೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಇದರ ಪ್ರಯೋಜನವನ್ನು ಪ್ರತಿಯೋರ್ವರೂ ಪಡೆದುಕೊಳ್ಳಬೇಕೆಂದರು.
ಪ್ರಸ್ತಾವಿಕ ಮಾತುಗಳನ್ನಾಡಿದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಲಹಾಗಾರ್ತಿ ಗೀತಾ ವಿಜಯ್ , ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಜನ ಸಾಮಾನ್ಯರಿಗೆ ತಲುಪಿಸುವಂತಾಗಲು ದೇಶದ ಪ್ರತಿಯೊಂದು ಬ್ಯಾಂಕುಗಳನ್ನು ಒಳಗೊಂಡ ಆರ್ಥಿಕ ಸಾಕ್ಷರತಾ ಕೇಂದ್ರವನ್ನು ತೆರೆಯಲಾಗಿದೆ. ಇದರ ಮೂಲಕ ಯೋಜನೆಗಳ ಬಗ್ಗೆ ಅರಿವು ಮೂಡಿಸುವ . ಮತ್ತು ಯೋಜನೆಗಳನ್ನು ಅನುಷ್ಠಾನಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಇದರ ಉಪ್ಪಿನಂಗಡಿ ಶಾಖಾ ಮೇನೇಜರ್ ನಾಗರಾಜ್, ಪಂಚಾಯತ್ ಕಾರ್ಯದರ್ಶಿ ಗೀತಾ ಶೇಖರ್, ಶಿಶು ಕಲ್ಯಾಣ ಇಲಾಖಾಧಿಕಾರಿ ಸುಜಾತ, ಉಪ್ಪಿನಂಗಡಿ ಸಿ ಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ, ಉಪಾಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರೆಮಜಲು, ಅಮೂಲ್ಯ ಗ್ಯಾಸ್ ಏಜೆನ್ಸಿ ಮಾಲಕ ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಧನಂಜಯ್ ನಟ್ಟಿಬೈಲು, ಯು.ಟಿ. ತೌಸೀಫ್, ವನಿತಾ ಸಾಮಾಜಿಕ ಕಾರ್ಯಕರ್ತರಾದ ಜಯಂತ ಪೊರೋಳಿ, ರಾಮಚಂದ್ರ ಮಣಿಯಾಣಿ, ಮುಕುಂದ ಗೌಡ ಬಜತ್ತೂರು, ಯತೀಶ್ ಶೆಟ್ಟಿ, ಜಯಂತ, ಸುಂದರಿ, ಶಬೀರ್ ಕೆಂಪಿ, ಅಭಯ್ ಜೈನ್, ಧರ್ಣಪ್ಪ ನಾಯ್ಕ್, ಆದರ್ಶ್ ಕಜೆಕ್ಕಾರ್, ಜಯಗೋವಿಂದ ಶರ್ಮ, ಚಂದ್ರಶೇಖರ್ ಮಡಿವಾಳ, ಸುಜಾತಕೃಷ್ಣ ಆಚಾರ್ಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಕಾರ್ಯ, ಹಾಗೂ ಉಜ್ವಲ ಗ್ಯಾಸ್ ಸಂಪರ್ಕದ ಮಂದಿಗೆ ಕೆವೈಸಿ ಸಲ್ಲಿಕೆಯ ಪ್ರಕ್ರಿಯೆಯನ್ನು ನಡೆಸಲಾಯಿತು.