ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದ.23ರಂದು ಪ್ರತಿಭಾ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯರವರು ಮಾತನಾಡುತ್ತಾ ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯ.ಬಹುಮಾನ ಸಿಗದಿದ್ದರೂ ಭಗವಂತನಿಂದ ಯಾವುದಾದರೊಂದು ರೂಪದಲ್ಲಿ ಬಹುಮಾನ ಸಿಗಬಹುದು.ಎಲ್ಲರಿಗೂ ಶ್ರೀ ಕೃಷ್ಣನ ಆಶೀರ್ವಾದ ಸಿಗಲಿ ಎಂದು ಶುಭ ಹಾರೈಸಿದರು.
ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಮಾತನಾಡಿ,ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ.ಭಾಗವಹಿಸುವುದರ ಮೂಲಕ ಪ್ರತಿಭೆಯನ್ನು ಹೊರತರಬೇಕು.ಗೆಲ್ಲುವುದು ಮುಖ್ಯವಲ್ಲ ಛಲದಿಂದ ಭಾಗವಹಿಸುವುದು ಮುಖ್ಯ.ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಯಶಸ್ಸಿಗೆ ತಯಾರಿ ಮಾಡಿಕೊಂಡಿರಬೇಕು ಎಂದರು.ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿಗೆ ಮನ್ನಣೆ ಸಿಗುವುದು ಆತನ ಪ್ರತಿಭೆಯಿಂದ. ಸಾಂದೀಪನಿ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸರಿಯಾದ ಗೌರವ ನೀಡಲಾಗುತ್ತದೆ ಎಂದು ಹೇಳಿ ಶುಭಹಾರೈಸಿದರು.
ಆಡಳಿತ ಮಂಡಳಿ ಸದಸ್ಯ ಹರೀಶ್ ಪುತ್ತೂರಾಯರು ಮಾತನಾಡಿ,ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿ ಪ್ರತಿಭೆಯನ್ನು ಹೊರಹಾಕುವ ಆಸಕ್ತಿ ಬೆಳೆಸಿಕೊಳ್ಳಿ.ಗೆಲುವನ್ನು ಸಂಭ್ರಮಿಸಿ ಹಂಚಿಕೊಳ್ಳುವ ಹಾಗೆ ಸೋಲನ್ನು ಕೂಡ ಹಂಚಿಕೊಂಡು ಮುಂದಿನ ತಯಾರಿ ನಡೆಸಬೇಕು ಎಂದರು.ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯರು ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಗಳಿಸಿಕೊಳ್ಳಬೇಕು.ಒಮ್ಮೆ ಅವಕಾಶ ತಪ್ಪಿದರೆ ಮತ್ತೊಮ್ಮೆ ಸಿಗಲು ಕಷ್ಟ ಸಾಧ್ಯ ಎಂದರು.
ಕಲಿಕೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆದ ಹಾಗೂ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ.ಎನ್.ಸ್ವಾಗತಿಸಿದರು.ಶಿಕ್ಷಕಿ ಶ್ರೀಮತಿ ಅನಿತಾ ಧನ್ಯವಾದ ಸಲ್ಲಿಸಿದರು.ಶ್ರೀಮತಿ ಗೀತಾ ಎಚ್.ಎಸ್.ಕಾರ್ಯಕ್ರಮ ನಿರ್ವಹಣೆ ಮಾಡಿದರು.ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಭಾಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ಕೀಬೋರ್ಡ್ ನುಡಿಸುವಿಕೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು.