ಕಾಣಿಯೂರು: ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದ ಶಿಕ್ಷಣ ಸರಿಯಾಗಿ ಸಿಕ್ಕಾಗ ಮಾತ್ರ ಆ ವಿದ್ಯಾರ್ಥಿ ಮುಂದೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಉನ್ನತ ಮಟ್ಟದ ನಾಯಕನಾಗಲು ಸಾಧ್ಯ. ಶಾಲೆ ಎಂಬುದು ದೇವಾಲಯವಿದ್ದಂತೆ. ಊರಿಗೆ ದೇಗುಲ ಎಷ್ಟೋ ಪ್ರಾಮುಖ್ಯತೆಯೂ, ಶಾಲೆ ಕೂಡ ಅಷ್ಟೇ ಪ್ರಾಮುಖ್ಯತೆ ಆಗಿರುತ್ತದೆ. ಊರಿನ ಶಾಲೆಯ ಬಗ್ಗೆ ಆತ್ಮೀಯತೆ, ಪ್ರೀತಿಯಿಂದ ತೊಡಗಿಸಿಕೊಂಡಾಗ ಶಾಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಡಿ 23ರಂದು ನಾಣಿಲ ಸ.ಹಿ.ಪ್ರಾ.ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಚ್ಚಾರಿತ್ರ್ಯದ ಬದುಕಿನಲ್ಲಿ ಪೋಷಕರ ಪಾತ್ರ ಮಹತ್ವದ್ದು. ಶಿಕ್ಷಣದ ಜೊತೆಗೆ ಸಂಸ್ಕಾರಯುತವಾದ ಸಂಸ್ಕೃತಿಯನ್ನು ಕೊಡಬೇಕು. ಆ ಸಂಸ್ಕಾರ ಮನೆಯಿಂದ ಬರಬೇಕು ಎಂದರು. ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಆರ್ ಗೌಡ ಅರುವಗುತ್ತು ಮಾತನಾಡಿ, ವಿದ್ಯಾರ್ಥಿಗಳು ಕನಸು ಕಾಣಬೇಕು. ಅ ಕನಸನ್ನು ಕಾಣುವ ಪ್ರವೃತ್ತಿಯನ್ನು ಶಿಕ್ಷಣ ಸಂಸ್ಥೆ ಒದಗಿಸಬೇಕು. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಾನು ಕಲಿತ ಶಾಲೆಯನ್ನು ನೆನಪಿಟ್ಟುಕೊಂಡು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಕಾರ್ಯಪ್ರವೃತರಾಗಬೇಕು ಎಂದವರು, ಯಾವುದೇ ಸನ್ಮಾನಕ್ಕೆ, ಯಾವುದೇ ಪದವಿಗೋಸ್ಕರ, ವೈಯುಕ್ತಿಕ ಕಾರಣಕ್ಕಾಗಿ ಸಿ.ಪಿ ಜಯರಾಮ ಗೌಡರು ಸಮಾಜದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿಲ್ಲ. ತನ್ನ ಕರ್ತವ್ಯ ಎಂದು ತಿಳಿದು ಅವರು ಇಲ್ಲಿನ ಶಾಲೆ ಸೇರಿದಂತೆ ಊರಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಸ್ಮರಿಸಿ ಗುರುತಿಸುವ ಕಾರ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಸರಕಾರಿ ಶಾಲೆಗಳು ಉಳಿಯಬೇಕು, ಜೊತೆಗೆ ಬೆಳೆಯಬೇಕು. ಸರಕಾರಿ ಶಾಲೆಗಳಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ್ತ ಹುದ್ದೆಯಲ್ಲಿದ್ದು, ಇದು ಸರಕಾರಿ ಶಾಲೆಗಳ ಶಕ್ತಿ. ಮಕ್ಕಳಿಗೆ ಮೊದಲಾಗಿ ಕನಸ್ಸನ್ನು ತುಂಬಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ಮಾಡಿದಾಗ ಮಾತ್ರ ದೊಡ್ಡ ದೊಡ್ಡ ಹುದ್ದೆಯನ್ನು ಅಲಂಕರಿಸುವುದಕ್ಕೆ ಸಾಧ್ಯವಾಗುತ್ತದೆ. ಮಕ್ಕಳ ಹೆತ್ತವರು ಮತ್ತು ಶಿಕ್ಷಕರು ಉತ್ತಮ ರೀತಿಯ ಸಂಸ್ಕಾರ ಮತ್ತು ಶಿಕ್ಷಣ ವಿದ್ಯಾರ್ಥಿಗಳಿಗೆ ಕೊಟ್ಟರೆ, ಆ ವಿದ್ಯಾರ್ಥಿಯು ಉತ್ತಮ ಪ್ರಜೆಯಾಗಲು ಸಾಧ್ಯ. ಮಕ್ಕಳಿಗೆ ಆಸ್ತಿ ಮಾಡಬೇಕೆಲ್ಲ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಮಂಗಳೂರು ಗೋಕರ್ಣನಾಥೇಶ್ವರ ಕೋ ಅಪರೇಟಿವ್ ಬ್ಯಾಂಕ್ನ ನಿರ್ದೇಶಕ ವಿಜಯ ಕುಮಾರ್ ಸೊರಕೆ ಮಾತನಾಡಿ, ಮಕ್ಕಳಿಗೆ ಕಡ್ಡಾಯವಾಗಿ ಕನ್ನಡದ ಜೊತೆಗೆ ಆಂಗ್ಲಮಾಧ್ಯಮದ ಶಿಕ್ಷಣದ ಅವಶ್ಯಕತೆಯೂ ಇದೆ. ಸಂಸ್ಥೆಯ ಬೆಳವಣಿಗೆಗೆ ಪೋಷಕರ ಸಂಬಂಧವು ಅತೀ ಮುಖ್ಯ. ಶಾಲಾ ಎಸ್ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಪೋಷಕರು ಸೇರಿ ನಾಣಿಲ ಶಾಲೆಗಳ ವಿವಿಧ ಬೇಡಿಕೆಗಳ ಬಗ್ಗೆ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಎಂದವರು. ಶಾಲೆ, ಊರಿನ ಅಭಿವೃದ್ಧಿಯಲ್ಲಿ ಸಿ.ಪಿ ಜಯರಾಮ ಗೌಡರ ಪಾತ್ರ ಅಪಾರ ಎಂದರು.
ಕಡಬ ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಕಾರ್ಯದರ್ಶಿ ಬಾಲಕೃಷ್ಣರವರು ಮಾತನಾಡಿ, ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುವರು ಮಹಿಳೆಯರು. ಹೆತ್ತವರು ತಮ್ಮ ಮಕ್ಕಳೊಂದಿಗೆ ದಿನದಲ್ಲಿ ಒಂದಿಷ್ಟು ಹೊತ್ತನ್ನು ಕಳೆಯಬೇಕು. ಶಿಕ್ಷಣ ಸಂಸ್ಥೆಗಳ ಜೊತೆಯಲ್ಲಿ ಊರವರು ಸಕ್ರೀಯವಾಗಿ ತೊಡಗಿಸಿಕೊಂಡಲ್ಲಿ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಕಾಣಿಯೂರು ಗ್ರಾ.ಪಂ,ಅಧ್ಯಕ್ಷ ವಿಶ್ವನಾಥ ಕೊಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ, ಕಾಣಿಯೂರು ಕ್ಲಸ್ಟರ್ ಸಿಆರ್ಪಿ ಯಶೋದ, ಸಿ.ಜೆ ಚಂದ್ರಕಲಾ ಜಯರಾಮ್ ಅರುವಗುತ್ತು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಿತ್ ಮಾಚಿಲ, ಎಸ್ಡಿಎಂಸಿ ಉಪಾಧ್ಯಕ್ಷೆ ಕುಸುಮಾವತಿ ಕಳ, ವಿದ್ಯಾರ್ಥಿ ನಾಯಕ ಗಗನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಸಂತ ದಲಾರಿ ಪ್ರಾಸ್ತಾವಿಕದೊಂದಿಗೆ, ಸ್ವಾಗತಿಸಿ, ನಾಣಿಲ ಶಾಲಾ ಕಟ್ಟಡವು 62 ವರ್ಷಗಳ ಹಳೆಯದಾಗಿದ್ದು, ತುಂಬಾ ಶಿಥಿಲಗೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾನುಕೂಲವಾಗಿರುತ್ತದೆ. ಅಲ್ಲದೇ ಶಾಲೆಗೆ ಸಮರ್ಪಕವಾದ ಆಟದ ಮೈದಾನದ ಅಗತ್ಯವೂ ಇದ್ದು, ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಶಾಲಾ ಮುಖ್ಯಗುರು ಪದ್ಮಯ್ಯ ಗೌಡ ವರದಿ ವಾಚಿಸಿದರು. ಶಾಲಾ ವಿದ್ಯಾರ್ಥಿಗಳಾದ ವರ್ಷಿಕ, ವಂಶಿಕ, ಅಶ್ಮಿತಾ ಪ್ರಾರ್ಥಿಸಿದರು. ಕುಸುಮಾವತಿ ಕಳ, ಆನಂದ ಉದ್ಲಡ್ಡ, ಪದ್ಮಯ್ಯ ಗೌಡ, ಸರೋಜಿನಿ ಅರುವ, ನಂದಿನಿ ಎಸ್, ಲೋಲಾಕ್ಷಿ ಅಗತ್ತಬೈಲು, ದಿನೇಶ್ ಕುಕ್ಕುನಡ್ಕ, ಪುರಂದರ ಅಂಬುಲ, ಪುಷ್ಪಲತಾ ಬೀರೊಳಿಗೆ, ಜಯಂತಿ ಮುದುವ, ಸುನಿಲ್ ಕುಮಾರ್ ,ವಸಂತಿ ಅಭಿಕಾರ, ವಸಂತ ಮುಂಗುಲಿ ಮನೆ, ಆನಂದ ಅಂಬುಲ, ಆನಂದ ಉದ್ಲಡ್ಡ, ಶಕುಂತಲಾ ಕುಂಬ್ಲಾಡಿ, ಲತಾ ಕುಂಬ್ಲಾಡಿ, ಬಾಲಕಿ ಕಳ, ಬಾಲಕೃಷ್ಣ ಖಂಡಿಗ, ದಾಮೋದರ ಖಂಡಿಗ ಕುಶಾಲಪ್ಪ ಕರಂದ್ಲಾಜೆ ಅತಿಥಿಗಳಿಗೆ ಶಾಲು, ಹೂ ನೀಡಿ ಗೌರವಿಸಿದರು. ಸಹ ಶಿಕ್ಷಕಿ ನಂದಿನಿ ವಂದಿಸಿದರು, ಗೌರವಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸುನಿಲ್ ಕುಮಾರ್, ಗೌರವ ಶಿಕ್ಷಕಿಯರಾದ ಹವ್ಯ, ಶ್ವೇತಾ, ಜೀವಿತಾ, ಸವಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನೂತನ ಕೊಠಡಿ, ಶೌಚಾಲಯ ಉದ್ಘಾಟನೆ:
ನಾಣಿಲ ಶಾಲಾ ನೂತನ ಕಟ್ಟಡವನ್ನು ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಶೌಚಾಲಯವನ್ನು ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ ಉದ್ಘಾಟಿಸಿದರು.
ಶಾಸಕರಿಗೆ ಮನವಿ:
ಶಿಥಿಲಗೊಂಡಿರುವ ನಾಣಿಲ ಶಾಲಾ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಒದಗಿಸುವ ಬಗ್ಗೆ, ಶಾಲಾ ಆಟದ ಮೈದಾನ ವಿಸ್ತರಿಸುವ ಬಗ್ಗೆ ಮತ್ತು ತಡೆಗೋಡೆ ರಚಿಸಲು ಅನುದಾನ ಒದಗಿಸುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸನ್ಮಾನ: ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಸಿ.ಜೆ ಚಂದ್ರಕಲಾ ಜಯರಾಮ ಅರುವಗುತ್ತು, ಸುದ್ದಿ ಬಿಡುಗಡೆ ವರದಿಗಾರ ಸುಧಾಕರ್ ಕಾಣಿಯೂರು, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಗುತ್ತಿಗೆದಾರ ಗಂಗಾಧರ ಪೆರಿಯಡ್ಕ ಅವರನ್ನು ಸನ್ಮಾನಿಸಲಾಯಿತು.