ತೆಂಕಿಲ ವಿವೇಕಾನಂದ ಕ.ಮಾ.ಶಾಲೆಯಲ್ಲಿ ಸಾಂಸ್ಕೃತಿಕ ಸಮನ್ವಯ-2023 ವರ್ಷದ ಹರ್ಷ

0

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಜೊತೆ ಪೋಷಕರೂ ಕೈಜೋಡಿಸಿ-ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.
ಸತತ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯ-ಉಜ್ವಲ್ ಪ್ರಭು
ಸಂಸ್ಕಾರಯುತವಾದ ಆತಿಥ್ಯ ನೀಡಿದ್ದಾರೆ-ಶಿವಶಂಕರ ನಾಯಕ್
ಇಲ್ಲಿನ ಶಿಕ್ಷಕರು ಪುಣ್ಯಕೋಟಿ ಇದ್ದಹಾಗೆ-ಡಾ.ಕೃಷ್ಣ ಭಟ್
ಪೋಷಕರ ವಿಶ್ವಾಸದಿಂದ ಶಾಲೆ ಈ ಹಂತಕ್ಕೆ ಬಂದಿದೆ- ವಸಂತ ಸುವರ್ಣ

ಪುತ್ತೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಓದುವಿಕೆ ಮಾತ್ರ ಮುಖ್ಯ ಅಲ್ಲ. ಮಹಾನ್ ಸಾಧಕರ ಜೀವನ ಚರಿತ್ರೆ ಓದಲು ಪ್ರೋತ್ಸಾಹಿಸಬೇಕು. ಓದಿನ ಜೊತೆಗೆ ದೊಡ್ಡ ಸಾಧನೆಗಳನ್ನು ಮಾಡಲು ಪ್ರೋತ್ಸಾಹ ಕೊಡಬೇಕು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಹೇಳಿದರು. ಅವರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಾಂಸ್ಕೃತಿಕ ಸಮನ್ವಯ-2023 ವರ್ಷದ ಹರ್ಷ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕು. ನೀವೆಲ್ಲಾ ಪೋಷಕರು ಕನ್ನಡ ಶಾಲೆಗೆ ಧೈರ್ಯ ಮಾಡಿ ಸೇರಿಸಿದಿರಿ ಇದು ಹೆಮ್ಮೆಯ ವಿಷಯ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಕರ ಜೊತೆ ಪೋಷಕರೂ ಕೈಜೋಡಿಸಬೇಕು ಎಂದರು. ಹಿಂದಿನ ವಿದ್ಯಾರ್ಥಿಗಳಿಗೆ ಮುಂದೆ ಗುರಿ ಇತ್ತು. ಆದರೆ ಇಂದು ಮಕ್ಕಲ್ಲಿ ಗುರಿ ಇಲ್ಲ. ಆತ್ಮವಿಶ್ವಾಸವೂ ಇಲ್ಲ. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದ ಅವರು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಜಿ.ಎಂ.ರವರಿಗೆ ಧನ್ಯವಾದ ಸಲ್ಲಿಸಿದರು.

ಚಿತ್ರ: ಚೇತನಾ ಸ್ಟುಡಿಯೋ

ಮಕ್ಕಳನ್ನು ಇತರ ಮಕ್ಕಳ ಜೊತೆ ತುಲನೆ ಮಾಡಬೇಡಿ-ಉಜ್ವಲ್ ಪ್ರಭು
ಶಾಲಾ ಹಿರಿಯ ವಿದ್ಯಾರ್ಥಿ, ಪುತ್ತೂರು ಯು.ಆರ್.ಪ್ರಾಪರ್ಟಿಸ್‌ನ ಉಜ್ವಲ್ ಕುಮಾರ್ ಪ್ರಭು ಮಾತನಾಡಿ, ನನಗೆ ವೈಯುಕ್ತಿಕವಾಗಿ ಸಂಸ್ಕಾರ ಹಾಗೂ ಸಮಯದ ಬೆಲೆ ಹೇಳಿಕೊಟ್ಟ ಶಾಲೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ. ನನಗೆ ವಿದ್ಯೆ ಕಳಿಸಿದ ಶಿಕ್ಷಕರು ಈಗಲೂ ಇಲ್ಲಿ ಇದ್ದಾರೆ. ಮಕ್ಕಳನ್ನು ಇತರ ಮಕ್ಕಳ ಜೊತೆ ತುಲನೆ ಮಾಡಬೇಡಿ ಎಂದರು. ಒಂದು ಗಿಡ ಬೆಳೆದು ಮರವಾಗಲು ತುಂಬಾ ಸಮಯ ಬೇಕು ಹಾಗೆಯೇ ಸತತ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ಎಲ್ಲದಕ್ಕೂ ಸಮಯ ಬೇಕು. ಇದಕ್ಕಾಗಿ ಕಾಯಬೇಕು ಎಂದರು.

ಸಂಸ್ಕಾರಯುತ ವಿದ್ಯೆ ಕಲಿಯಿರಿ-ಶಿವಶಂಕರ ನಾಯಕ್
ಬೆಳ್ತಂಗಡಿಯ ರೈತಬಂಧು ಮಾಲಕ ಶಿವಶಂಕರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಶೋಕಿ ಮಾಡಬಾರದು. ಎಲ್ ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗಿನ ಮಕ್ಕಳು 24 ಕ್ಯಾರೆಟ್ ಚಿನ್ನದಂತಿರುವ ಮಕ್ಕಳು. ಇವರನ್ನು ಒಳ್ಳೆಯ ರೀತಿಯಲ್ಲಿ ತಿದ್ದಬೇಕು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿನ ವ್ಯವಸ್ಥೆಗಳು ನನ್ನ ಮನಸ್ಸಿಗೆ ಸಂತೋಷ ತಂದಿದೆ. ನಮಗೆ ನೀಡಿದ ಅತಿಥ್ಯ ಸಂಸ್ಕಾರಯುತವಾಗಿತ್ತು ಎಂದರು. ಮಕ್ಕಳನ್ನು ಕಲಿಯುವಷ್ಟು ಕಲಿಸಬೇಕು. ಅಂಕ ಕಡಿಮೆ ಬಂದರೂ ತೊಂದರೆ ಇಲ್ಲ. 90 ತೆಗೆದವನಿಗೂ ಬದುಕು ಇದೆ 30 ತೆಗೆದವನಿಗೂ ಬದುಕು ಇದೆ. ಜೀವನ ಮಾಡಲು ಪ್ರತಿಯೊಬ್ಬರಿಗೂ ದಾರಿ ಇದೆ. ಆದರೆ ಸಂಸ್ಕಾರಯುತ ವಿದ್ಯೆ ಕಲಿಯಿರಿ. ಸತ್ಪ್ರಜೆಯಾಗಿ ಹೊರಗೆ ಬನ್ನಿ ಎಂದರು.

ಸಮನ್ವಯದ ಹಿನ್ನಲೆಯ ಕಾರ್ಯಕ್ರಮ-ಡಾ.ಕೃಷ್ಣ ಭಟ್
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ವಾರ್ಷಿಕೋತ್ಸವ ಎಂಬುದು ವಿಶೇಷ ಮಹತ್ವಪೂರ್ಣವಾದ ಕಾರ್ಯಕ್ರಮ. ಇದು ಮಕ್ಕಳಿಗೆ ಚೈತನ್ಯ ನಿಡುವ ಕಾರ್ಯಕ್ರಮ. ಮಕ್ಕಳ ಪ್ರತಿಭೆಯನ್ನು ಗುರುತಿಸುವ ದಿನ. ಸಮನ್ವಯದ ಹಿನ್ನಲೆಯ ಕಾರ್ಯಕ್ರಮ ಇದಾಗಿದೆ ಎಂದರು. ಕನ್ನಡ ಮಾಧ್ಯಮ ಗ್ರಹಿಕೆಗೆ ಸುಲಭ. ವಿವೇಕಾನಂದ ವಿದ್ಯಾವರ್ಧಕ ಸಂಘವು ಪುತ್ತೂರು ಕೇಂದ್ರವಾಗಿಟ್ಟುಕೊಂಡು ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿದೆ. ಇವತ್ತು ಸುಮಾರು 800 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ಇಲ್ಲಿನ ಶಿಕ್ಷಕರು ಪುಣ್ಯಕೋಟಿ ಇದ್ದಹಾಗೆ ಎಂದರು.

ಎಲ್ಲಾ ಸಮಿತಿಗಳ ಪರಿಶ್ರಮದಿಂದ ಹಬ್ಬದ ವಾತಾವರಣ-ಕೆ. ವಸಂತ ಸುವರ್ಣ
ಶಾಲಾ ಸಂಚಾಲಕ ಕೆ.ವಸಂತ ಸುವರ್ಣ ಪ್ರಾಸ್ತಾವಿಕ ಮಾತನಾಡಿ, ಸುಮಾರು 800 ಮಂದಿ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣದ ಉದ್ದೇಶದೊಂದಿಗೆ ಇಲ್ಲಿ ಕಲಿಯುತ್ತಿದ್ದಾರೆ. ಇದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉದ್ದೇಶ ಕೂಡ ಆಗಿದೆ. ತನ್ನಲ್ಲಿರುವ ಪ್ರತಿಭೆ ಹೊರಬರಲು ವರ್ಷದ ಹರ್ಷ ಒಂದು ವೇದಿಕೆಯಾಗಿದೆ. ಪೋಷಕರ ವಿಶ್ವಾಸದಿಂದ ಕನ್ನಡ ಮಾಧ್ಯಮ ಶಾಲೆ ಇವತ್ತು ಈ ಹಂತಕ್ಕೆ ಬಂದಿದೆ. ಎಲ್ಲಾ ಸಮಿತಿಗಳ ಪರಿಶ್ರಮದಿಂದ ಇವತ್ತು ಹಬ್ಬದ ವಾತಾವರಣ ನಿರ್ಮಾಣ ಆಗಿದೆ ಎಂದರು.

“ಸಾಹಿತ್ಯಮಿತ್ರ” ಬಿಡುಗಡೆ:
ಲೇಖನ, ಚಿತ್ರಕಲೆ, ಕಥೆ ಇವುಗಳನ್ನೊಳಗೊಂಡ ವಾರ್ಷಿಕ ಸಂಚಿಕೆಯನ್ನು ಅತಿಥಿಗಳು ಅನಾವರಣಗೊಳಿಸಿ ಬಿಡುಗಡೆಗೊಳಿಸಿದರು. ಸಂಚಿಕೆ ಸಂಪಾದಕಿ ಗೀತಾ ಸಂಚಿಕೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

ಸನ್ಮಾನ:
ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಕೃತಿ ಎಚ್., ಕಾವ್ಯಶ್ರೀ ಕೆ., ಸಂಧ್ಯಾ, ಸುಜನ್, ಶೀಲಾ ಎಸ್., ತೇಜಸ್ ಪಿ.ಕೆ., ಕೃತಿಕಾ ಜಿ., ಆದ್ಯಾ ಬಿ., ಕವನಶ್ರೀ, ಚಿಂತನ್ ಪಿ.ರವರನ್ನು ಅತಿಥಿಗಳು ಸನ್ಮಾನಿಸಿದರು. ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವನೀಶ್, ಭವಿಷ್, ಕೌಶಿಕ್ ಕೆ.ಎನ್., ಮನ್ವಿತ್ ಬಿ.ಎಲ್., ತಶ್ವಿತ್‌ರಾಜ್, ಸಿಂಚನಾ ಜಿ., ಹೇಮಂತ್ ಜೆ.ಕೆ., ಜನಿತ್, ಚಿನ್ಮಯ, ಅಕ್ಷಯ್ ಹಾಗೂ ಮಂಗಳದುರ್ಗರವರನ್ನು ಸನ್ಮಾನಿಸಲಾಯಿತು.

ಅಭಿನಂದನೆ:
ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕ ರಂಗಪ್ಪ, ಸೈನ್ಸ್ ಮಾಡೆಲ್ ತಯಾರಿಸಿ ಸಾಧನೆ ಮಾಡಿದ ಶಿಕ್ಷಕ ರೋಹಿತ್ ಹಾಗೂ ಕ್ಲೇಮಾಡೆಲಿಂಗ್‌ನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಕೀರ್ತನ್‌ರವರನ್ನು ಅಭಿನಂದಿಸಲಾಯಿತು. ಸಹಪಠ್ಯ ಚಟುವಟಿಕೆ ಹಾಗೂ ಗುಂಪು ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ದತ್ತಿನಿಧಿ ವಿತರಣೆ:
ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಪಲ್ಲವಿ, ಆಶಿತ್, ತೇಜಸ್‌ರವರಿಗೆ ದತ್ತಿನಿಧಿ ವಿತರಿಸಲಾಯಿತು.

ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆ ಕಾರ್ಯದರ್ಶಿ ರೂಪಲೇಖ ಆಳ್ವ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಂತ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಮೋದ್, ಶಾಲಾ ಸಹಜ ಸಂಜೀವಿನಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಅನ್ನಪೂರ್ಣ ಸಮಿತಿಯ ಸುಹಾಸ್ ಮಜಿ, ಪ್ರೌಢಶಾಲಾ ನಾಯಕ ಭವಿಷ್ ಜಿ. ಹಾಗೂ ಪ್ರಾಥಮಿಕ ಶಾಲಾ ನಾಯಕ ಮುಕುಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾರದಾ ಮಾತೆ, ಭಾರತ ಮಾತೆಯ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚಣೆ ಸಲ್ಲಿಸಿದರು.

ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ವಾರ್ಷಿಕ ಚಟುವಟಿಕೆಗಳ ವರದಿ ತಿಳಿಸಿ ಶಾಲಾಭಿವೃದ್ಧಿಗೆ ಶ್ರಮಿಸಿದ ಎಲ್ಲರನ್ನು ಸ್ಮರಿಸಿದರು. ಆಡಳಿತ ಮಂಡಳಿ ಖಜಾಂಜಿ ಅಶೋಕ್ ಕುಂಬ್ಲೆ, ಮುಖ್ಯಗುರು ಆಶಾ ಬೆಳ್ಳಾರೆ, ಸಂಚಾಲಕ ವಸಂತ ಸುವರ್ಣ ಸದಸ್ಯರಾದ ಸುಬ್ರಹ್ಮಣ್ಯ ಭಟ್, ವೀಣಾ ತಂತ್ರಿರವರು ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ರೇವತಿ, ಸೌಮ್ಯ ಮಾತಾಜಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ಎಂ. ಸ್ವಾಗತಿಸಿ ಆಶಾ ಮಾತಾಜಿ ವಂದಿಸಿದರು. ಶಿಕ್ಷಕರಾದ ಚಂದ್ರಶೇಖರ ಸುಳ್ಯಪದವು, ರಾಜೇಶ್ ನಂದಿಲ, ಗೌತಮಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

ಚಿನ್ನದ ಪದಕ ಪಡೆದ ವಿದ್ಯಾರ್ಥಿಯ ಪೋಷಕರಿಗೆ ಸನ್ಮಾನ:
ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಎತ್ತರಜಿಗಿತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದಲ್ಲಿ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯ ಹಿರಿಮೆಯನ್ನು ಮೆರೆದ ಎಂಟನೇ ತರಗತಿ ವಿದ್ಯಾರ್ಥಿನಿ ಕೀರ್ತಿ ಜಿ.ಎಂ.ರವರ ಪರವಾಗಿ ಅವರ ಪೋಷಕರಾದ ಮೋನಪ್ಪ ಗೌಡ ದಂಪತಿಯನ್ನು ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ:
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದ ಶ್ರಿಶ ನಿಡ್ವಣ್ಣಾಯ(612), ದ್ವಿತೀಯ ಸ್ಥಾನ ಪಡೆದ ಅವನಿ(611), ತೃತೀಯ ಸ್ಥಾನ ಪಡೆದ ಧಾತ್ರಿ(606), ಚಿನ್ಮಯ ಮಜಿ(605), ತನ್ಮಯಕೃಷ್ಣ ಜಿ.ಎಸ್.(601), ಸಿಂಚನಾ ಬಿ.(600)ರವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಅಗಮ್ಯ, ವೀಕ್ಷಾ, ಸಂಜನಾಜಗದೀಶ್, ಅಭೀಕ್ಷಾ ಜಿ., ಶ್ರಾವ್ಯ, ಲಿಖಿತಾ, ಕಾವೇರಿ, ಧನ್ವಿತ್ ಶೆಟ್ಟಿ, ಗಗನ್‌ದೀಪ್‌ರವರನ್ನು ಗೌರವಿಸಲಾಯಿತು.



LEAVE A REPLY

Please enter your comment!
Please enter your name here