
ಪುತ್ತೂರು: ತುಳುನಾಡಿನ ಕಾರಣಿಕ ಪುರುಷರಾದ ಶ್ರೀ ಕೋಟಿ ಚೆನ್ನಯರು ನೆಲೆಯಾಗಿ ಭಕ್ತರಿಗೆ ಅಭಯ ನೀಡುತ್ತಿರುವ ಹತ್ತು ಹಲವು ಕಾರಣಿಕತೆಯ ಗರಡಿಗಳಲ್ಲಿ ಒಂದಾಗಿರುವ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಗರಡಿಯಲ್ಲಿ ನೆಲೆಯಾಗಿ ಭಕ್ತರನ್ನು ಸಲಹುತ್ತಿರುವ ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವವು ದ.30ರಂದು ಅತ್ಯಂತ ವಿಜೃಂಭಣೆಯಿಂದ ಜರಗಲಿದೆ.

ಬೆಳಿಗ್ಗೆ ಶ್ರೀ ಗಣಪತಿ ಹೋಮ ನಡೆದು ಶ್ರೀ ನಾಗದೇವರ ತಂಬಿಲ, ಶ್ರೀ ಬ್ರಹ್ಮದೇವರ ತಂಬಿಲ ನಡೆದು ಶ್ರೀ ಕೋಟಿ ಚೆನ್ನಯರಿಗೆ ಕಲಶಾಭಿಷೇಕ ಹಾಗೂ ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆಯ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಅಭಿನಂದನಾ ಕಾರ್ಯಕ್ರಮ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ ಬಳಿಕ ಸುಡುಮದ್ದು ಪ್ರದರ್ಶನ ನಡೆಯಲಿದೆ. ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ (ಮಾಣಿ ಬಾಲೆ) ಗರಡಿ ಇಳಿಯುವುದು, ಮಧ್ಯರಾತ್ರಿ 1 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಬೆಳಗ್ಗಿನ ಜಾವ ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್(ಸುರ್ಯ ಹಾಕಿಕೊಳ್ಳುವುದು) ನಡೆದು ಬೈದೇರುಗಳ ಸೇಟ್(ಸುರ್ಯ ಹಾಕಿಕೊಳ್ಳುವುದು) ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಅರುಣೋದಯಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯೊಂದಿಗೆ ನೇಮೋತ್ಸವ ಪರಿಸಮಾಪ್ತಿಗೊಳ್ಳಲಿದೆ. ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗಿ ಗಂಧಪ್ರಸಾದ ಸ್ವೀಕರಿಸುವಂತೆ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪುದರ್ ದೀದಾಂಡ್’ ತುಳು ನಾಟಕ
ಮಧ್ಯರಾತ್ರಿ 1 ಗಂಟೆಗೆ ಸರಿಯಾಗಿ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಧರ್ಮಚಾವಡಿ ದೇಯಿ ಬೈದೆತಿ ಸಿರಿದೊಂಪದಡಿಯಲ್ಲಿ ಕಾಪಿಕಾಡ್, ವಾಮಂಜೂರು, ಬೋಳಾರ್ ಸಮಾಗಮದೊಂದಿಗೆ ಡಾ| ದೇವದಾಸ್ ಕಾಪಿಕಾಡ್ರವರ ಚಾಪರ್ಕ ಕಲಾವಿದರು ಅಭಿನಯಿಸುವ 57ನೇ ತುಳು ಹಾಸ್ಯಮಯ ನಾಟಕ ‘ ಪುದರ್ ದೀದಾಂಡ್’ ಪ್ರದರ್ಶನಗೊಳ್ಳಲಿದೆ. ಈ ವರ್ಷದ ಹೊಚ್ಚ ಹೊಸ ನಾಟಕ ಇದಾಗಿದೆ. ಕಲಾಭಿಮಾನಿಗಳಿಗೆ ಮುಕ್ತ ಪ್ರವೇಶ ಇದೆ. ಸಂಜೆ 6 ರಿಂದ ಸ್ಥಳೀಯ ಪ್ರತಿಭೆಗಳಿಂದ ‘ವಿವಿಧ ಸಾಂಸ್ಕೃತಿಕ ವೈವಿಧ್ಯ’ ನಡೆಯಲಿದೆ.
ಶಾಸಕರಿಗೆ ಅಭಿನಂದನೆ
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದೆ.
ಬೈದೇರುಗಳ ಜಾತ್ರೋತ್ಸವ, ಅನ್ನಸಂತರ್ಪಣೆ
ರಾಮಜಾಲು ಗರಡಿಯ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವಕ್ಕೆ ಊರಪರವೂರ ಭಕ್ತಾಧಿಗಳು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇದು ರಾಮಜಾಲು ಬೈದೇರುಗಳ ಜಾತ್ರೋತ್ಸವ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಪ್ರತಿ ವರ್ಷ 10 ಸಾವಿರಕ್ಕಿಂತ ಅಧಿಕ ಭಕ್ತಾಧಿಗಳು ಸೇರುತ್ತಿದ್ದು 5 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ. ರಾಮಜಾಲು ಗರಡಿ ಸೇರಿದಂತೆ ಪರ್ಪುಂಜ ಪೇಟೆ ಬಂಟಿಂಗ್ಸ್, ವಿವಿಧ ಆಕರ್ಷಕ ಲೈಟಿಂಗ್ಸ್ನಿಂದ ಸಂಪೂರ್ಣ ಅಲಂಕೃತಗೊಂಡು ಜಾತ್ರೋತ್ಸವದ ಸಂಭ್ರಮ ಎದ್ದು ಕಾಣುತ್ತದೆ.