ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಹೆಚ್ಚುವರಿ ಜಾಗ ಸ್ವಾಧೀನ- ಸೂಕ್ತ ಪರಿಹಾರ ನೀಡದೇ ಕಾಮಗಾರಿಗೆ ಆಕ್ಷೇಪ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಸ್ವಾಧೀನ ಪಡಿಸಿಕೊಂಡ ಜಾಗವನ್ನಲ್ಲದೇ, ನನಗೆ ಸೇರಿದ ಇನ್ನೂ ಹೆಚ್ಚುವರಿ ಜಾಗದಲ್ಲಿ ಕೂಡಾ ಕಾಮಗಾರಿ ನಡೆಸುತ್ತಿದ್ದು, ಇದರಲ್ಲಿದ್ದ ತೆಂಗಿನ ಮರಗಳನ್ನು ನಾಶ ಪಡಿಸಿದ್ದಾರೆ ಎಂದು ಆರೋಪಿಸಿರುವ ಕೇಶವ ಗೌಡ ರಂಗಾಜೆ, ಹೆಚ್ಚುವರಿ ಜಾಗಕ್ಕೆ ಸೂಕ್ತ ಪರಿಹಾರ ನೀಡದ ಹೊರತು, ಮುಂದಕ್ಕೆ ಇಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ತನ್ನ ಜಾಗಕ್ಕೆ ರಿಬ್ಬನ್ ಟೇಪ್‌ನ ಬೇಲಿ ಮಾಡಿ, ಫಲಕ ಅಳವಡಿಸಿದ್ದಾರೆ.


ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಮನವಿ ನೀಡಿರುವ ಕೇಶವ ರಂಗಾಜೆಯವರು, ಇಲ್ಲಿನ ಕೂಟೇಲು ಬಳಿ ಸರ್ವೇ ನಂಬರ್ 54/2ಬಿ1ರಲ್ಲಿ ತನ್ನ ತಾಯಿಯ ಹೆಸರಿನಲ್ಲಿ 30 ಸೆಂಟ್ಸ್ ಜಾಗವಿದ್ದು, ಅದರ ಅನುಭೋಗಕ್ಕೆ ನಾನು ತಾಯಿಯಿಂದ ಪವರ್ ಆಫ್ ಅಟಾರ್ನಿ ಪಡೆದುಕೊಂಡಿದ್ದೇನೆ. ಇದರಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಈಗಾಗಲೇ 19 ಸೆಂಟ್ಸ್ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಣ್ಣ ಮೊತ್ತದ ಪರಿಹಾರ ನೀಡಿ ವಶಪಡಿಸಿಕೊಂಡಿದ್ದಾರೆ. ಉಳಿದ 11 ಸೆಂಟ್ಸ್ ಜಾಗದಲ್ಲಿ ಆರು ಮುಕ್ಕಾಲು ಸೆಂಟ್ಸ್ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತನ್ನ ಗಮನಕ್ಕೆ ಬಾರದಂತೆ ವಶಪಡಿಸಿಕೊಂಡು ಅದರಲ್ಲಿದ್ದ ಐದು ತೆಂಗಿನ ಮರಗಳನ್ನು ನಾಶಪಡಿಸಿದ್ದಲ್ಲದೆ, ಅಲ್ಲಿ ಕಾಮಗಾರಿ ನಡೆಸಿದ್ದಾರೆ. ಇದಕ್ಕೆ ನನಗೆ ಯಾವುದೇ ಪರಿಹಾರ ನೀಡಿಲ್ಲ. ಆದ್ದರಿಂದ ಆರು ಮುಕ್ಕಾಲು ಸೆಂಟ್ಸ್ ಜಾಗಕ್ಕೆ ಹಾಗೂ ಐದು ತೆಂಗಿನ ಮರಗಳಿಗೆ ಈಗಿನ ಸರಕಾರಿ ಮೌಲ್ಯದ ಪ್ರಕಾರ ಸೂಕ್ತ ಪರಿಹಾರವನ್ನು ನೀಡಬೇಕು. ಇಲ್ಲದಿದ್ದಲ್ಲಿ ಇಲ್ಲಿ ಮುಂದಿನ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಈ ಜಾಗದ ಸುತ್ತಲೂ ರಿಬ್ಬನ್ ಟೇಪ್‌ನ ಬೇಲಿ ಹಾಕಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವಶಕ್ಕೆ ಪಡೆದಿರುವ ಹೆಚ್ಚುವರಿ ಜಾಗಕ್ಕೆ ಸೂಕ್ತ ಪರಿಹಾರ ನೀಡದ ಹೊರತು, ಮುಂದಕ್ಕೆ ಇಲ್ಲಿ ಯಾವುದೇ ಕಾಮಗಾರಿ ನಡೆಸಬಾರದು ಎಂದು ಫಲಕವನ್ನು ಅಳವಡಿಸಿದ್ದಾರೆ.

LEAVE A REPLY

Please enter your comment!
Please enter your name here