12 ಸ್ಥಾನಕ್ಕೆ 24 ಅಭ್ಯರ್ಥಿಗಳು: ಬಿಜೆಪಿ,ಕಾಂಗ್ರೆಸ್ ಬೆಂಬಲಿತರ ನಡುವೆ ನೇರ ಸ್ಪರ್ಧೆ
ಪುತ್ತೂರು: ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆಗಾಗಿ ದ.30ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ 12 ಸ್ಥಾನಗಳಿಗೆ ಒಟ್ಟು 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಐವತ್ತು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಇದೇ ಪ್ರಥಮ ಬಾರಿ ಚುನಾವಣೆ ಏರ್ಪಟ್ಟಿದೆ. 50 ವರ್ಷಗಳಲ್ಲಿ ನಿರಂತರವಾಗಿ ಬಿಜೆಪಿ ಬೆಂಬಲಿತರು ಅಧಿಕಾರ ನಡೆಸಿದ್ದ ಸಹಕಾರ ಸಂಘದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಸಾಮಾನ್ಯ ಕ್ಷೇತ್ರದಿಂದ 7 ಅಭ್ಯರ್ಥಿಗಳು ಚುನಾಯಿತರಾಗಬೇಕಿದ್ದು ಒಟ್ಟು 14 ಮಂದಿ ಅಂತಿಮ ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಶೋಕ್ ಗೌಡ ಮೇಗಿನಹಿತ್ತಿಲು, ಕೆ. ಚಂದ್ರಶೇಖರ ರೈ ಕೆದಿಕಂಡೆಗುತ್ತು, ಚಂದ್ರಶೇಖರ ಗೌಡ ಬದಿನಾರು, ಚೆನ್ನಪ್ಪ ಗೌಡ ನಿಡ್ಯ, ಭುಜಂಗ ಶೆಟ್ಟಿ ಪಾದೆ, ಲೀಲಾಧರ ಗೌಡ ಉಳಿತ್ತಡ್ಕ, ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಎಲ್ಯಣ್ಣ ಗೌಡ ಮೇಲಿನಹಿತ್ತಿಲು, ಜಗನ್ನಾಥ ಶೆಟ್ಟಿ ನಡುಮನೆ, ಜಾನಕಿ ಸಿ. ಗೌಡ ಪಿಲಿಗುಂಡ, ದಯಾನಂದ ಪೂಜಾರಿ ಪಲ್ಲತ್ತಾರು, ಪ್ರಹ್ಲಾದ ಶೆಟ್ಟಿ ಮಠಂತಬೆಟ್ಟು, ರತ್ನವರ್ಮ ಆಳ್ವ ಮಿತ್ತಳಿಕೆ ಮತ್ತು ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ನಡುವೆ ಸಾಮಾನ್ಯ ಕ್ಷೇತ್ರದ ಆಯ್ಕೆಗಾಗಿ ಸ್ಪರ್ಧೆ ಏರ್ಪಟ್ಟಿದೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಿಂದ ಓರ್ವರು ಆಯ್ಕೆಯಾಗಬೇಕಿದ್ದು ಈರ್ವರು ಕಣದಲ್ಲಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಾಬು ಆಚಾರ್ಯ ಕೊಂಬಕೋಡಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇವತಿ ವಿ. ಪೂಜಾರಿ ಡೆಕ್ಕಾಜೆ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಕ್ಷೇತ್ರದಿಂದ ಓರ್ವರು ಆಯ್ಕೆಯಾಗಬೇಕಿದ್ದು ಈರ್ವರು ಅಂತಿಮ ಕಣದಲ್ಲಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೇಶವ ಗೌಡ ಬರೆಮೇಲು ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವದಾಸ ಗೌಡ ಉಳಿತ್ತಡ್ಕ ನಡುವೆ ನೇರ ಸ್ಪರ್ಧೆ ನಡೆಯಲಿದೆ. ಮಹಿಳಾ ಮೀಸಲು ಸ್ಥಾನದಿಂದ ಈರ್ವರು ಚುನಾಯಿತರಾಗಬೇಕಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಯಂತಿ ಶೀನಪ್ಪ ಪೂಜಾರಿ ಪರನೀರು, ರೇಣುಕಾ ಮುರಳೀಧರ ರೈ ಎಂ., ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ ಮತ್ತು ರಂಜಿನಿ ಜಿ. ಪೂಜಾರಿ ಆಚಾರಿಪಾಲು ಕಣದಲ್ಲಿದ್ದಾರೆ. ಪರಿಶಿಷ್ಟ ಪಂಗಡ ಸ್ಥಾನದಿಂದ ಓರ್ವರು ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಲೀಲಾವತಿ ಪರಬಪಾಲು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೀರಪ್ಪ ನಾಯ್ಕ ಪರಬಪಾಲು ನಡುವೆ ಸ್ಪರ್ಧೆ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈಯವರ ತವರು ಗ್ರಾಮದಲ್ಲಿ ನಡೆಯಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯ ಫಲಿತಾಂಶ ಕುತೂಹಲ ಸೃಷ್ಠಿಸಿದೆ.
156 ಮತದಾರರು
ಒಟ್ಟು 12 ಸ್ಥಾನಗಳ ಆಯ್ಕೆಗಾಗಿ 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ನಡೆಯಲಿದ್ದು ಒಟ್ಟು 156 ಮಂದಿ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ದ.30ರಂದು ಮತದಾನ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ರಿಟರ್ನಿಂಗ್ ಅಧಿಕಾರಿಯಾಗಿ ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಕಾರ್ಯ ನಿರ್ವಹಿಸುತ್ತಿದ್ದಾರೆ.
ಪರಿಶಿಷ್ಟ ಜಾತಿಯಿಂದ ಅಭ್ಯರ್ಥಿ ಇಲ್ಲ!
ಪರಿಶಿಷ್ಟ ಜಾತಿ ಸ್ಥಾನದಿಂದ ಓರ್ವರು ಆಯ್ಕೆಯಾಗಬೇಕಿದೆಯಾದರೂ ಈ ವಿಭಾಗದಿಂದ ಯಾರೂ ಸದಸ್ಯರು ಇಲ್ಲದ ಕಾರಣ ಪರಿಶಿಷ್ಟ ಜಾತಿ ವಿಭಾಗಕ್ಕೆ ಚುನಾವಣೆ ನಡೆಯುವುದಿಲ್ಲ.