ಪುತ್ತೂರು:ಕುರಿಯ ಗ್ರಾಮದ ಅಮ್ಮುಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಡಿ.26ರಂದು ರಾತ್ರಿ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಿತು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಡಿ.26ರಂದು ನಡೆದ ಅರ್ಧ ಏಕಾಹ ಭಜನೆಯು ಬೆಳಿಗ್ಗೆ 6 ಗಂಟೆಗೆ ಪ್ರಾರಂಭಗೊಂಡಿತು. ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಗಣಹೋಮ, ನಾಗಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ಮಹಾವಿಷ್ಣುಮೂರ್ತಿ ದೇವರಿಗೆ ಪವಮಾನಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ದೇವರ ಪೇಟೆ ಸವಾರಿ ಹೊರಟು ಮೊಟ್ಟೆತ್ತಡ್ಕ ಚಾಮುಂಡೇಶ್ವರಿ ದೇವಸ್ಥಾನದ ತನಕ ಸಾಗಿ ಬಳಿಕ ದೇವಸ್ಥಾನಕ್ಕೆ ಹಿಂತಿರುಗಿ ದೇವರಿಗೆ ಕಲಶಾಭಿಷೇಕ, ಸಂಪ್ರೋಕ್ಷಣೆ, ವೈದಿಕ ಮಂತ್ರಾಕ್ಷತೆ, ತೀರ್ಥಪ್ರಸಾದ ನಡೆಯಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪ್ರಶಾಂತ್ ಪಕ್ಕಳ, ಉದ್ಯಮಿ ಶಿವರಾಮ ಆಳ್ವ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು.
ಇಂದು(ಡಿ.27) ರಾತ್ರಿ ದೈವಗಳ ನೇಮ:
ಡಿ.27ರಂದು ಸಂಜೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ, ಬಳಿಕ ದುರ್ಗಾಪೂಜೆ, ಕಾರ್ತಿಕ ಪೂಜೆ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಕ್ಷೇತ್ರದ ದೈವಗಳಾದ ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ಅಂಙನತ್ತಾಯ ಹಾಗೂ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.