ಯಶಸ್ಸಿನ ಹಿಂದಿರುವ ಶ್ರಮವನ್ನು ಗುರುತಿಸಬೇಕು: ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ವಿದ್ಯಾರ್ಥಿಗಳು ಉದ್ಯಮಿಗಳ ಯಶಸ್ಸನ್ನಷ್ಟೇ ನೋಡಬಾರದು. ಅದರ ಹಿಂದಿರುವ ಶ್ರಮವನ್ನೂ ಗುರುತಿಸಬೇಕು. ಕಠಿಣ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸಿದಾಗಲಷ್ಟೇ ಅದ್ಭುತ ಗೆಲುವು ನಮ್ಮದಾಗಲು ಸಾಧ್ಯ. ಉದ್ಯಮವನ್ನು ಸ್ಥಾಪಿಸಿ ನೂರಾರು ಜನರ ಬಾಳಿಗೆ ಬೆಳಕಾಗುವ ಉದ್ಯೋಗದಾತರಾಗಿ ವಿದ್ಯಾರ್ಥಿಗಳು ಬೆಳಗಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಕ್ಯಾಂಪಸ್‌ನಲ್ಲಿ ಆರಂಭಿಸಲಾದ ಅಂಬಿಕಾ ಸ್ಟೇಷನರಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ನಾವಿಂದು ವಿದೇಶೀ ವಸ್ತುಗಳಿಗೆ ಮಾರುಹೋಗುತ್ತಿದ್ದೇವೆ. ಆದರೆ ನಮ್ಮ ಬಳಿಯಲ್ಲಿಯೇ ಅತ್ಯುತ್ಕೃಷ್ಟವಾದ ಸ್ವದೇಶೀ ವಸ್ತುಗಳು ಉಪಲಬ್ದ ಇವೆ. ನಮ್ಮ ನೆಲದ ಉದ್ಯಮಗಳಿಗೆ, ವಸ್ತುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಎಲ್ಲೋ ವಿದೇಶದಲ್ಲಿರುವ ಕಂಪೆನಿಯೊಂದರ ವಸ್ತುವನ್ನು ಖರೀದಿಸುವ ಬದಲು ನಮ್ಮ ಕಣ್ಣ ಮುಂದಿರುವ, ನಮ್ಮದೇ ಜನ ಉತ್ಪಾದಿಸುವ ವಸ್ತುಗಳಿಗೆ, ಖಾದ್ಯಗಳಿಗೆ ಆದ್ಯತೆ ನೀಡಬೇಕು ಎಂದರು. ವಸ್ತುವನ್ನು ಖರೀದಿಸುವುದಷ್ಟೇ ಮುಖ್ಯವಲ್ಲ. ಅವುಗಳಿಂದ ಉಂಟಾಗುವ ಕಸ ಕಡ್ಡಿಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಾದದ್ದೂ ನಾಗರಿಕರ ಧರ್ಮ. ಬದುಕಿನ ಶಿಸ್ತು ಪ್ರತಿಯೊಂದು ಸಂದರ್ಭದಲ್ಲೂ ಅನಾವರಣಗೊಳ್ಳಬೇಕು. ವಿದ್ಯಾರ್ಥಿಗಳ ಉಪಯೋಗಕ್ಕಾಗಿ ನಿರ್ಮಾಣ ಮಾಡಲ್ಪಟ್ಟ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪುತ್ತೂರಿನ ಪಾಪ್ಯುಲರ್ ಸ್ವೀಟ್ಸ್ ಮಾಲಕ ನರೇಂದ್ರ ಕಾಮತ್ ಅಂಬಿಕಾ ಸ್ಟೇಷನರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರ ಸಹೋದರ ನಾಗೇಂದ್ರ ಕಾಮತ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ಯ ಉಪಾಧ್ಯಾಯ ಎಂ, ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಇಂಗ್ಲಿಷ್ ಉಪನ್ಯಾಸಕ ಆಶಿಕ್ ರಂಗನಾಥ್ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ವಂದಿಸಿದರು.