ನೆಲ್ಯಾಡಿ: ಜೀರ್ಣೋದ್ದಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ನೆರವು ನೀಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು 5 ಲಕ್ಷ ರೂ.ನೆರವಿನ ಮೊತ್ತದ ಚೆಕ್ ಅನ್ನು ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಸ್ತಾಂತರಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಾಧವ ಸರಳಾಯ ಅವರು, ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವರ ನೂತನ ದೇವಾಲಯದ ಜೀರ್ಣೋದ್ದಾರ ಕೆಲಸವು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಅವರ ಅಣತಿಯಂತೆ ಎರಡು ವರ್ಷದ ಹಿಂದೆ ಆರಂಭಿಸಲಾಯಿತು. ಡಾ. ಡಿ.ವೀರೇಂದ್ರ ಹೆಗ್ಗಡೆ ಅವರಲ್ಲಿ ವಿನಂತಿಸಿದಂತೆ ದೇವಸ್ಥಾನದ ಜೀರ್ಣೋದ್ದಾರಕ್ಕೆ ಪ್ರಸಾದ ರೂಪದಲ್ಲಿ ರೂ.5 ಲಕ್ಷವನ್ನು ದಯಪಾಲಿಸಿದ್ದಾರೆ. ನುಡಿದಂತೆ ನಡೆದ ಪರೋಪಕಾರಿ, ಶಿಕ್ಷಣ ತಜ್ಞ, ಹಲವಾರು ದೇವಾಲಯಗಳ ನಿರ್ಮಾಣದ ಹರಿಕಾರಕರಾಗಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ, ಆಡಳಿತ ಮಂಡಳಿ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರ ಪರವಾಗಿ ಕೃತಜ್ಞತೆ ಸಲ್ಲಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ವೇದಮೂರ್ತಿ ಅಮೃತರಾಜ್ ಸರಳಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ, ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಗೋಳಿತ್ತೊಟ್ಟು ಗ್ರಾ.ಪಂ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ, ಮಾಜಿ ಅಧ್ಯಕ್ಷ ಜನಾರ್ದನ ಗೌಡ, ಗೋಳಿತ್ತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಸದಸ್ಯರಾದ ಡಾ.ರಾಮಕೃಷ್ಣ ಭಟ್ ಅಂಜರ, ಸುಂದರ ಶೆಟ್ಟಿ ಪುರ, ಪ್ರವೀಣ್ ಶೆಟ್ಟಿ ಪುರ, ನೇಮಣ್ಣ ಪೂಜಾರಿ ಪಾಲೇರಿ, ನಾರಾಯಣ ಪೂಜಾರಿ ಡೆಂಬಲೆ, ವೇದಕುಮಾರ್ ಪುಲಾರ, ಜಯಂತ ಅಂಬರ್ಜೆ, ಸದಾನಂದ ಡೆಬ್ಬೇಲಿ, ವಿಶಾಲಾಕ್ಷಿ ಪಾಲೇರಿ, ಇಂದಿರಾ ನೋಣಯ್ಯ ಗೌಡ ಡೆಬ್ಬೇಲಿ, ಹೇಮಲತಾ ಡೆಬ್ಬೇಲಿ, ಕುಸುಮಾವತಿ ಡೆಬ್ಬೇಲಿ, ಶಾಲಿನಿಶೇಖರ ಪೂಜಾರಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.