ರಾಮನ ಸ್ಮರಣೆಯಿಂದ ಆತ್ಮವಿಶ್ವಾಸ ಸಾಧ್ಯ: ಡಾ. ಪ್ರಭಾಕರ ಭಟ್
ಉಪ್ಪಿನಂಗಡಿ: ಶ್ರೀ ರಾಮ ನಾಮ ಸ್ಮರಣೆಯೊಂದೇ ವ್ಯಕ್ತಿಯೋರ್ವನಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದರಿಂದ ವಿದ್ಯಾರ್ಥಿ ಜೀವನದಿಂದಲೇ ರಾಮ ಸ್ಮರಣೆಯೊಂದಿಗೆ ರಾಮನ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರದ ಸಂಪತ್ತನ್ನಾಗಿಸುವ ಕಾರ್ಯ ನಮ್ಮ ವಿದ್ಯಾ ಸಂಸ್ಥೆಗಳಿಂದ ನಡೆಯುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ರಾಮ ಶಾಲಾ ವಾರ್ಷೀಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬರುವ ಜನವರಿ 22 ರಂದು ಅಯೋಧ್ಯಾ ನಗರಿಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ನಡೆಯಲಿರುವ ವಿದ್ಯಾಮಾನ ಕೇವಲ ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವವೇ ಕಾತರದಿಂದ ನೋಡುವ ಪವಿತ್ರ ಕಾರ್ಯವಾಗಿದೆ. ಆ ದಿನ ಭಾರತವಾಸಿಗರಾದ ನಾವೆಲ್ಲಾ ದೀಪಗಳನ್ನು ಬೆಳಗಿಸಿ ರಾಮ ಸ್ಮರಣೆಯಲ್ಲಿ ಭಾಗವಹಿಸಬೇಕು. ಹಾಗೂ ಸ್ವದೇಶಿ, ಸ್ವಾವಲಂಬನೆ, ಸಂಸ್ಕೃತಿ ಯ ವಿಚಾರದಲ್ಲಿ ನಾವೆಲ್ಲಾ ಹೊಣೆಗಾರಿಕೆ ತೋರಬೇಕು ಎಂದರು.
ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿ, ಎಳೆಯ ಮಕ್ಕಳು ಮುಗ್ದ ಮನಸ್ಸಿನವರಾಗಿದ್ದು, ಕಪಟತನವನ್ನು ತಿಳಿಯುವುದಿಲ್ಲ. ಅಂತಹ ಮುಗ್ದ ಮನಸ್ಸಿನ ಮಕ್ಕಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಕಾಶ್ಮೀರದಲ್ಲಿನ ಕಾರ್ಯಾಚರಣೆಯೊಂದರಲ್ಲಿ ಐವರು ವಿದ್ರೋಹಿಗಳನ್ನು ಸದೆ ಬಡಿಯಲು ಸಾಧ್ಯವಾಗಿತ್ತು ಎನ್ನುವುದನ್ನು ವಿವರಿಸಿದರು.
ವೇದಿಕೆಯಲ್ಲಿ ಮೈಕ್ರೋ ಸಾಪ್ಟ್ ಇಂಡಿಯಾ ಬೆಂಗಳೂರು ಇಲ್ಲಿನ ಮೇನೇಜರ್ ಶ್ರೀ ವಿದ್ಯಾ ಬಿ.ವಿ., ಉದ್ಯಮಿ ಸತೀಶ್ ರೈ ಕಟ್ಟಾವು, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಡಾ. ಸುಧಾರಾವ್, ಶ್ರೀ ರಾಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅನಾವು, ಸಂಚಾಲಕ ಯು.ಜಿ. ರಾಧಾ , ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್ ಪಿ., ಮಾತೃ ಭಾರತಿ ಅಧ್ಯಕ್ಷೆ ಶ್ರೀಮತಿ ಸೌಮ್ಯ ವಾಸುದೇವ ಆಚಾರ್ಯ, ವಿದ್ಯಾರ್ಥಿ ನಾಯಕಿ ಚರಿಷ್ಮಾ ಪಿ.ಎಸ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಗೋವಿಂದ ಭಟ್, ಹರಿರಾಮಚಂದ್ರ, ಜಗದೀಶ್ ಶೆಟ್ಟಿ, ಗುಣಕರ್ ಅಗ್ನಾಡಿ, ಗಣೇಶ್ ಕುಲಾಲ್, ಜಯಂತ ಪೊರೋಳಿ, ಲೋಕೇಶ್ ಆಚಾರ್ಯ, ಶ್ರೀಕೃಷ್ಣ ಭಟ್ ಕೊಕ್ಕಡ, ಹರೀಶ್ ನಾಯಕ್, ಯತೀಶ್ ಶೆಟ್ಟಿ ಭಾಗವಹಿಸಿದ್ದರು.
ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರು ಶ್ರೀಮತಿ ವಿಮಲಾ ಸ್ವಾಗತಿಸಿದರು. ಪ್ರೌಢ ಶಾಲಾ ವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ. ವಂದಿಸಿದರು.