ಪೆರುವಾಜೆ : ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪೂರ್ವಭಾವಿ ಸಭೆ

0

ಸಾಂಪ್ರದಾಯಿಕ ಉಡುಗೆ ಧರಿಸಿ ರಥ ಎಳೆಯೋಣ : ಭಕ್ತರಿಗೆ ಮನವಿ

ಬೆಳ್ಳಾರೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಸರಿ ಸುಮಾರು 100 ವರ್ಷಗಳ ಬಳಿಕ ಬ್ರಹ್ಮರಥ ನಿರ್ಮಾಣಗೊಂಡಿದ್ದು ಜ.19 ರಂದು ಐತಿಹಾಸಿಕ ಬ್ರಹ್ಮರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ರಥ ಎಳೆಯುವ ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಭಕ್ತರು ಸಾಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಳ್ಳುವಂತೆ ಜಾತ್ರೆಯ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮನವಿ ಮಾಡಲಾಗಿದೆ.

ಜನವರಿ 16 ರಿಂದ 21 ರ ತನಕ ನಡೆಯಲಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯಲದ ವಾರ್ಷಿಕ ಜಾತ್ರೆ ಹಾಗೂ ರಥ ಸಮರ್ಪಣೆ ಕಾರ್ಯಕ್ಕೆ ಸಂಬಂಧಿಸಿ ಡಿ.31 ರಂದು ದೇವಾಲಯದಲ್ಲಿ ನಡೆದ ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮಾತನಾಡಿ, ದೇವರು ರಥವನ್ನು ಏರಿ ಆರಾಧನೆ ಪಡೆಯುವ ಕಾರಣ ರಥಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಹಾಗಾಗಿ ಅತ್ಯಂತ ಶುದ್ದತೆ, ಸಂಪ್ರದಾಯ ಬದ್ಧತೆಯಿಂದ ಭಕ್ತರು ಭಾಗವಹಿಸಬೇಕು. ಪಂಚೆ ಧಿರಿಸಿನಂತಹ ಸಾಂಪ್ರಾದಾಯಿಕ ವಸ್ತ್ರ ಧರಿಸಿ ಭಾಗವಹಿಸಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ ಎಂದರು.

ರಥ ಎಳೆಯಲು ಬ್ಯಾಡ್ಜ್: ಶತ ವರ್ಷಗಳ ಬಳಿಕ ರಥೋತ್ಸವ ನಡೆಯುವ ಕಾರಣ ಜಾತ್ರೆಯಲ್ಲಿ ಒಟ್ಟು 15 ರಿಂದ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಥ ಸಾಗುವ ರಥಬೀದಿ ಸೀಮಿತ ಸ್ಥಳಾವಕಾಶ ಹೊಂದಿರುವ ಕಾರಣ ನೂಕುನುಗ್ಗಲು ತಪ್ಪಿಸಲು ರಥ ಎಳೆಯಲು ನಿರ್ಧಿಷ್ಟ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಿ ಬ್ಯಾಡ್ಜ್ ಒದಗಿಸಲಾಗುವುದು, ರಥ ನಿರ್ಮಾಣದ ದಾನಿಗಳಿಗೂ ಅವಕಾಶ ನೀಡಲಾಗುವುದು, ರಥ ಎಳೆಯುವ ಸಂದರ್ಭದಲ್ಲಿ ಒಟ್ಟು ವ್ಯವಸ್ಥೆಯ ಹಿತದೃಷ್ಟಿಯಿಂದ ಸಂಘ ಸಂಸ್ಥೆಗಳ 50 ಕ್ಕೂ ಅಧಿಕ ಮಂದಿ ಬ್ರಹ್ಮರಥ ಎಳೆಯಲು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಪದ್ಮನಾಭ ಶೆಟ್ಟಿ ವಿವರಿಸಿದರು.

ಜ.16 : ರಥ ಸಮರ್ಪಣೆ, ಜ.19 : ಬ್ರಹ್ಮರಥೋತ್ಸವ: ಜ.15 ರಂದು ಸಂಜೆ ರಥ ಸಮರ್ಪಣೆಗೆ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ. ರಾತ್ರಿ ಉದ್ಭವ ಗಣಪತಿಗೆ ಮೂಡಪ್ಪ ಸೇವೆ, ಉದ್ಭವ ಜಲದುರ್ಗಾದೇವಿಗೆ ದೊಡ್ಡ ರಂಗಪೂಜೆ ನೆರವೇರಲಿದೆ. ಜ.16 ಕ್ಕೆ ಬೆಳಗ್ಗೆ ಮಹಾಗಣಪತಿ ಹೋಮ, ಬ್ರಹ್ಮರಥ ಶುದ್ಧಿ ಕಲಶ, ಶ್ರೀ ದೇವರಿಗೆ ಬ್ರಹ್ಮರಥ ಸಮರ್ಪಣೆ, ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ.ಜ.18 ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವ ನೆರವೇರಲಿದೆ. ಜ.19 ರಂದು ರಾತ್ರಿ ಪಲ್ಲಕ್ಕಿ ಉತ್ಸವ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆದು ಬಳಿಕ ಪಿಲಿಭೂತದ ಭಂಡಾರ ಬರಲಿದೆ. ಅದಾದ ನಂತರ ದೈವ-ದೇವರ ಮುಖಾಮುಖಿ ನಡೆದು ಕ್ಷೇತ್ರದ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ದೇವರು ರಥದಲ್ಲಿ ಆರೂಢರಾದ ಬಳಿಕ ಸಿಡಿಮದ್ದು ಪ್ರದರ್ಶನ ಇರಲಿದ್ದು ಈ ಬಾರಿ ಪೆರುವಾಜೆ ಬೆಡಿಯನ್ನು ಭಕ್ತರು ಕಣ್ತುಂಬಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಸೇವಾ ಕೌಂಟರ್:ಈ ತನಕ ಸುಮಾರು 400 ಕ್ಕೂ ಅಧಿಕ ಮಂದಿ ರಥಕ್ಕೆ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಈ ದಾನಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ನೀಡುವ ನಿಟ್ಟಿನಲ್ಲಿ ಎರಡು ಸೇವಾ ಕೌಂಟರ್ ತೆರೆದು ಅದಕ್ಕೆ ವ್ಯವಸ್ಥಾಪನ ಸಮಿತಿಯ ಉಸ್ತುವಾರಿಯಲ್ಲಿ ಸ್ವಯಂ ಸೇವಕರನ್ನು ನಿಯೋಜಿಸಲು ನಿರ್ಧರಿಸಲಾಯಿತು. ಭಾವೈಕ್ಯ ಮಹಿಳಾ ಮಂಡಲಕ್ಕೆ ಇದರ ಜವಾಬ್ದಾರಿ ನೀಡಲಾಯಿತು.

 ಸಂಘ ಸಂಸ್ಥೆಗಳು ಕೈ ಜೋಡಿಸಲು ವಿನಂತಿ: ಮಾಸ್ತಿಕಟ್ಟೆಯಿಂದ ಪೆರುವಾಜೆ ಪುದ್ಧೊಟ್ಟು ಜಳಕದ ಗುಂಡಿಯ ತನಕ ರಸ್ತೆಯ ಎರಡು ಬದಿಗಳಲ್ಲಿ ಅಲಂಕಾರ, ಅಲ್ಲಲ್ಲಿ ಬ್ಯಾನರ್ ಅಳವಡಿಕೆ, ಅನ್ನದಾನ ವಿಭಾಗದಲ್ಲಿ ಕಾರ್ಯನಿರ್ವಹಣೆ ಸೇರಿದಂತೆ ಜಾತ್ರೆಯು ಸುಸೂತ್ರವಾಗಿ ನೆರವೇರಲು ವಿವಿಧ ವಿಭಾಗದಲ್ಲಿ ಸಂಘ ಸಂಸ್ಥೆಗಳು ಸಹಕಾರ ನೀಡುವಂತೆ ಸಭೆಯಲ್ಲಿ ವಿನಂತಿ ಮಾಡಲಾಯಿತು.  

ಈ ಸಂದರ್ಭದಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ವ್ಯವಸ್ಥಾಪನ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ, ವ್ಯವಸ್ಥಾಪಕ ವಸಂತ ಪೆರುವಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮ ಯು ಪೆರುವಾಜೆ, ಸುನಿಲ್ ರೈ ಪೆರುವಾಜೆ, ಪ್ರೀತಂ ಶೆಟ್ಟಿ ಪೆರುವಾಜೆ, ರಜನೀಶ್ ಸವಣೂರು, ಶಿವಪ್ರಸಾದ್ ಪೆರುವಾಜೆ, ಕುಶಾಲಪ್ಪ ಮೊದಲಾದವರು ಸಲಹೆ ಸೂಚನೆ ನೀಡಿದರು. ವಾಸುದೇವ ಪೆರುವಾಜೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here