ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವುದೇ ನಿಜವಾದ ದೇಶಪ್ರೇಮ-ಯು.ಟಿ ಖಾದರ್
ಪುತ್ತೂರು: ಮಾರ್ಗದ ಬದಿಯಲ್ಲಿ ನಿಂತು ಭಾಷಣ ಮಾಡಿ ಯಾರನ್ನೋ ಬೈಯುವುದು ದೇಶ ಪ್ರೇಮವಲ್ಲ, ಬುಶ್ರಾ ಅಝೀಝ್‌ರವರಂತೆ ಶಿಕ್ಷಣ ಸಂಸ್ಥೆ ಕಟ್ಟಿ ಮಕ್ಕಳಿಗೆ ಶಿಕ್ಷಣ ನೀಡಿ ಸುಸಂಸ್ಕೃತರನ್ನಾಗಿ ಮಾಡುವುದೇ ನಿಜವಾದ ದೇಶ ಪ್ರೇಮ ಎಂದು ಸ್ಪೀಕರ್ ಯು.ಟಿ ಖಾದರ್ ಹೇಳಿದರು. ಡಿ.30ರಂದು ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ನಡೆದ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ’ದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಅವರು ಬೆಳೆಯುವುದಲ್ಲದೇ ಇಡೀ ಮನೆ, ಕುಟುಂಬ ಬೆಳಗುತ್ತದೆ, ಪೋಷಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲೇಬೇಕು ಎಂದು ಅವರು ಹೇಳಿದರು.
ಸಂಬಂಧಗಳನ್ನು ಬೆಸೆಯುವ ಶಿಕ್ಷಣದ ಅಗತ್ಯವಿದೆ-ಅಶೋಕ್ ರೈ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಮಾತನಾಡಿ, ಶಾಲೆಗಳಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ನೈತಿಕ ಶಿಕ್ಷಣ ಮಕ್ಕಳಿಗೆ ನೀಡುವ ಅನಿವಾರ್ಯತೆ ಕಾಲದ ಬೇಡಿಕೆಯಾಗಿದ್ದು ಕಲಿಕೆಯ ಜೊತೆ ಸಂಬಂಧಗಳ ಬಗೆಗಿನ ಅರಿವನ್ನು ಕೂಡಾ ಮಕ್ಕಳಿಗೆ ನೀಡಬೇಕಾದ ಅವಶ್ಯಕತೆಯಿದೆ, ಮಕ್ಕಳು ಸಣ್ಣ ಪ್ರಾಯದಲ್ಲೇ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಸಂಬಂಧಗಳನ್ನು ರೂಢಿಸಿಕೊಂಡರೆ ಮಾತ್ರ ಅವರು ಪಡೆದ ಶಿಕ್ಷಣಕ್ಕೆ ಅರ್ಥ ಬರಲು ಸಾಧ್ಯ, ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸಿ ಮಕ್ಕಳು ವಿದೇಶದಲ್ಲಿ ಕಾಲ ಕಳೆಯುವ ಅನೇಕ ಸನ್ನಿವೇಶಗಳು ಕಾಣುತ್ತಿದ್ದು ಇದು ನಾಗರಿಕ ಸಮಾಜದ ದುರಂತವಾಗಿದೆ ಎಂದು ಅವರು ಹೇಳಿದರು. ಬುಶ್ರಾ ವಿದ್ಯಾಸಂಸ್ಥೆಯು ಗ್ರಾಮೀಣ ಭಾಗದಲ್ಲಿದ್ದರು ಕೂಡಾ 400-500 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆಂದರೆ ಅದು ಸಣ್ಣ ವಿಷಯವಲ್ಲ, ಬುಶ್ರಾ ವಿದ್ಯಾಸಂಸ್ಥೆ ನಮ್ಮ ಪುತ್ತೂರಿಗೆ ಹೆಮ್ಮೆ ಎಂದು ಶಾಸಕ ಅಶೋಕ್ ರೈ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆ ಸರ್ವರ ದೇವಾಲಯ-ಒಡಿಯೂರು ಶ್ರೀ:
ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶಾಲೆ ಪ್ರಜ್ಞಾವಂತ ಪ್ರಜೆಗಳನ್ನು ಸೃಷ್ಟಿಸುವ ಕೇಂದ್ರವಾಗಿದ್ದು ಸರ್ವರ ದೇವಾಲಯವೂ ಆಗಿದೆ ಎಂದು ಹೇಳಿದರು. ನಾವು ಪ್ರತಿಯೊಬ್ಬರನ್ನು ಪ್ರೀತಿಸಬೇಕು, ಹೃದಯದಿಂದ ನಾವು ಇನ್ನೊಬ್ಬರ ಹತ್ತಿರ ಆಗಬೇಕು, ಸಾಮರಸ್ಯದ ಬದುಕು ನಮ್ಮದಾಗಬೇಕು ಎಂದು ಅವರು ಹೇಳಿದರು. ಬುಶ್ರಾ ಸಂಸ್ಥೆಯಲ್ಲಿ ಒಳ್ಳೆಯ ಆಡಳಿತ ಮತ್ತು ಶಿಕ್ಷಕ ವೃಂದದ ತಂಡ ಇರುವುದರಿಂದ ಇಲ್ಲಿ ಅಭಿವೃದ್ಧಿಯಾಗಿದೆ, ಬುಶ್ರಾ ಸಂಸ್ಥೆ ಈ ಭಾಗದಲ್ಲಿ ಶಿಕ್ಷಣದ ಜಾಗೃತಿ ಮೂಡಿಸಿದ್ದು ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಬುಶ್ರಾ ಅಝೀಝ್‌ರವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸ್ವಾಮೀಜಿ ಹೇಳಿದರು.
ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ-ಹನೀಫ್ ಹುದವಿ:
ಮಾಡನ್ನೂರು ನೂರುಲ್ ಹುದಾದ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಅವರು ಮಾತನಾಡಿ, 25 ವರ್ಷಗಳನ್ನು ಪೂರೈಸಿರುವ ಬುಶ್ರಾ ವಿದ್ಯಾಸಂಸ್ಥೆಯ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. ನಾವು ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಎಲ್ಲ ಧರ್ಮದವರೊಂದಿಗೆ ಸಹೋದರತೆ, ಭಾವೈಕ್ಯತೆಯಿಂದ ಇದ್ದಾಗ ಸಮಾಜ ಸುಂದರವಾಗಿರುತ್ತದೆ ಎಂದು ಅವರು ಹೇಳಿದರು.
ಸರ್ವರ ಸಹಕಾರ ಇದ್ದಾಗ ಸಂಸ್ಥೆ ಬೆಳಗುತ್ತದೆ-ಪ್ರಕಾಶ್ ಮೊಂತೆರೋ:
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾದರ್ ಆಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ, ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬ ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಲಾ ಧರ್ಮದವರು ಒಟ್ಟಿಗೆ ಇರುವುದೇ ಸಂತಸದ ವಿಚಾರವಾಗಿದ್ದು ಈ ವಿದ್ಯಾಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು ಇದು ಸಾಕು ಎಂದು ಹೇಳಿದರು. ಎಲ್ಲರೂ ಹೋಗಿ ಒಟ್ಟಿಗೆ ಕಲಿಯುವ ಕೇಂದ್ರವೆಂದರೆ ಅದು ವಿದ್ಯಾಕೇಂದ್ರ, ಎಲ್ಲಾ ಜಾತಿ, ಧರ್ಮದವರ ಸಹಕಾರ ಇದ್ದಾಗ ಆ ಸಂಸ್ಥೆ ಬೆಳಗುತ್ತದೆ ಎಂದು ಅವರು ಹೇಳಿದರು.
ಎಲ್ಲರನ್ನೂ ಸೇರಿಸಿಕೊಂಡು ಒಳ್ಳೆಯ ಸಂದೇಶ ನೀಡಿದ್ದೀರಿ-ಡಾ.ಯು.ಪಿ ಶಿವಾನಂದ:
ಸನ್ಮಾನ ಸ್ವೀಕರಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ ಶಿವಾನಂದರವರು ಮಾತನಾಡಿ, ಬುಶ್ರಾ ವಿದ್ಯಾಸಂಸ್ಥೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಎಲ್ಲರನ್ನು ಸೇರಿಸಿಕೊಳ್ಳುವ ಮೂಲಕ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರಿಗೂ ಅವಕಾಶ ನೀಡುವ ಮೂಲಕ ನಿಮ್ಮ ಮನಸ್ಸಿನಲ್ಲಿ ಎಲ್ಲರಿಗೆ ಸ್ಥಾನ ಕೊಟ್ಟಿದ್ದೀರಿ, ಈ ಸಂಸ್ಥೆ ಮುಂದಕ್ಕೂ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಅವರು ಹಾರೈಸಿದರು.
ಬುಶ್ರಾ ಅಝೀಝ್ ಸಿಂಹದಂತ ವ್ಯಕ್ತಿ-ಕಡಮಜಲು:
ಸನ್ಮಾನ ಸ್ವೀಕರಿಸಿದ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಅಝೀಝ್ ಬುಶ್ರಾ ಅವರು ಸಿಂಹದಂತ ಸಧೃಢ ವ್ಯಕ್ತಿಯಾಗಿದ್ದು ಅನರ್ಘ್ಯ ರತ್ನವಾಗಿದ್ದಾರೆ, ಇಂತಹ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದ ಅವರ ಬದುಕು ಸಾರ್ಥಕಗೊಂಡಿದೆ ಎಂದು ಹೇಳಿದರು.
ಸನ್ಮಾನಿತಗೊಂಡ ಪದ್ಮಶ್ರೀ ಹರೇಕಳ ಹಾಜಬ್ಬ, ಪದ್ಮಶ್ರೀ ಗಿರೀಶ್ ಭಾರಧ್ವಾಜ್, ಕ್ಯಾ.ಧನಂಜಯ ನಾಯ್ತೊಟ್ಟು, ಡಾ.ಆರ್.ಕೆ ನಾಯರ್, ಜೀವನ್ ರಾಂ ಸುಳ್ಯ, ದೀಕ್ಷಿತ್ ಬದಿಕಾನರವರು ಮಾತನಾಡಿದರು.
ನಮ್ಮ ಚಿಂತನೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ-ಖಲಂದರ್ ಶಾಫಿ:
ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸದಸ್ಯ ಖಲಂದರ್ ಶಾಫಿ ಮಾತನಾಡಿ ನಮ್ಮ ಚಿಂತನೆ ಮತ್ತು ಗುರಿಯಿಂದ ಮಾತ್ರ ಸಾಧನೆ ಸಾಧ್ಯ, ಸಣ್ಣ ಐಡಿಯಾ ಕೂಡಾ ಸಾಧನೆಯ ಮೆಟ್ಟಿಲನ್ನೇರಿಸಬಲ್ಲದು, ಹಾಗಾಗಿ ಹೊಸ ಹೊಸ ಚಿಂತನೆಯನ್ನು ಮಕ್ಕಳು ಮಾಡುತ್ತಿರಬೇಕು ಎಂದು ಅವರು ಹೇಳಿದರು. ಅಂಕ ಮಾತ್ರ ಮುಖ್ಯವಲ್ಲ, ತಂದೆ ತಾಯಿಗೆ ಹೆಸರು ತರುವ ಮಕ್ಕಳಾಗಿ ನೀವು ಸಾಧನೆ ಮಾಡಿ ಎಂದು ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
ಅಝೀಝ್‌ರವರು ಬಾಸ್ ಅಲ್ಲ, ಶಿಕ್ಷಕ-ಜಬ್ಬಾರ್:
ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸದಸ್ಯ ಜಬ್ಬಾರ್ ಮಾತನಾಡಿ ಅಬ್ದುಲ್ ಅಝೀಝ್ ಅವರು ಬುಶ್ರಾ ವಿದ್ಯಾಸಂಸ್ಥೆಯ ಬಾಸ್ ಅಲ್ಲ, ಅವರೂ ಕೂಡಾ ಓರ್ವ ಶಿಕ್ಷಕರೇ ಆಗಿದ್ದಾರೆ, ಏಕೆಂದರೆ ಅವರು ಸಂಸ್ಥೆಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕ ಎಂದರೆ ತಪ್ಪಲ್ಲ ಎಂದು ಹೇಳಿದರು. ಅಂಕದಲ್ಲಿ ಅಲ್ಪ ಕಮ್ಮಿಯೋ, ಜಾಸ್ತಿಯೋ ಎನ್ನುವುದಕ್ಕಿಂತ ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿಸುವ ಶಿಕ್ಷಣದ ಮೌಲ್ಯವನ್ನು ನೀವೆಲ್ಲರೂ ತಿಳಿದುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿದೆ-ಹೇಮನಾಥ ಶೆಟ್ಟಿ:
ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬುಶ್ರಾ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಕ್ರಾಂತಿ ಮಾಡಿದ್ದು ನನ್ನ ಮಕ್ಕಳು ಕೂಡಾ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ ಎಂದು ಹೇಳಿದರು. ಡಿಗ್ನಿಟಿ ಗ್ರೂಪ್‌ನ ನಿರ್ದೇಶಕ ಬಾತಿಶ ಕನಕಮಜಲು ಮಾತನಾಡಿದರು.
ಎಲ್ಲರ ಪ್ರೋತ್ಸಾಹದಿಂದ ಸಂಸ್ಥೆ ಮುನ್ನಡೆಯುತ್ತಿದೆ-ಬುಶ್ರಾ ಅಝೀಝ್ :
ಅಧ್ಯಕ್ಷತೆ ವಹಿಸಿದ್ದ ಬುಶ್ರಾ ವಿದ್ಯಾಸಂಸ್ಥೆಯ ಅಧ್ಯಕ್ಷ ಅಬ್ದುಲ್ ಅಝೀಝ್ ಬುಶ್ರಾ ಮಾತನಾಡಿ ನಿಮ್ಮೆಲ್ಲರ ಪ್ರೋತ್ಸಾಹದಿಂದ ನಮ್ಮ ಸಂಸ್ಥೆ ಯಶಸ್ವಿಯಾಗಿ ೨೫ ವರ್ಷಗಳನ್ನು ಪೂರೈಸಿದೆ, ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಮುಂದಕ್ಕೆ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಗುರುತಿಸುವಂತಾಗಲಿ ಎಂದು ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆ-ದತ್ತಿನಿಧಿ ವಿತರಣೆ-ಗೌರವಾರ್ಪಣೆ-ಸಾಂಸ್ಕೃತಿಕ ವೈಭವ:
ಬುಶ್ರಾ ಸಂಸ್ಥೆ ಹೊರತಂದ ಸ್ಮರಣ ಸಂಚಿಕೆಯನ್ನು ಒಡಿಯೂರುಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆ ಮಾಡಿದರು. ಬಳಿಕ ವಿದ್ಯಾರ್ಥಿಗಳಿಗೆ ದತ್ತಿನಿಧಿ ವಿತರಿಸಲಾಯಿತು. ಅಲ್ಲದೇ ಶಿಕ್ಷಕ ವೃಂದದವರನ್ನು, ಸಂಸ್ಥೆಯ ಎಲ್ಲ ಸಿಬ್ಬಂದಿಗಳನ್ನು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಿರಾ ಅಬ್ದುಲ್ ಖಾದರ್ ಹಾಜಿಯವರು ಸ್ಮರಣಿಕೆ ಹಾಗೂ ಗಿಫ್ಟ್ ನೀಡಿ ಅಭಿನಂದಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಯಶ್ವಿತ್ ಹಾಗೂ ಖಾದರ್ ಹಾಜಿಗೆ ಸನ್ಮಾನ:
ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪತ್ರಕರ್ತ ಯಶ್ವಿತ್ ಕಾಳಮ್ಮನೆ ಹಾಗೂ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಿರಾ ಅಬ್ದುಲ್ ಖಾದರ್ ಹಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಯಶ್ವಿತ್ ಕಾಳಮ್ಮನೆ ಹಾಗೂ ಹಿರಾ ಅಬ್ದುಲ್ ಖಾದರ್ ಹಾಜಿಯವರು ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಶಾಲಾ ಶೈಕ್ಷಣಿಕ ಸಲಹೆಗಾರ ಕೃಷ್ಣಪ್ರಸಾದ್ ಕೆ, ವಿದ್ಯಾರ್ಥಿ ನಾಯಕ ರಿಝ್ವಾನ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕರಾದ ನೂರುದ್ದೀನ್ ಹಾಗೂ ಬದ್ರುದ್ದೀನ್‌ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ವಿದ್ಯಾ ಬುಶ್ರಾ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ ವಾರ್ಷಿಕ ವರದಿ ವಾಚಿಸಿದರು. ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸದಸ್ಯರಾದ ಮೋಹಿಶಾ ನೂರುದ್ದೀನ್ ಸ್ವಾಗತಿಸಿದರು. ಅಝೀಮಾ ವಂದಿಸಿದರು. ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸರ್ವ ಧರ್ಮ ಪ್ರಾರ್ಥನೆ:
ಬೆಳಿಗ್ಗೆ ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಅಝೀಝ್‌ರವರು ಧ್ವಜಾರೋಹಣ ನೆರವೇರಿಸಿದ ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು.ಶ್ರೀ ರಾಮಕೃಷ್ಣ ಪ್ರೌಢ ಶಾಲಾ ದೈ.ಶಿ.ಶಿಕ್ಷಕಿ ಸುನಿತಾ ಎಂ, ಪಾಪೆಮಜಲು ಶಾಲಾ ಶಿಕ್ಷಕಿ ಮೇಬಲ್ ಡಿಸೋಜಾ, ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸದಸ್ಯೆ ಆಯಶತ್ ಶಮೀಮಾ ಉಪಸ್ಥಿತಿಯಲ್ಲಿ ಪ್ರಾರ್ಥನೆ ನಡೆಯಿತು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಪದ್ಮಶ್ರೀ ಹರೇಕಳ ಹಾಜಬ್ಬ(ಶಿಕ್ಷಣ, ಸಮಾಜಸೇವೆ), ಪದ್ಮಶ್ರೀ ಗಿರೀಶ್ ಭಾರಧ್ವಾಜ್(ತೂಗುಸೇತುವೆಗಳ ಸರದಾರ), ಡಾ.ಯು.ಪಿ ಶಿವಾನಂದ(ಪತ್ರಿಕೋದ್ಯಮ), ಕ್ಯಾ.ಧನಂಜಯ ನಾಯ್ತೊಟ್ಟು(ನಿವೃತ್ತ ಯೋಧ), ಡಾ.ಆರ್.ಕೆ ನಾಯರ್(ಪರಿಸರ), ಜೀವನ್ ರಾಂ ಸುಳ್ಯ(ರಂಗಭೂಮಿ), ದೀಕ್ಷಿತ್ ಬದಿಕಾನ(ಯುವ ಉದ್ಯಮಿ) ಹಾಗೂ ಕಡಮಜಲ ಸುಭಾಷ್ ರೈ(ಕೃಷಿ ಕ್ಷೇತ್ರ) ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬುಶ್ರಾ ವಿದ್ಯಾಸಂಸ್ಥೆಯ ಸಿಬ್ಬಂದಿ ರಶೀದ್ ಬೆಳ್ಳಾರೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.
ಬುಶ್ರಾ ಅಝೀಝ್ ‘ರೋಲ್ ಮಾಡೆಲ್’
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಎಲ್ಲ ಗಣ್ಯರು ಶಾಲಾ ಸಂಸ್ಥಾಪಕರಾದ ಅಬ್ದುಲ್ ಅಝೀಝ್ ಬುಶ್ರಾ ಅವರ ಬಗ್ಗೆ ಗುಣಗಾನ ಮಾಡಿದರು. ಕಾವು ಎಂಬ ಗ್ರಾಮೀಣ ಭಾಗದಲ್ಲಿ ೨೫ ವರ್ಷಗಳ ಹಿಂದೆ ಶಾಲೆ ಮಾಡುವ ಕನಸು ಕಂಡ ಅವರ ಕನಸು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ಏಳುಬೀಳುಗಳ ಮಧ್ಯೆ ಬುಶ್ರಾ ಶಿಕ್ಷಣ ಸಂಸ್ಥೆಯನ್ನು ಗಟ್ಟಿಯಾಗಿ ಮುನ್ನಡೆಸಿದ ಅಝೀಝ್‌ರವರು ನಾಗರಿಕ ಸಮಾಜಕ್ಕೆ ರೋಲ್ ಮಾಡೆಲ್ ಆಗಿದ್ದಾರೆ ಎಂದು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದರು.