ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ

0

ಪುತ್ತೂರು: ದೇಹದ ಅಂಗಗಳ ಸಕ್ರೀಯತೆಗೆ ಮಾತ್ರೆಗಳನ್ನು ಪಡೆಯುವುದು ಇವತ್ತು ಸಾಮಾನ್ಯವಾಗಿದೆ. ನಿತ್ಯ ವ್ಯಾಯಾಮ, ಕ್ರೀಡೆಯಿಂದ ದೇಹದ ಅಂಗಾಂಗಗಳು ಸಕ್ರೀಯವಾಗಿ ಕೆಲಸ ಮಾಡಲು ಸಾಧ್ಯ ಎಂದು ದ.ಕ.ಜಿಲ್ಲಾ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ| ಬಾಲಕೃಷ್ಣ ನಾಯ್ಕ ಅವರು ಹೇಳಿದರು.


ಪುತ್ತೂರು ತಾಲೂಕು ಮರಾಟಿ ಸಮಾಜ ಸೇವಾ ಸಂಘ, ಮರಾಟಿ ಯುವ ವೇದಿಕೆ, ಮರಾಟಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಡಿ.31ರಂದು ನಡೆದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತು ಬಿಪಿ, ಶುಗರ್, ಗ್ಯಾಸ್ಟಿಕ್, ಹಸಿವು, ಜೀರ್ಣ ಮತ್ತು ನಿದ್ರೆಗೆ ಮಾತ್ರೆಗಳ ಪ್ರಭಾವ ಜಾಸ್ತಿಯಾಗಿದೆ. ನಮ್ಮ ಅಂಗಾಂಗಗಳಿಗೆ ಸಾಕಷ್ಟು ಅಗತ್ಯವಾದ ವ್ಯಾಯಾಮ ಕೊಡದೆ ಹೋದಾಗ ಮಾತ್ರೆ ಕಡೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಳವೆಯಿಂದಲೇ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ವ್ಯಾಯಾಮ, ಕ್ರೀಡೆಗಳು ಅಗತ್ಯ ಎಂದ ಡಾ| ಬಾಲಕೃಷ್ಣ ನಾಯ್ಕ ಅವರು ಸಂಪತ್ತಿಗಿಂತ ಆರೋಗ್ಯ ಮುಖ್ಯ ಎಂಬುದನ್ನು ಮನಗಾನಬೇಕು. ದೈಹಿಕ ಚಟುವಟಿಕೆಗಳು ಮಕ್ಕಳಿಗೂ ಸಿಗಬೇಕು. ಆದರೆ ಪ್ರಸ್ತುತ ಕಾಲದಲ್ಲಿ ಕೆಲವೊಂದು ಶಾಲೆಗಳಲ್ಲಿ ಆಟದ ಮೈದಾನವೇ ಇರುವುದಿಲ್ಲ. ಮಕ್ಕಳಿಗೆ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ವಾಹನ ಸೌಕರ್ಯ ಇರುತ್ತದೆ. ಹಾಗಾಗಿ ಅವರ ದೈಹಿಕ ಚಟುವಟಿಕೆ ಕಡಿಮೆ ಆಗಿದೆ. ಮೊಬೈಲ್ ಆಸಕ್ತಿ ಹೆಚ್ಚಿದೆ. ಇದು ಅಪಾಯಕಾರಿ ಮತ್ತು ಮಕ್ಕಳಿಗೆ ಹೊರಗಿನ ದೈಹಿಕ ಆಟ ಅತ್ಯಗತ್ಯ. ಭೌತಿಕವಾಗಿ ಓದಿನಲ್ಲಿ ಹೆಚ್ಚು ಅಂಕಗಳಿಸಿದರೆ ಸಾಲದು ಕ್ರೀಡಾ ಸ್ಪೂರ್ತಿಯೂ ಇರಬೇಕೆಂದು ಹೇಳಿದರು.


ಕ್ರೀಡೆಯಿಂದ ಟೀಮ್ ವರ್ಕ್ ಬೆಳೆಯುತ್ತದೆ: ಪುತ್ತೂರು ಯೂನಿಯನ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಸುರೇಶ್ ನಾಯ್ಕ ಅವರು ಮಾತನಾಡಿ, ಕ್ರೀಡಾಕೂಟ ದೈನಂದಿನ ಕೆಲಸದ ಒತ್ತಡವನ್ನು ನಿವಾರಣೆ ಮಾಡುತ್ತದೆ ಮತ್ತು ಕ್ರೀಡೆಯಿಂದ ಟೀಮ್ ವರ್ಕ್ ಬೆಳೆಯುತ್ತದೆ. ಇದು ನಮ್ಮ ಸಂಘಟನೆಗೆ ಬಹುಪಯೋಗಿ ಎಂದರು.
ಎಲ್ಲಾ ಸಮಾಜದೊಂದಿಗೆ ಸಹಬಾಳ್ವೆ ತೋರಿಸಿ ಮುನ್ನಡೆಯುವ: ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಪೂವಪ್ಪ ನಾಯ್ಕ ಆಲಂಕಾರು ಅವರು ಮಾತನಾಡಿ, ಕ್ರೀಡೆಯನ್ನು ಆರೋಗ್ಯ ಪೂರ್ಣವಾಗಿ ಆಡಬೇಕು. ಈ ನಿಟ್ಟಿನಲ್ಲಿ ಸಂಘದ ಬೆಳವಣಿಗೆಗೆ ತ್ಯಾಗ, ಸಮಯವನ್ನು ಕೊಟ್ಟು ಸಂಘ ಮುನ್ನಡೆಸುವ. ಇತರ ಸಮಾಜದೊಂದಿಗೆ ಸಹಬಾಳ್ವೆ ತೋರಿಸಿ ಮುನ್ನಡೆಯೋಣ ಎಂದರು.


50ನೇ ವರ್ಷಕ್ಕೆ ದೊಡ್ಡ ಸಮಾವೇಶಕ್ಕೆ ಈಗಲೇ ಸಿದ್ಧತೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಮಂಜುನಾಥ್ ಎನ್.ಎಸ್ ಅವರು ಮಾತನಾಡಿ, ಈ ಕ್ರೀಡಾಕೂಟ ನಮ್ಮ ಭಾವನಾತ್ಮಕ ಸಂಬಂಧವನ್ನು ಹೆಣೆಯಲು ನಡೆಯುವ ಕ್ರೀಡಾಕೂಟವಾಗಿದೆ. ಕಳೆದ 47 ವರ್ಷಗಳಲ್ಲಿ ನಮ್ಮ ಹಿರಿಯರು ಕಟ್ಟಿದ ಸಂಘವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಪಾತ್ರ ಬಹಳ ಮುಖ್ಯ. ಮುಂದಿನ ಮೂರು ವರ್ಷದಲ್ಲಿ ಸಂಘ 50ನೇ ವರ್ಷ ಆಚರಿಸಲಿದೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ದೊಡ್ಡ ಮಟ್ಟದ ಸುಮಾರು 25ಸಾವಿರ ಸಮಾಜ ಬಾಂಧವರನ್ನು ಸೇರಿಸಿ ಸಮಾವೇಶ ಮಾಡಲಿದ್ದೇವೆ. ಈ ಕುರಿತು ಈಗಾಗಲೇ ಸಂಘದಲ್ಲಿ ಮಾತುಕತೆ ನಡೆಯುತ್ತಿದ್ದು, ಪ್ರತಿ ತಿಂಗಳು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಾಟಿ ಸಮುದಾಯ ಉನ್ನತ ಮಟ್ಟಕ್ಕೆ ಏರಬೇಕು. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಹತ್ತಾರು ಮಂದಿ ಅಧಿಕಾರಿ ವರ್ಗದವರು ಸೇರಿಕೊಳ್ಳಬೇಕು. ಇದರ ಜೊತೆಗೆ ರಾಜಕೀಯದಲ್ಲೂ ನಮ್ಮ ಮಕ್ಕಳು ಮುಂದೆ ಬರಬೇಕು. ಈಗಾಗಲೇ ಗ್ರಾ.ಪಂ.ಗಳಲ್ಲಿ ನಮ್ಮ ಸಮಾಜದ ಅನೇಕ ಮಂದಿ ಅಧ್ಯಕ್ಷ, ಸದಸ್ಯರಿದ್ದಾರೆ. ಅವರಿಗೆ ಮುಂದಿನ ದಿನ ಏನಾದರೂ ತೊಂದರೆ ಆದರೆ ಇಡೀ ಸಮುದಾಯ ಅವರಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಪಿಡಬ್ಲ್ಯೂಡಿ ಕ್ಲಾಸ್ 1 ಗುತ್ತಿಗೆದಾರ ಬಾಲಕೃಷ್ಣ ನಾಯ್ಕ ಕಪ್ಪೆಕೆರೆ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾಕೂಟದ ಸಂಚಾಲಕ ಮಹಾಲಿಂಗ ನಾಯ್ಕ ನರಿಮೊಗರು ಸ್ವಾಗತಿಸಿ ಮಾತನಾಡಿ, ಸುಮಾರು 47 ವರ್ಷದ ಹಿಂದಿನಿಂದಲೇ ಆರಂಭಗೊಂಡಿರುವ ಮರಾಟಿ ಸಮಾಜ ಸೇವಾ ಸಂಘ ಪ್ರತಿ ವರ್ಷ ಕ್ರೀಡಾಕೂಟ, ಧಾರ್ಮಿಕ ಸಹಿತ ಹಲವು ಕಾರ್ಯಕ್ರಮ ನಡೆಸುತ್ತಾ ಬರುತ್ತಿದೆ ಎಂದರು.


ಸನ್ಮಾನ:
ಹೊಸಪೇಟೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾಗಿ ಕರ್ತವ್ಯಕ್ಕೆ ಹಾಜರಾಗಿರುವ ಬಾಲಕೃಷ್ಣ ನಾಯ್ಕ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾ ಸಂಚಾಲಕ ಮಹಾಲಿಂಗ ನಾಯ್ಕ ಅವರು ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭ ತೀರ್ಪುಗಾರರಾದ ಜಗದೀಶ್, ಯತೀಶ್, ಲೋಕನಾಥ್, ಜಯರಾಮ ಬಲ್ನಾಡು ಅವರಿಗೆ ಕ್ರೀಡಾ ಕ್ಯಾಪ್ ಅನ್ನು ಅತಿಥಿಗಳು ಹಸ್ತಾಂತರಿಸಿದರು.


ಮರಾಟಿ ಯುವ ವೇದಿಕೆಯ ಗಂಗಾಧರ್ ಕೌಡಿಚ್ಚಾರು, ಮಹಿಳಾ ವೇದಿಕೆ ಅಧ್ಯಕ್ಷೆ ಚೇತನಾ, ಮರಾಟಿ ಸಂಘದ ಖಜಾಂಚಿ ಬಾಬು ನಾಯ್ಕ ತೆಂಕಿಲ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಅರಿಯಡ್ಕ ಗ್ರಾ.ಪಂ ಸದಸ್ಯೆ ವಿನೀತಾ ಕೆ.ವಿ, ಬಡಗನ್ನೂರು ಗ್ರಾ.ಪಂ ಸದಸ್ಯರಾದ ಹೇಮಾವತಿ, ಕುಮಾರ, ಹಿರೇಬಂಡಾರಿ ಗ್ರಾ.ಪಂ ಸದಸ್ಯೆ ಭವಾನಿ, ಪಾಣಾಜೆ ಗ್ರಾ.ಪಂ. ಸದಸ್ಯ ಮೋಹನ್ ನಾಯ್ಕ್, ಆರ್ಯಾಪು ಗ್ರಾ.ಪಂ ಸದಸ್ಯೆ ನಳಿನಿ, ಕೊಡಿಪ್ಪಾಡಿ ಗ್ರಾ.ಪಂ ಸದಸ್ಯೆ ಚಂದ್ರಾವತಿ, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯೆ ಪವಿತ್ರಾ, ಬಲ್ನಾಡು ಗ್ರಾ.ಪಂ ಉಪಾಧ್ಯಕ್ಷ ರವಿಚಂದ್ರ, ಸದಸ್ಯೆಯರಾದ ಶೋಭಾ, ಸುಂದರಿ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಎನ್ ಸಹಿತ ಹಲವಾರು ಮಂದಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾಮ್ಮಾಯಿ ಸಹಕಾರ ಸಂಘದ ಅಧ್ಯಕ್ಷ ಶೀನ ನಾಯ್ಕ, ಪೂವಪ್ಪ ನಾಯ್ಕ, ಸುಂದರ್ ನಾಯ್ಕ ಬಪ್ಪಳಿಗೆ, ಯು.ಕೆ ನಾಯ್ಕ್, ಯಮುನಾ, ಲೋಕನಾಥ್, ಕೃಷ್ಣ ನಾಯ್ಕ್, ಪೂವಪ್ಪ ನಾಯ್ಕ, ಲಲಿತಾ, ರಾಮಚಂದ್ರ ಅವರು ಅತಿಥಿಗಳನ್ನು ಗೌರವಿಸಿದರು. ಅಶ್ವಿತಾ ಮತ್ತು ಜಸ್ಮಿತಾ ಪ್ರಾರ್ಥಿಸಿದರು. ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಬಲ್ನಾಡು ವಂದಿಸಿದರು. ಗಿರೀಶ್ ನಾಯ್ಕ ಸೊರಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದು ಸಂಜೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here