ಪುತ್ತೂರು:ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟವಾಗಿರುವ, ಲಂಚ ಭ್ರಷ್ಟಾಚಾರದ ಕುರಿತು ತಾನು ಕಂಡದ್ದನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿರುವ ಆಶೀಷ್ ಎಂಬ ವಿದ್ಯಾರ್ಥಿಯ ಪತ್ರವನ್ನು ರಾಜ್ಯದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಸ್ ಅವರು ತನ್ನ ಫೇಸ್ ಬುಕ್ ಪೇಜ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.ಮಾತ್ರವಲ್ಲದೆ,ಈ ಬಾಲಕನ ಪತ್ರ ಸರಕಾರಿ ಯಂತ್ರಕ್ಕೆ ಒಂದು ಸವಾಲು ಎಂದು ಹೇಳಿಕೊಂಡಿದ್ದಾರೆ.
ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಯ 14ನೇ ಪುಟದಲ್ಲಿ, ಗುತ್ತಿಗಾರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಅಶೀಷ್ ಎಂಬವರ ಪತ್ರ ಪ್ರಕಟವಾಗಿದೆ.ತನ್ನ ತಂದೆ ಕೃಷಿ ಇಲಾಖೆಯಿಂದ ಪೈಪ್ ತರುವಾಗ 500 ರೂ.ಲಂಚ ಕೊಟ್ಟ ಕುರಿತು ತಂದೆಯನ್ನು ಪ್ರಶ್ನಿಸಿದ ಮತ್ತು ಅವರ ತಂದೆಯಿಂದ ಸಿಕ್ಕಿದ ಉತ್ತರ ಸಮೇತವಾಗಿ ಆಶೀಷ್ ಅವರು ಪತ್ರಿಕೆಗೆ ಪತ್ರ ಬರೆದು,ಲಂಚ ಭ್ರಷ್ಟಾಚಾರಕ್ಕೆ ಸಾವಿಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.ಆಶೀಷ್ ಬರೆದ ಪತ್ರ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಟಕವಾಗಿದ್ದು ಇದರ ಕಟ್ಟಿಂಗ್‌ನ್ನು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಟ್ಯಾಗ್ ಮಾಡಿ, ಈ ಬಾಲಕನ ಪತ್ರ ಸರಕಾರಿ ಯಂತ್ರಕ್ಕೆ ಒಂದು ಸವಾಲು ಎಂದು ಹಾಕಿ ಅದರ ಎದುರು ಆಶ್ಚರ್ಯಕರ ಚಿಹ್ನೆ ಹಾಕಿದ್ದಾರೆ.ಸುರೇಶ್ ಕುಮಾರ್ ಅವರು ಫೇಸ್ ಬುಕ್ ಖಾತೆಯಲ್ಲಿ ಪತ್ರಿಕೆ ಕಟ್ಟಿಂಗ್ ಹಾಕಿದ್ದೇ ತಡ ಒಂದು ಗಂಟೆಯೊಳಗೆ 415 ಮಂದಿ ಅದನ್ನು ನೋಡಿದ್ದು, 92 ಮಂದಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.53 ಮಂದಿ ಅದನ್ನು ಶೇರ್ ಮಾಡಿದ್ದಾರೆ.ಈ ನಡುವೆ ಹಲವು ಮಂದಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಚರ್ಚೆ ಮಾಡುತ್ತಿದ್ದಾರೆ.ಒಟ್ಟಿನಲ್ಲಿ ಲಂಚ,ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನದ ಜೊತೆಗೆ ಎಲ್ಲೆಡೆ ಜಾಗೃತಿಯಾಗುತ್ತಿದೆ ಎನ್ನುವುದಕ್ಕೆ ಈ ಘಟನೆಯೊಂದು ನಿದರ್ಶನವಾಗಿದೆ ಎಂದರೂ ತಪ್ಪಾಗದು.