ʼಸೈಬರ್ ಅಪರಾಧಗಳ ಬಗ್ಗೆ ಹೆಚ್ಚಿನ ನಿಗಾ’ – ಪಶ್ಚಿಮ ವಲಯ ಡಿಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಅಮಿತ್ ಸಿಂಗ್

0

ಮಂಗಳೂರು/ಪುತ್ತೂರು: ಪಶ್ಚಿಮ ವಲಯದ ನೂತನ ಡಿಐಜಿಪಿಯಾಗಿ ಅಮಿತ್ ಸಿಂಗ್ ಅವರು ಜ.1ರಂದು ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಪಶ್ಚಿಮ ವಲಯ ಐಜಿಪಿಯಾಗಿದ್ದ ಡಾ|ಚಂದ್ರಗುಪ್ತ ಅವರು ಬೆಂಗಳೂರು ಸಿಸಿಬಿಗೆ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಮಿತ್ ಸಿಂಗ್‌ರವರು ಪ್ರಸ್ತುತ ವಿವಿಧ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿರುವ, ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ದ ಪೊಲೀಸರು ಕಠಿಣ ಕಾನೂನು ಕ್ರಮಕೈಗೊಳ್ಳಲಿದ್ದಾರೆ. ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ನಿಗಾ ವಹಿಸಲಾಗುವುದು. ಡ್ರಗ್ಸ್,ಕೋಮುವಾದ ಸಹಿತ ಅಪರಾಧ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಸೈಬರ್ ಅಪರಾಧ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗ ಒಂದು ರೀತಿಯ ಸವಾಲಾಗಿದ್ದು ಇದರ ವಿರುದ್ಧ ಕಾರ್ಯಾಚರಣೆಗೆ ನಮ್ಮ ತಂಡವಿದೆ. ಇಕ್ಯುಪ್‌ಮೆಂಟ್ ಇದೆ. ಪೊಲೀಸರು ಇದನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಮರಳಿ ತವರಿಗೆ ಬಂದ ಅನುಭವ: ಸೆಂಟ್ರಲ್ ಕೇಡರ್‌ನಲ್ಲಿ ಕೆಲಸ ಮಾಡುವ ಅನುಭವ ವಿಭಿನ್ನವಾಗಿದ್ದು, ಇದೀಗ ಮತ್ತೆ ಮರಳಿ ಈ ಹುದ್ದೆಗೆ ಬಂದಿರುವುದು ಮರಳಿ ತವರಿಗೆ ಬಂದ ಅನುಭವ ಎಂದು ಹೇಳಿದ ಅಮಿತ್ ಸಿಂಗ್ ಅವರು, ಮಂಗಳೂರಿಗೆ ಹೋಲಿಸಿದರೆ 10 ವರ್ಷಗಳ ಹಿಂದಿನ ಅನುಭವಕ್ಕೂ ಈಗಿನ ವ್ಯವಸ್ಥೆಗೂ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ.ಅಪರಾಧ ಪ್ರಕರಣಗಳೂ ಸಾಕಷ್ಟು ಬದಲಾಗಿದ್ದು, ಇಂದು ಕಳ್ಳತನ ಸೈಬರ್ ಕ್ರೈಂ ನಂತಹ ವೈಟ್ ಕಾಲರ್ ಅಪರಾಧಗಳು ಹೆಚ್ಚಿವೆ. ಇಲ್ಲಿನ ಎಸ್‌ಪಿ, ಇನ್ಸ್‌ಪೆಕ್ಟರ್‌ಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಡ್ರಗ್ಸ್ ಹಾವಳಿ ಮೂಲ ಪತ್ತೆ ಹಚ್ಚಬೇಕಿದೆ: ಇದೀಗ ವ್ಯಾಪಕವಾಗಿ ಡ್ರಗ್ಸ್ ಹಾವಳಿ ಇದೆ.ಮುಖ್ಯವಾಗಿ ನಗರ ಭಾಗದಲ್ಲಿ ಡ್ರಗ್ಸ್ ದೊಡ್ಡ ಸಮಸ್ಯೆಯಾಗುತ್ತಿದೆ.ಡ್ರಗ್ಸ್ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇದರ ಬಗ್ಗೆ ಜಾಗೃತವಾಗಿದ್ದು ಕ್ರಮ ವಹಿಸಲಾಗುವುದು ಎಂದು ಅಮಿತ್ ಸಿಂಗ್ ಹೇಳಿದರು.ಕೋಮವಾದಕ್ಕೆ ಸಂಬಂಽಸಿದ ಘಟನೆಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ.ಅನೈತಿಕ ಪೊಲೀಸ್‌ಗಿರಿ ವಿರುದ್ಧವೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಸೈಬರ್ ಕ್ರೈಂ ಬಗ್ಗೆ ಜನರೂ ಜಾಗೃತರಾಗಿರಬೇಕು: ಸೈಬರ್ ಕ್ರೈಂಗಳು ಹೆಚ್ಚುತ್ತಿರುವ ಬಗ್ಗೆ ಜನರು ಕೂಡ ಜಾಗೃತರಾಗಿರಬೇಕು. ಇಂಟೆಲಿಜೆನ್ಸಿ ವಿಭಾಗವನ್ನು ಅಲರ್ಟ್ ಆಗಿಸಿ ಯಾವುದೇ ಕೋಮು ಸಂಬಂಧ ಘಟನೆಗಳನ್ನು ನಿಯಂತ್ರಿಸಲಾಗುವುದು. ತಲೆಮರೆಸಿಕೊಂಡಿರುವವರ ಪತ್ತೆಗೆ ಕೂಡ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.

ಪುತ್ತೂರು ಎಎಸ್ಪಿಯಾಗಿದ್ದರು
2007 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಮಿತ್ ಸಿಂಗ್ ಅವರು ಈ ಹಿಂದೆ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.2009ರಿಂದ 2011ರ ಅವಧಿಯಲ್ಲಿ ಅವರು ಎಎಸ್ಪಿಯಾಗಿ ಮಂಗಳೂರು, ಪುತ್ತೂರಿನಲ್ಲಿ ಕೆಲಸ ಮಾಡಿದ್ದರು. 2011ರಿಂದ ಹಾಸನ ಎಸ್ಪಿಯಾಗಿ, ಗುಲ್ಬರ್ಗ, ಬೆಂಗಳೂರು ಗ್ರಾಮಾಂತರದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಇವರು ನಾಲ್ಕು ವರ್ಷ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಯಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಅರುಣ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here