ಮಂಗಳೂರು(ಪುತ್ತೂರು): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜ ಎಂಬಲ್ಲಿ ದಿಗ್ಬಂಧನದಲ್ಲಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಲ್ಲಿನ ಶ್ರೀಪತಿ ಹೆಬ್ಬಾರ್ ಎಂಬವರ ಪತ್ನಿ ಆಶಾ ಎಂಬವರನ್ನು ಮನೆಯ ಪಕ್ಕದ ಸಿಮೆಂಟ್ ಶೀಟ್ ಅಳವಡಿಸಿದ ಕಿಟಕಿ, ವಿದ್ಯುತ್ ಬೆಳಕು ಇಲ್ಲದ ಒಂದೇ ಬಾಗಿಲಿನ ಕೋಣೆಯಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಅನಾಮದೇಯ ಕರೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಹಿಳೆಯನ್ನು ದಿಗ್ಬಂಧನದಿಂದ ಮುಕ್ತಗೊಳಿಸಿದ್ದಾರೆ. ಎದ್ದು ನಡೆಯಲಾಗದ ಮತ್ತು ಮಾತನಾಡಲಾಗದ ಸ್ಥಿತಿಯಲ್ಲಿರುವ ಸಂತ್ರಸ್ಥೆ ಆಶಾ ಅವರಿಗೆ ಸ್ನಾನ ಮಾಡಿಸಿ ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶ್ರೀಪತಿ ಹೆಬ್ಬಾರ್ ಅಂತರ್ಜಾತಿ ವಿವಾಹವಾಗಿದ್ದು ಆಶಾ ಅವರ ಪತ್ನಿ ಎನ್ನಲಾಗಿದೆ. ಹೆಬ್ಬಾರ್ ಅವರ ಮನೆಯಲ್ಲಿದ್ದ ಮಹಿಳೆಯನ್ನು ಅಧಿಕಾರಿಗಳು ವಿಚಾರಿಸಿದಾಗ ಆಕೆ ದರ್ಪದಿಂದ ಉತ್ತರಿಸಿದ್ದಾರೆ. ಅಧಿಕಾರಿಗಳು ಶ್ರೀಪತಿ ಹೆಬ್ಬಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದು ಹೆಬ್ಬಾರ್ ಕರೆ ಸ್ವೀಕರಿಸಿಲ್ಲ. ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.